ಬೆಂಗಳೂರು(ನ.15): ಮಾಜಿ ಪ್ರಿಯತಮನ ಸೋಗಿನಲ್ಲಿ ಅಪರಿಚಿತನೊಬ್ಬ ಮಹಿಳೆಗೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಮಹಿಳೆಯಿಂದ ಬರೋಬ್ಬರಿ 1.25 ಕೋಟಿ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್‌ ನಿವಾಸಿ ಪ್ರಿಯಾಂಕಾ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾದವರು. ಇವರ ಪತಿ ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ಮಹೇಶ್‌ ಮತ್ತು ಅನು ಅಲಿಯಾಸ್‌ ಅಪರ್ಣಾ ಎಂಬ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?:

ಪ್ರಿಯಾಂಕಾ ಅವರಿಗೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಎಂಟು ವರ್ಷದ ಪುತ್ರನಿದ್ದಾನೆ. ಮಹಿಳೆ ವಿವಾಹಕ್ಕೂ ಮುನ್ನ ಮಹೇಶ್‌ ಎಂಬಾತನನ್ನು ಪ್ರೀತಿಸುತ್ತಿದ್ದರು. ಕುಟುಂಬದವರ ಒತ್ತಡಕ್ಕೆ ಮಣಿದ ಪ್ರಿಯಾಂಕ, ಪೋಷಕರು ತೋರಿಸಿದ್ದವರನ್ನು ವಿವಾಹವಾಗಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮಹೇಶ್‌ ಹೆಸರಿನಲ್ಲಿ ಅಪರಿಚಿತನೊಬ್ಬ ಪ್ರಿಯಾಂಕಾ ಅವರಿಗೆ ವಾಟ್ಸಾಪ್‌ ಮಾಡಿದ್ದ. ನಾನು ನಿನ್ನ ಹಳೆಯ ಪ್ರಿಯತಮ ಎಂದು ಪರಿಚಯಿಸಿಕೊಂಡಿದ್ದ.

ಎಟಿಎಂ ಕಾರ್ಡ್ ನೀಡಲು ಒಪ್ಪದ ಪೊಲೀಸ್ ಪತ್ನಿಯನ್ನೇ ಥಳಿಸಿದ!

ಇದಾದ ಎರಡೇ ದಿನಕ್ಕೆ ಅನು ಅಲಿಯಾಸ್‌ ಅಪರ್ಣಾ ಎಂಬುವಳು ಪ್ರಿಯಾಂಕಾ ಅವರಿಗೆ ಕರೆ ಮಾಡಿ ‘ನೀನು ಮಹೇಶ್‌ ಅವರಿಗೆ ಮೆಸೇಜ್‌ ಮಾಡುತ್ತಿದ್ದೀಯಾ, ನಾನು ಮಹೇಶ್‌ ಅವರ ಮಾಜಿ ಪ್ರೇಮಿ, ಸ್ನೇಹಿತರಾಗೋಣ’ ಎಂದಿದ್ದಳು. ಹೀಗೆ ಪ್ರಿಯಾಂಕಾ ಜೊತೆ ಆರೋಪಿಗಳಾದ ಮಹೇಶ್‌ ಮತ್ತು ಅನು ಮೊಬೈಲ್‌ನಲ್ಲಿ ಸಂದೇಶ ವಿನಿಯಮ ಮಾಡಿಕೊಳ್ಳುತ್ತಿದ್ದರು.

ಇದಾದ ಸ್ವಲ್ಪ ದಿನಗಳ ಬಳಿಕ ಮಹೇಶ್‌, ಪ್ರಿಯಾಂಕಾಗೆ ಕರೆ ಮಾಡಿ ನಿನ್ನ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇವೆ. ನಾನು ನೀನು ಮಾಜಿ ಪ್ರೇಮಿಗಳು, ನನಗೂ ನಿನಗೂ ಮದುವೆಗೆ ಮೊದಲೇ ಸಂಬಂಧ ಇತ್ತು. ನೀನು ಕೂಡಲೇ ಒಂದು ಲಕ್ಷ ಹಣವನ್ನು ಅಪರ್ಣ ಖಾತೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ನಿನ್ನ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆವೊಡ್ಡಿದ್ದಾನೆ. ಇದಕ್ಕೆ ಬೆದರಿದ ಮಹಿಳೆ ಆರೋಪಿಗಳು ಕೇಳಿದಂತೆ ಹಂತ-ಹಂತವಾಗಿ 1.25 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಇಷ್ಟು ಹಣ ಹಾಕಿಸಿಕೊಂಡ ಬಳಿಕವೂ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆ ನಿರಾಕರಿಸಿದ್ದಾರೆ. ಈ ವೇಳೆ ಆರೋಪಿ ಮೊಬೈಲ್‌ನಿಂದ ಮಾಪ್‌ರ್‍ ಮಾಡಲಾದ ಅಶ್ಲೀಲ ಫೋಟೋಗೆ ಪ್ರಿಯಾಂಕಾ ಫೋಟೋ ಹಾಕಿ ಕಳುಹಿಸಿದ್ದರು. ಪತ್ನಿ ಆತಂಕದಲ್ಲಿದ್ದ ವಿಚಾರ ತಿಳಿದು ಪ್ರಶ್ನೆ ಮಾಡಿದಾಗ ಪ್ರಿಯಾಂಕಾ ಪತಿಗೆ ನಡೆದ ಘಟನೆ ವಿವರಿಸಿದ್ದರು.

ಈ ಸಂಬಂಧ ವಂಚನೆಗೊಳಗಾದವರು ಕೊಟ್ಟದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಹಳೆಯ ಪ್ರಿಯತಮನ ಹೆಸರಿನಲ್ಲಿ ಈ ರೀತಿ ವಂಚನೆ ಮಾಡಿದ್ದಾರೆ. ಆರೋಪಿಗಳು ಇದೇ ರೀತಿ ಹತ್ತಾರು ಮಂದಿಗೆ ಕೋಟ್ಯಂತರ ರುಪಾಯಿ ವಂಚಿಸಿರುವ ಬಗ್ಗೆ ಅನುಮಾನ ಇದೆ. ವಂಚನೆಗೊಳಗಾದವರು ಬಂದು ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಹೇಳಿದ್ದಾರೆ.