ಶಹಾಬಾದ್‌(ಜು.26):ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಪುಗೂಡಿ ಥಳಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಶಹಾಬಾದ್‌ ನಗರದಲ್ಲಿ ನಡೆದಿದ್ದು, ಕೊಲೆ ಪ್ರಕರಣ ದಾಖಲಾಗಿದೆ.

ವಾಡಿ ಪಟ್ಟಣದ ಪೀಲಕಮ್ಮಾ ಬಡಾವಣೆ ನಿವಾಸಿ ಜಗದೀಶ ಮಲ್ಲಿಕಾರ್ಜುನ (32) ಮೃತ ವ್ಯಕ್ತಿ. ಶುಕ್ರವಾರ ಬೆಳಗ್ಗೆ ವಾಡಿ ಪಟ್ಟಣದಿಂದ ಶಹಾಬಾದ್‌ ನಗರಕ್ಕೆ ಮಹಿಳೆಯೊಂದಿಗೆ ಬಂದಿದ್ದ ಆತನನ್ನು ಕೋಮಿನ ಮಹಿಳೆಯ ಗುಂಪು ಹಲ್ಲೆ ನಡೆಸಿದೆ. ತೀವ್ರ ಗಾಯಗೊಂಡು ವಾಡಿ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.

ಮಗಳ ಮುಂದೆಯೇ ಜರ್ನಲಿಸ್ಟ್ ಕೊಲೆ, ದೂರು ಕೊಟ್ಟಿದ್ದೆ ತಪ್ಪಾಯ್ತಾ?

ಜಗದೀಶ ತಮ್ಮದೆ ಬಡಾವಣೆಯ ಆಶಾ ಬೇಗಂ(39) ಮಹಿಳೆಯೊಂದಿಗೆ ಬೈಕ್‌ ಮೇಲೆ ಶಹಾಬಾದ್‌ ನಗರಕ್ಕೆ ಬಂದಿದ್ದಾನೆ. ಇದನ್ನು ಕಂಡ ಮಹಿಳೆಯ ಕೋಮಿನ ಒಂದು ಗುಂಪು ಜೇವರ್ಗಿ ರಸ್ತೆಯ ಅಶೋಕ ನಗರ ಜಂಪ್‌ ಬಳಿ ತಡೆದು, ಜಗದೀಶನನ್ನು ಸಮೀಪದ ಕೋಣೆಯೊಂದರಲ್ಲಿ ಎಳೆದೊಯ್ದು, ಮನಬಂದಂತೆ ಥಳಿಸಿದ್ದಾರೆ. ಇದರಿಂದ ತೀವ್ರ ಪೆಟ್ಟು ತಿಂದು, ಥಳಿಸಿದವರ ನಿರ್ದೇಶನದಂತೆ ವಾಡಿಯಲ್ಲಿಯ ತಮ್ಮ ಮಿತ್ರರಿಗೆ ಮೊಬೈಲ್‌ ಮೂಲಕ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾನೆ. ಆತನ ಮಿತ್ರರು ವಾಹನೊಂದಿಗೆ ಶಹಾಬಾದ್‌ಗೆ ಆಗಮಿಸಿ, ಆತನನ್ನು ವಾಡಿಯ ಎರಡು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.

ಮೃತ ಜಗದೀಶನಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದು, ಹೆಂಡತಿ ಗಂಡನನ್ನು ಬಿಟ್ಟು ತವರಿಗೆ ಹೋಗಿದ್ದಾಳೆ ಎನ್ನಲಾಗಿದೆ. ಆತನೊಂದಿಗೆ ಬೈಕ್‌ ಮೇಲೆ ಹೋದ ಮಹಿಳೆಗೆ ಮದುವೆಯಾಗಿದ್ದು, ಓರ್ವ ಮಗನಿದ್ದಾನೆ. ವಿಷಯ ತಿಳಿದು ಶಹಾಬಾದ್‌ ನಗರಕ್ಕೆ ಜಿಲ್ಲಾ ಅಪರ ಪೊಲೀಸ್‌ ವರಿಷ್ಠಾಧಿಕಾರಿ, ವಾಡಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬಾದ್‌ ಪೊಲೀಸರು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.