ಬೆಂಗಳೂರು(ಆ.07):  ಟಿ.ವಿ. ರೇಡಿಯೋ ಉಪಕರಣಗಳಲ್ಲಿ ಬಳಸುವ ‘ರೆಡ್‌ ಮರ್ಕ್ಯೂರಿ’ ಹೆಸರಿನಲ್ಲಿ ವ್ಯಕ್ತಿಯೊಬ್ಬರು 3 ಲಕ್ಷ ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಣಸವಾಡಿ ನಿವಾಸಿ ಶ್ರೀಧರ್‌ ಎಂಬಾತ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶ್ರೀಧರ್‌ ಕಮ್ಮನಹಳ್ಳಿಯಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸಾಗರ್‌ ಎಂಬಾತ ಶ್ರೀಧರ್‌ಗೆ ಕರೆ ಮಾಡಿದ್ದು, ಮನೋಜ್‌ ಎಂಬಾತನ ಸ್ನೇಹಿತನ ಬಳಿ ಒಂದು ರೆಡ್‌ ಮರ್ಕ್ಯೂರಿ ಇದೆ. ಈ ಮರ್ಕ್ಯೂರಿ 3 ಕೋಟಿ ಬೆಲೆ ಬಾಳುತ್ತದೆ. ಈ ವಿಚಾರ ಮರ್ಕ್ಯೂರಿ ಹೊಂದಿರುವ ವ್ಯಕ್ತಿಗೆ ಗೊತ್ತಿಲ್ಲ. ಆ ಮರ್ಕ್ಯೂರಿಯನ್ನು ನಾವೇ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡೋಣ ಎಂದಿದ್ದ. ಹಣದ ಆಸೆಗೆ ಶ್ರೀಧರ್‌, ಸಾಗರ್‌ ಮಾತನ್ನು ಒಪ್ಪಿದ್ದರು.

ಬೆಂಗಳೂರು; ಕೊನೆ ಕ್ಷಣ ಕೈಕೊಟ್ಟ ಡ್ರಿಲ್ಲಿಂಗ್ ಮೆಷಿನ್, ಭಾರೀ ದರೋಡೆ ಸಂಚು ವಿಫಲ

ಮೂರು ಲಕ್ಷ ಹಣದೊಂದಿಗೆ ಜು.23ರಂದು ಶ್ರೀಧರ್‌, ಸಾಗರ್‌ ಹಾಗೂ ಇನ್ನಿತರರ ಜತೆ ರೆಡ್‌ ಮರ್ಕ್ಯೂರಿ ಕೊಳ್ಳಲು ಕಾರಿನಲ್ಲಿ ಚನ್ನರಾಯಪಟ್ಟಣದ ಬಳಿ ಹೋಗಿದ್ದರು. ಅಲ್ಲಿ ಆರೋಪಿ ಸ್ಟೀಫನ್‌ ಗ್ಯಾಂಗ್‌ ಬಂದಿದ್ದು, ಶ್ರೀಧರ್‌ ಮಕ್ರ್ಯೂರಿ ತೋರಿಸಿ ಎಂದು ಸ್ಟೀಫನ್‌ನನ್ನು ಕೇಳಿದ್ದ. ಇದಕ್ಕೆ ಪ್ರತಿಯಾಗಿ ಸ್ವೀಫನ್‌ ಗ್ಯಾಂಗ್‌ ಹಣ ತೋರಿಸುವಂತೆ ಕೇಳಿತ್ತು. ಶ್ರೀಧರ್‌ ಅವರು ಹಣ ತೋರಿಸುತ್ತಿದ್ದಂತೆ ಸ್ವೀಫನ್‌ ಹಾಗೂ ಆತನ ಜತೆಗಿದ್ದವರು ಶ್ರೀಧರ್‌ಗೆ ಬೆದರಿಸಿ ಹಣ ಕಸಿದುಕೊಂಡಿದ್ದಾರೆ. ಯಾರ ಬಳಿಯಾದರೂ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶ್ರೀಧರ್‌ ದೂರು ನೀಡಿದ್ದಾರೆ. ಸಾಗರ್‌ ಸ್ನೇಹಿತರು ಈ ರೀತಿ ಕೃತ್ಯ ಎಸಗಿದ ಕಾರಣ ಶ್ರೀಧರ್‌, ಸಾಗರ್‌ನನ್ನು ಥಳಿಸಿ, ಆತನ ತಂದೆಯಿಂದ 40 ಸಾವಿರ ವಸೂಲಿ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಾಗರ್‌, ಶ್ರೀಧರ್‌ ವಿರುದ್ಧ ಹಲ್ಲೆ ಆರೋಪದಡಿ ಪ್ರತಿ ದೂರು ನೀಡಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕೊರೋನಾ ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ವಿಚಾರಣೆ ನಡೆಸಬೇಕಿದೆ ಎಂದು ಹೆಬ್ಬಾಳ ಠಾಣೆ ಪೊಲೀಸರು ತಿಳಿಸಿದರು.