Haveri ಕೆಜಿಎಫ್ ಪ್ರದರ್ಶನದ ವೇಳೆ ಶೂಟೌಟ್, ಆರೋಪಿ ಪತ್ತೆಗೆ ಪೊಲೀಸರ ಬಲೆ

ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ  ಮಂಗಳವಾರ ರಾತ್ರಿ 10.30 ಕ್ಕೆ ನಡೆದ  ಶೂಟೌಟ್ ಪ್ರಕರಣ ಹಾವೇರಿ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.  

Gunshots at a film theatre in Shiggaon in the Haveri district of Karnataka during the KGF 2 screening gow

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ: ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ 10.30 ಕ್ಕೆ ನಡೆದ  ಶೂಟೌಟ್ ಪ್ರಕರಣ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಕೆಜಿಎಫ್‌–2 ಸಿನಿಮಾ ವೀಕ್ಷಣೆ ಸಂದರ್ಭ ಕ್ಷುಲ್ಲಕ ಕಾರಣಕ್ಕಾಗಿ ಪ್ರೇಕ್ಷಕರಿಬ್ಬರ ನಡುವೆ ಜಗಳ ನಡೆದು, ಪಿಸ್ತೂಲಿನಿಂದ ಗುಂಡು ಹೊಡೆದು ಯುವಕ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿತ್ತು.ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಗುಂಡೇಟು ತಿಂದು ಗಾಯಗೊಂಡು ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗ್ತಿದೆ. ಸಿನಿಮಾ ನೋಡುವ ಸಂದರ್ಭ ಮುಂದಿನ ಕುರ್ಚಿಯ ಮೇಲೆ ವಸಂತಕುಮಾರ ಕಾಲಿಟ್ಟಿದ್ದ. ಮುಂದಿನ ಕುರ್ಚಿಯಲ್ಲಿದ್ದ ಆರೋಪಿ ಕಾಲು ತೆಗೆಯುವಂತೆ ಹೇಳಿದ್ದಾನೆ. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಜಗಳ ನಡೆದಿದೆ. ನಂತರ ಆರೋಪಿ ಹೊರಗಡೆ ಹೋಗಿ ಹತ್ತು ನಿಮಿಷದ ನಂತರ ಮತ್ತೆ ಚಿತ್ರಮಂದಿರದ ಒಳಗೆ ಬಂದು, ವಸಂತಕುಮಾರನ ಮೇಲೆ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದ. ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದು, ಆತನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ

ಇಂದು ಮತ್ತೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರಕ್ಕೆ ಭೇಟಿ ನೀಡಿ ಹಾವೇರಿ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತನಿಖೆ ಪ್ರಗತಿ ಪರಿಶೀಲನೆ ನಡೆಸಿದರು. ಆರೋಪಿ ಪರಾರಿಯಾಗಿದ್ದು ,ತನಿಖೆ ನಡೆದಿದೆ. ಆರೋಪಿಯನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ. ಪಿಸ್ತೂಲ್ ಹೇಗೆ ಆರೋಪಿ ಕೈಗೆ ಸಿಕ್ತು? ಎಂಬುದರ ಬಗ್ಗೆ ಎಲ್ಲಾ ತನಿಖೆ ವೇಳೆ ಗೊತ್ತಾಗಲಿದೆ ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು.

ಗುಂಡು ಹಾರಿದ ಕೆಲವೇ ಕ್ಷಣಗಳಲ್ಲಿ ಚಿತ್ರ ಮಂದಿರದಿಂದ ಹೊರಗೆ ಓಡಿದ ಜನ: ಗುಂಡು ಹಾರಿಸಿದ ಘಟನೆಯಿಂದ ಚಿತ್ರಮಂದಿರದ ಪ್ರೇಕ್ಷಕರು ಗಾಬರಿಯಾಗಿ ಹೊರಗಡೆ ಓಡಿ ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಥಿಯೇಟರ್ ಮಾಲೀಕ ವಿಕ್ರಮ್ , ಗಾಯಾಳು ವಸಂತ್ ಅವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದು ನರಳುತ್ತಿದ್ದ ವಸಂತ್ ರನ್ನು ಕಿಮ್ಸ್ ಗೆ ತುರ್ತಾಗಿ ಕಿಮ್ಸ್ ಗೆ ಸಾಗಿಸಲಾಗಿದೆ.

ಘಟನೆ ಕುರಿತು ಖಂಡನೆ ವ್ಯಕ್ತಪಡಿಸಿರುವ ಗಾಯಾಳು ವಸಂತ್ ಅವರ ಮಾವ ಮಾಹದೇವಪ್ಪ, ವಸಂತಕುಮಾರ ಮತ್ತು ಆತನ ಸ್ನೇಹಿತರು ಬೆಳಿಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ರಾತ್ರಿ 9 ಗಂಟೆಯ ಪ್ರದರ್ಶನಕ್ಕೆ ನಾಲ್ವರು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿದ್ದರು. ಘಟನೆ ನಡೆದ ನಂತರ ವಸಂತಕುಮಾರನ ಸ್ನೇಹಿತರು ಈ ಕುರಿತು ಪೊಲೀಸರಿಗೂ ಈಗಾಗಲೇ ಹೇಳಿಕೆ ನೀಡಿದ್ದಾರೆ. ಶೀಘ್ರವಾಗಿ  ಆರೋಪಿಯನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಈ ಕುರಿತು ಸಮಂಜಸ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios