ಬೆಂಗಳೂರು(ಅ.21): ಮಾದಕ ವಸ್ತು ಮಾರಾಟ ಜಾಲದ ಆರೋಪಿಗಳಾದ ಕನ್ನಡ ಚಲನಚಿತ್ರದ ನಟಿಯರು ಹಾಗೂ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ದೊಂಬಿಕೋರರ ಬಿಡುಗಡೆಗೆ ಆಗ್ರಹಿಸಿ ಎನ್‌ಡಿಪಿಎಸ್‌ ನ್ಯಾಯಾಲಯದ ನ್ಯಾಯಾಧೀಶರು, ನಗರ ಪೊಲೀಸ್‌ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಬೆದರಿಕೆ ಪತ್ರ ಬರೆದು ಕುಚೋದ್ಯತನ ಮಾಡಿದ್ದ ಕಿಡಿಗೇಡಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ರಾಜಶೇಖರ್‌ (45) ಎಂಬಾತ ಬಂಧಿತನಾಗಿದ್ದು, ತನ್ನ ಸೋದರ ಸಂಬಂಧಿ ವಿರುದ್ಧ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆತನನ್ನು ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ಸಂಬಂಧಿಕನ ಹೆಸರಿನಲ್ಲಿ ಆರೋಪಿ ಪತ್ರ ಬರೆದಿದ್ದ. ಪತ್ರದ ಜತೆ ಕಳುಹಿಸಿದ್ದ ಮತದಾರರ ಗುರುತಿನ ಚೀಟಿ ಹಾಗೂ ಮೊಬೈಲ್‌ ಸಂಖ್ಯೆ ಆಧರಿಸಿ ತನಿಖೆಗಿಳಿದ ಪೊಲೀಸರು, ಕೃತ್ಯ ಬೆಳಕಿಗೆ ಬಂದ ಕೆಲವೇ ತಾಸುಗಳಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ.

ಪತ್ರದ ಜೊತೆ ವೋಟರ್‌ ಐಡಿ:

ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹಾಗೂ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಅಂಚೆ ಮೂಲಕ ಶನಿವಾರ ಬೆದರಿಕೆ ಪತ್ರವು ಬಂದಿತ್ತು. ಎನ್‌ಡಿಪಿಎಸ್‌ ನ್ಯಾಯಾಲಯದ ನ್ಯಾಯಾಧೀಶ ಸೀನಪ್ಪ ಅವರಿಗೆ ಸೋಮವಾರ ಅಂಚೆ ಮೂಲಕ ಪಾರ್ಸಲ್‌ ಬಂದಿದೆ. ಅದನ್ನು ತೆರೆದು ನೋಡಿದಾಗ ಬೆದರಿಕೆ ಪತ್ರ ಹಾಗೂ ಪುಟ್ಟಗಾತ್ರದ ಸ್ಫೋಟಕ ವಸ್ತು ಪತ್ತೆಯಾಗಿವೆ. ಡ್ರಗ್ಸ್‌ ಪ್ರಕರಣದ ಆರೋಪಿಗಳಾದ ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜಾಮೀನು ನೀಡಬೇಕು ಹಾಗೂ ಕೊಲೆ ಸುಲಿಗೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಬೇಕು. ಇಲ್ಲದಿದ್ದರೆ ನಿಮ್ಮ ಕಾರಿಗೆ ಕೇಪ್‌ ಇಟ್ಟು ಉಡಾಯಿಸುತ್ತೇನೆಂದು ಬರೆದಿದ್ದ. ಈ ಬಗ್ಗೆ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌, ಆರೋಪಿ ಪತ್ತೆಗೆ ಹಲಸೂರು ಗೇಟ್‌ ಪಿಎಸ್‌ಐ ಎನ್‌.ಸಿ.ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ತಂಡವನ್ನು ರಚಿಸಿದರು.

ಕಡಿಮೆ ಬೆಲೆಗೆ ಸೈಟ್‌ ಆಸೆ ತೋರಿಸಿ 38 ಲಕ್ಷ ಮೋಸ: ಕಂಗಾಲಾದ ವ್ಯಕ್ತಿ

ಅಂಚೆ ಮೂಲಕ ಬಂದಿದ್ದ ಪಾರ್ಸಲ್‌ನಲ್ಲಿ ಪತ್ರದ ಜತೆ ಮತದಾರರ ಗುರುತಿನ ಪತ್ರ ಸಹ ಇತ್ತು. ಇದೇ ರೀತಿ ಆಯುಕ್ತರು ಹಾಗೂ ಸಂದೀಪ್‌ ಪಾಟೀಲ್‌ ಅವರಿಗೆ ಬಂದಿದ್ದ ಪತ್ರಗಳಲ್ಲಿ ಮೊಬೈಲ್‌ ಸಂಖ್ಯೆ ಉಲ್ಲೇಖವಾಗಿತ್ತು. ಈ ಸುಳಿವು ಆಧರಿಸಿ ತನಿಖೆಗಿಳಿದ ಪೊಲೀಸರು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ರಮೇಶ್‌ ಅವರನ್ನು ವಶಕ್ಕೆ ಪಡೆದು ವಿಚಾರಿಸಿದರು. ತಾನು ಯಾವುದೇ ಪತ್ರ ಬರೆದಿಲ್ಲ ಎಂದು ರಮೇಶ್‌ ಸ್ಪಷ್ಟಪಡಿಸಿದ್ದರು. ಆಗ ರಮೇಶ್‌ ವಿರುದ್ಧ ಕೌಟುಂಬಿಕ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅವರ ಸೋದರ ಸಂಬಂಧಿ ರಾಜಶೇಖರ್‌ ಕೃತ್ಯ ಎಸಗಿರುವ ಅನುಮಾನ ಮೂಡಿತ್ತು. ಈ ಮಾಹಿತಿ ಮೇರೆಗೆ ತಿಪಟೂರು ತಾಲೂಕು ಲಿಂಗದಹಳ್ಳಿ ಗ್ರಾಮಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಬಂಧಿ ಹೆಸರಿನಲ್ಲಿ ಪತ್ರ:

ರಾಜಶೇಖರ್‌ 4ನೇ ತರಗತಿವರೆಗೆ ಓದಿದ್ದು, ಕೃಷಿಕನಾಗಿದ್ದಾನೆ. ಹಲವು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ರಮೇಶ್‌ ಹಾಗೂ ರಾಜಶೇಖರ್‌ ಮಧ್ಯೆ ಮನಸ್ತಾಪವಿದೆ. ಈ ಕಾರಣಕ್ಕೆ ಜಗಳಗಳು ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದವು. ರಮೇಶ್‌ಗೆ ಸೇರಿದ ಭೂಮಿ ಕಬಳಿಕೆಗೆ ರಾಜಶೇಖರ್‌ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಹಗೆತನ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ರಮೇಶ್‌ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದ ರಾಜಶೇಖರ್‌, ಆ ಪತ್ರದ ಜತೆ ರಮೇಶ್‌ನ ಮೊಬೈಲ್‌ ಸಂಖ್ಯೆ, ರಮೇಶ್‌ ಹಾಗೂ ಅವರ ಸೋದರನ ಹೆಸರು ಮತ್ತು ಚುನಾವಣೆ ಗುರುತಿನ ಚೀಟಿ ಇಟ್ಟು ಪೋಸ್ಟ್‌ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪತ್ರವನ್ನು ಲಿಂಗದಹಳ್ಳಿಯ ಯುವಕನೊಬ್ಬನಿಂದ ಆತ ಬರೆಸಿದ್ದ. ಬಳಿಕ ಚೇಳೂರಿನಲ್ಲಿ ಬೆಂಗಳೂರಿಗೆ ಅಂಚೆ ಮೂಲಕ ಕಳುಹಿಸಿದ್ದ. ಕೊನೆಗೆ ತಾನೇ ತೊಡಿದ್ದ ಖೆಡ್ಡಾಕ್ಕೆ ರಾಜಶೇಖರ್‌ ಬಿದ್ದಿದ್ದಾನೆ. ಮೊಬೈಲ್‌ ಸಂಖ್ಯೆ ಹಾಗೂ ಮತದಾರರ ಗುರುತಿನ ಪತ್ರಗಳೇ ಆರೋಪಿ ಬಂಧನಕ್ಕೆ ಪ್ರಮುಖ ಸುಳಿವು ನೀಡಿವೆ.

ಖತರ್‌ನಾಕ್‌ ರಾಜಶೇಖರ್‌!

* ತಿಪಟೂರು ಗ್ರಾಮಾಂತರ ಠಾಣೆಯಲ್ಲಿ 2013ರಲ್ಲಿ ಜಮೀನು ವಿವಾದ ಸಂಬಂಧ ಚಚ್‌ರ್‍ಗೆ ಬೆಂಕಿ ಹಚ್ಚಿದ ಪ್ರಕರಣ
* 2019ರಲ್ಲಿ ಸೋದರ ಸಂಬಂಧಿ ರಮೇಶ್‌ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಸ್ಕೋ ಕಾಯ್ದೆಯಡಿ ಕೇಸ್‌
* 2020ರಲ್ಲಿ ಗ್ರಾಪಂ ವಾಟರ್‌ ಮ್ಯಾನ್‌ ಮೇಲೆ ನೀರು ಬಿಡುವ ವಿಷಯದಲ್ಲಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವುದಕ್ಕೆ ದೂರು
* 1999ರಲ್ಲಿ ತಾಮ್ರದ ತಂತಿ ಕಳವು ಸಂಬಂಧ ಪ್ರಕರಣದ ಆರೋಪಿ