ಬೆಂಗಳೂರು(ಅ.21): ಎಟಿಎಂ ಕೇಂದ್ರಗಳ ಬಳಿ ಹಿರಿಯ ನಾಗರಿಕರಿಗೆ ಹಣ ಪಡೆಯಲು ಸಹಾಯ ಮಾಡುವ ನೆಪದಲ್ಲಿ ಡೆಬಿಟ್‌ ಕಾರ್ಡ್‌ ಬದಲಾಯಿಸಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಶಿರಾ ತಾಲೂಕಿನ ಬುಕ್ಕಾಪಟ್ಟಣದ ಅರುಣ್‌ ಕುಮಾರ್‌ ಬಂಧಿತ. ಆರೋಪಿಯಿಂದ ನಗದು, ಮೊಬೈಲ್‌ ಹಾಗೂ ಚಿನ್ನಾಭರಣ ಸೇರಿದಂತೆ 1.6 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಹೆಸರುಘಟ್ಟರಸ್ತೆಯ ಎಟಿಎಂ ಬಳಿ ವಂಚನೆ ನಡೆದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ವೆಂಕಟೇಗೌಡ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

4 ತಿಂಗಳ ಮಗುವಿಗೆ ಆಭರಣ ಖರೀದಿಸಿದ್ದ

ಶಿರಾ ತಾಲೂಕಿನ ಅರುಣ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ನಾಲ್ಕೈದು ವರ್ಷಗಳಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಆತನ ಮೇಲೆ ಶಿರಾ ಹಾಗೂ ಮಧುಗಿರಿ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಕೃತ್ಯಗಳಲ್ಲಿ ಬಂಧಿತನಾಗಿ ಬಳಿಕ ಆತ ಜಾಮೀನು ಪಡೆದು ಹೊರಬಂದು ದುಷ್ಕೃತ್ಯಗಳಲ್ಲಿ ಮುಂದುವರೆಸಿದ್ದ. ಎರಡು ವರ್ಷಗಳ ಹಿಂದೆ ವಿವಾಹವಾಗಿ ಅರುಣ್‌, ತನ್ನ ಪತ್ನಿ ಮತ್ತು ಮಗು ಜತೆ ಶಿರಾದಲ್ಲಿ ನೆಲೆಸಿದ್ದಾನೆ. ಜೇಬಿನಲ್ಲಿ ಹಣ ಖಾಲಿಯಾದಾಗ ನಗರಕ್ಕೆ ಬಂದು ವಂಚನೆ ಕೃತ್ಯ ಎಸಗಿ ಆರೋಪಿ ಮರಳುತ್ತಿದ್ದ. ಹೀಗೆ ಹಿರಿಯ ನಾಗರಿಕರೊಬ್ಬರ ಡೆಬಿಟ್‌ ಕಾರ್ಡ್‌ ಬಳಸಿ ತನ್ನ ನಾಲ್ಕು ತಿಂಗಳ ಮಗುವಿಗೆ ಆತ ಆಭರಣ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಡ್ಜ್‌ಗೆ ಸ್ಫೋಟಕ ಬೆದರಿಕೆ ಹಾಕಿದ್ದವ ಅರೆಸ್ಟ್‌

ಎಟಿಎಂ ಕೇಂದ್ರಗಳ ಬಳಿ ನಿಲ್ಲುತ್ತಿದ್ದ ಆರೋಪಿ, ಹಣ ಡ್ರಾ ಮಾಡಲು ಬರುವ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್‌ ಬದಲಾಯಿಸಿ ವಂಚಿಸುತ್ತಿದ್ದ. ಆ.4 ರಂದು ಹೆಸರುಘಟ್ಟ ಮುಖ್ಯರಸ್ತೆಯ ತ್ರಿವೇಣಿ ಶಾಲೆ ಪಕ್ಕದ ಕರ್ನಾಟಕ ಬ್ಯಾಂಕ್‌ ಎಟಿಎಂನಲ್ಲಿ ಮಂಜುನಾಥನಗರದ ನಾಗರಾಜು ತೆರಳಿದ್ದರು. ಆ ವೇಳೆ ಅಲ್ಲೇ ನಿಂತಿದ್ದ ಅರುಣ್‌ನನ್ನು ನಾಗರಾಜು ನೆರವು ಕೋರಿದ್ದಾರೆ. ಆಗ ಡೆಬಿಟ್‌ ಕಾರ್ಡ್‌ ಬದಲಾಗಿ ಬೇರೊಂದು ಡೆಬಿಟ್‌ ಕಾರ್ಡ್‌ ನೀಡಿದ್ದ. ಇದೇ ಕಾರ್ಡ್‌ ಬಳಸಿಕೊಂಡು 32 ಸಾವಿರ ಹಣ ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.