Firing: ಕೆಜಿಎಫ್ 2 ಪ್ರದರ್ಶನದ ವೇಳೆ ಶೂಟೌಟ್: ಹಾವೇರಿಯಲ್ಲಿ ತಲ್ಲಣ..!
* ಕೇವಲ 10 ನಿಮಿಷದಲ್ಲಿ ಪಿಸ್ತೂಲ್ ತಂದು ಫೈರಿಂಗ್ ಮಾಡಿದ ಆರೋಪಿ
* ಪರವಾನಗಿ ಇಲ್ಲದ ಪಿಸ್ತೂಲ್ ಬಳಸಿರುವ ಶಂಕೆ
* ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ತಲ್ಲಣ
ನಾರಾಯಣ ಹೆಗಡೆ
ಹಾವೇರಿ(ಏ.21): ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ(Firing) ಪ್ರಕರಣ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಪರವಾನಗಿ ಇಲ್ಲದೇ ಅಕ್ರಮವಾಗಿ ಇಟ್ಟುಕೊಂಡಿರುವ ಪಿಸ್ತೂಲ್ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಶೂಟೌಟ್‌ನಂಥ ಸಂಸ್ಕೃತಿ ಜಿಲ್ಲೆಗೂ ಕಾಲಿಟ್ಟಿರುವುದು ಆತಂಕ ಹುಟ್ಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪ್ರತಿನಿಧಿಸುವ ಶಿಗ್ಗಾಂವಿ(Shiggaon) ಕ್ಷೇತ್ರದ ಕೇಂದ್ರಸ್ಥಾನ ನಗರದಲ್ಲಿನ ರಾಜಶ್ರೀ ಚಿತ್ರಮಂದಿರದಲ್ಲಿ(Rajashree Movie Theater) ಮಂಗಳವಾರ ರಾತ್ರಿ ಕೆಜಿಎಫ್-2(KGF-2) ಚಿತ್ರದ ಪ್ರದರ್ಶನದ ವೇಳೆ ಈ ನಡೆದ ಘಟನೆ ನಡೆದಿದೆ.
ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಎಂಬಾತನ ಮೇಲೆ ಈ ಗುಂಡಿನ ದಾಳಿಯಾಗಿದೆ. ಎರಡು ಗುಂಡುಗಳು ಹೊಟ್ಟೆಯ ಭಾಗಕ್ಕೆ ಹೊಕ್ಕಿದ್ದರೆ, ಮತ್ತೊಂದು ತೋಳಿಗೆ ಸವರಿಕೊಂಡು ಹೋಗಿದೆ. ಗಾಯಾಳು ವಸಂತಕುಮಾರ ಹುಬ್ಬಳ್ಳಿ(Hubballi) ಕಿಮ್ಸ್‌ನಲ್ಲಿ(KIMS) ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
Haveri ಕೆಜಿಎಫ್ ಪ್ರದರ್ಶನದ ವೇಳೆ ಶೂಟೌಟ್, ಆರೋಪಿ ಪತ್ತೆಗೆ ಪೊಲೀಸರ ಬಲೆ
ಚಿತ್ರಮಂದಿರದಲ್ಲಿ ಸೀಟಿನ ಮೇಲೆ ಕಾಲಿಟ್ಟ ಒಂದು ಚಿಕ್ಕ ಘಟನೆಗೆ ಪಿಸ್ತೂಲ್‌ನಲ್ಲಿ(Pistol) ಪ್ರತಿಕ್ರಿಯಿಸುವ ಹಂತಕ್ಕೆ ಬಂದಿರುವುದು ಒಂದು ಕಡೆಯಾದರೆ, ಲೈಸನ್ಸ್ ಇಲ್ಲದೇ ಯುವಕರ ಕೈಗೆ ಮಾರಕಾಸ್ತ್ರ ಸಿಕ್ಕಿದ್ದಾದರೂ ಹೇಗೆ? ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ. ಇದೇ ಜಾಡನ್ನು ಹಿಡಿದು ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದು, ಶೀಘ್ರದಲ್ಲಿ ಆರೋಪಿ(Accused) ಪತ್ತೆ ಹಚ್ಚುವ ವಿಶ್ವಾಸವಿದೆ.
10 ನಿಮಿಷದಲ್ಲಿ ಪಿಸ್ತೂಲ್ ಹಿಡಿದು ಬಂದ:
ರಾಜಶ್ರೀ ಚಿತ್ರಮಂದಿರದಲ್ಲಿ ಕೊನೆಯ ಶೋ ರಾತ್ರಿ 9 ಗಂಟೆಗೆ ಶುರುವಾಗಿದೆ. ವಸಂತಕುಮಾರ ಹಾಗೂ ಸ್ನೇಹಿತರು ಕೆಜಿಎಫ್ -2 ಚಿತ್ರ ನೋಡಲು ಬಂದಿದ್ದರು. ಆಗ ವಸಂತಕುಮಾರ್ ಮುಂದಿನ ಸೀಟಿನ ಮೇಲೆ ಕಾಲು ಹಾಕಿ ಕೂತಿದ್ದ. ಕಾಲು ತೆಗೆಯುವಂತೆ ಮುಂದಿನ ಸೀಟಿನಲ್ಲಿ ಕೂತಿದ್ದ ವ್ಯಕ್ತಿ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ನೀನು ಹೇಗೆ ಸಿನಿಮಾ ನೋಡುತ್ತೀಯಾ ಅಂತ ನಾನೂ ನೋಡ್ತೇನೆ ಎಂದು ಹೇಳಿ ಹೊರಹೋದ ವ್ಯಕ್ತಿ ಹತ್ತೇ ನಿಮಿಷಗಳಲ್ಲಿ ವಾಪಸ್ ಬಂದಿದ್ದಾನೆ. ಬಂದವನೇ ಮರುಕ್ಷಣವೇ ವಸಂತಕುಮಾರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದವನೇ ಅಲ್ಲಿಂದ ಕತ್ತಲಲ್ಲಿ ಪರಾರಿಯಾಗಿದ್ದಾನೆ.
ಅಷ್ಟಕ್ಕೂ ಆತನ ಕೈಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬ ಪ್ರಶ್ನೆಯ ಜತೆಗೆ ಕೇವಲ 10 ನಿಮಿಷದಲ್ಲಿ ಆತ ಪಿಸ್ತೂಲ್ ತಂದಿರುವುದಾದರೂ ಎಲ್ಲಿಂದ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಕ್ಷುಲ್ಲಕ ಕಾರಣಕ್ಕೆ ಶೂಟೌಟ್‌ಗೆ(Shootout) ಮುಂದಾಗಿರುವುದು ಆತಂಕದ ಸಂಗತಿ. ಸಿನಿಮಾ ಶೈಲಿಯಲ್ಲೇ ಯುವಕ ನಡೆದುಕೊಂಡಿರುವುದನ್ನು ಗಮನಿಸಬಹುದಾಗಿದೆ.
ಅಕ್ರಮ ಪಿಸ್ತೂಲ್ ಶಂಕೆ:
ಶಿಗ್ಗಾಂವಿ ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ಇರುವ ಪಿಸ್ತೂಲ್ ಇಟ್ಟುಕೊಂಡವರ ಸಂಖ್ಯೆ ಕಡಿಮೆಯಿದೆ. ಶಿಗ್ಗಾಂವಿ ಪಟ್ಟಣದಲ್ಲಿ ಅಂಥವರು ಯಾರೂ ಇಲ್ಲ ಎಂಬುದು ಪೊಲೀಸ್ ಮೂಲಗಳೇ ಹೇಳುತ್ತವೆ. ಆದ್ದರಿಂದ ಈ ಘಟನೆಯಲ್ಲಿ ಬಳಕೆಯಾಗಿರುವ ಪಿಸ್ತೂಲ್ ಪರವಾನಗಿ ಇಲ್ಲದ್ದು ಎಂಬುದು ಬಹುತೇಕ ಖಚಿತವಾಗಿದೆ. ಇದೇ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ಪಿಸ್ತೂಲ್ ಎಲ್ಲಿಂದ ಸಿಕ್ಕಿತು, ಬೇರೆ ಯಾವುದಾದರೂ ಕೃತ್ಯಕ್ಕೆ ಬಳಸಲು ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದರಾ ಎಂಬಿತ್ಯಾದಿ ಜಾಡು ಹಿಡಿದು ಪೊಲೀಸರು ಬೆನ್ನು ಹತ್ತಿದ್ದಾರೆ.
ಆರೋಪಿಯು ಸ್ಥಳೀಯ ನಿವಾಸಿಯೇ ಆಗಿರುವ ಸಾಧ್ಯತೆ ಹೆಚ್ಚಿದೆ. ಪೊಲೀಸರು ಘಟನೆ ನಡೆದ ಚಿತ್ರಮಂದಿರದಲ್ಲಿನ ಸಿಸಿಟಿವಿ ಫäಟೇಜ್ ಪರಿಶೀಲಿಸಿದ್ದಾರೆ. ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಗಿದೆ. ಆರೋಪಿಯ ಸುಳಿವು ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆರೋಪಿ ಬಂಧನವಾದ ಮೇಲೆ ಎಲ್ಲದಕ್ಕೂ ಉತ್ತರ ಸಿಗಲಿದೆ.
KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!
ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಅನುಮಾನಾಸ್ಪದ ಕೆಲ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಅವರು ಊರಲಿಲ್ಲ. ಶೀಘ್ರದಲ್ಲಿ ಪತ್ತೆ ಹಚ್ಚುತ್ತೇವೆ. ಆರೋಪಿ ಬಂಧನವಾದ ಮೇಲೆ ಆತನಿಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬುದೂ ಗೊತ್ತಾಗಲಿದೆ ಅಂತ ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಮಳೆಯಾದ ಕಾರಣಕ್ಕೆ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದ ವಸಂತಕುಮಾರ ಮತ್ತು ಸ್ನೇಹಿತರು ಸೇರಿ ರಾತ್ರಿ ಸಿನಿಮಾ ನೋಡಲು ಹೋಗಿದ್ದರು. ಆಗ ಸಣ್ಣ ವಿಷಯಕ್ಕೆ ವಾಗ್ವಾದ ನಡೆದಿದೆ. ಆಗ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದ ವ್ಯಕ್ತಿ ವಾಪಸ್ ಬಂದು ಪೈರಿಂಗ್ ಮಾಡಿದ್ದಾನೆ. ಅಲ್ಲಿಯೇ ವಸಂತ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಆತನ ಸ್ನೇಹಿತರು ಕರೆ ಮಾಡಿ ತಿಳಿಸಿದರು. ಇಂಥ ಘಟನೆ ಶಿಗ್ಗಾಂವಿಯಲ್ಲಿ ನಡೆದಿರಲಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ಕೊಟ್ಟು ಇಂಥ ಘಟನೆಗೆ ಕಡಿವಾಣ ಹಾಕಬೇಕು ಅಂತ ಗುಂಡೇಟು ತಗಲಿದ ವ್ಯಕ್ತಿಯ ಮಾವ ಮಹದೇವಪ್ಪ ಹೇಳಿದ್ದಾರೆ.