ಡ್ರಗ್ಸ್ ಮಾಫಿಯಾ: ನಟಿಯರಿಗೆ ನಶೆಯೇರಿಸುತ್ತಿದ್ದ ಪೆಡ್ಲರ್ ಸೆರೆ!
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ಡ್ರಗ್ಸ್ ದಂಧೆ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಪೊಲೀಸರ ಬಲೆಗೆ| ಗಾಂಜಾ, ಕೊಕೇನ್ ವಶ| ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಗಾಂಜಾ ಮಾರಾಟಕ್ಕಿಳಿದಿದ್ದ ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಿದ ಪೀಣ್ಯ ಪೊಲೀಸರು|
ಬೆಂಗಳೂರು(ಸೆ.17): ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಮತ್ತು ಅವರ ಸ್ನೇಹ ಬಳಗಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಮೂಲದ ಮತ್ತೊಬ್ಬ ಪೆಡ್ಲರ್ ಸಿಸಿಬಿ ಬಲೆಗೆ ಬುಧವಾರ ಬಿದ್ದಿದ್ದಾನೆ.
ನೈಜೀರಿಯಾ ದೇಶದ ಬೆನಾಲ್ಡ್ ಉಡೇನ್ನಾ ಬಂಧಿತನಾಗಿದ್ದು, ಆರೋಪಿಯಿಂದ 12 ಗ್ರಾಂ ಕೊಕೇನ್, ಮೊಬೈಲ್ ಹಾಗೂ ಮೂರು ಮೊಬೈಲ್ ಸಿಮ್‌ಗಳು ಜಪ್ತಿ ಮಾಡಲಾಗಿದೆ. ಪೇಜ್ ತ್ರಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ಬಹುಮುಖ್ಯ ಪೆಡ್ಲರ್ ಉಡೇನ್ನಾ ಆಗಿದ್ದಾನೆ. ತನಿಖೆಯಲ್ಲಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಯಿತು ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಹೇಳಿದ್ದಾರೆ.
ಮಾದಕ ವಸ್ತು ಮಾರಾಟ ಜಾಲದ ಪ್ರಕರಣದ ತನಿಖೆ ವೇಳೆ ಮೂವರು ಆಫ್ರಿಕಾ ಪ್ರಜೆಗಳು ಡ್ರಗ್ಸ್ ಪೂರೈಕೆಯಲ್ಲಿದ್ದಾರೆ ಎಂಬುದು ಗೊತ್ತಾಯಿತು. ಈ ಮಾಹಿತಿ ಮತ್ತಷ್ಟುಶೋಧಿಸಿದಾಗ ಬಾಲ್ಕಿ, ಕೊಕೆ ಹಾಗೂ ಜಾನ್ ಹೆಸರಿನಲ್ಲಿ ಬೆನಾಲ್ಡ್ ಒಬ್ಬಾತನೇ ದಂಧೆ ನಡೆಸುತ್ತಿದ್ದು ತಿಳಿಯಿತು ಎಂದು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆದಾರ
ಪಬ್, ಕ್ಲಬ್, ರೆಸಾರ್ಟ್, ಅಪಾರ್ಟ್‌ಮೆಂಟ್ ಹಾಗೂ ಫಾರಂ ಹೌಸ್‌ಗಳಲ್ಲಿ ವೀರೇನ್ ಖನ್ನಾ ಹಾಗೂ ಆದಿತ್ಯ ಆಳ್ವಾ ಪಾರ್ಟಿ ಆಯೋಜಿಸುತ್ತಿದ್ದರು. ಈ ಪಾರ್ಟಿಗಳಿಗೆ ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಮತ್ತಿರರು ಪಾಲ್ಗೊಳ್ಳುತ್ತಿದ್ದರೆ. ಪ್ರತೀಕ್ ಶೆಟ್ಟಿ, ರವಿಶಂಕರ್ ಹಾಗೂ ರಾಹುಲ್ ಡ್ರಗ್ಸ್ ಪೂರೈಸುತ್ತಿದ್ದರು. ಆಫ್ರಿಕಾ ಪ್ರಜೆಗಳಾದ ಲೂಮ್ ಪೆಪ್ಪರ್ ಹಾಗೂ ಬೆನಾಲ್ಡ್‌ರಿಂದ ಡ್ರಗ್ಸ್ ಖರೀದಿಸಿ ಪಾರ್ಟಿಗಳಿಗೆ ಆರೋಪಿಗಳು ಪೂರೈಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ: ನಟಿಯರ ಬಗ್ಗೆ ಬಿಜೆಪಿ ಶಾಸಕ ಸಾಫ್ಟ್ ಕಾರ್ನರ್, ಪೊಲೀಸರ ನಡೆಗೆ ಗರಂ
ಹಲವು ವರ್ಷಗಳ ಹಿಂದೆ ವ್ಯಾಪಾರಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ, ಬಳಿಕ ಬೆಂಗಳೂರಿಗೆ ಬಂದು ಯಲಹಂಕ ಸಮೀಪ ನೆಲೆಸಿದ್ದ. ಆಫ್ರಿಕಾ ದೇಶಗಳಿಂದ ಕೊಕೇನ್, ಎಲ್‌ಎಸ್‌ಡಿ ಹಾಗೂ ಎಂಡಿಎಂಎ ಸೇರಿದಂತೆ ಇತರೆ ಡ್ರಗ್ಸ್‌ಗಳನ್ನು ತರಿಸಿ ನಗರದ ಪೇಜ್-ತ್ರಿ ಪಾರ್ಟಿಗಳ ಆಯೋಜಕ ತಂಡದ ಸದಸ್ಯರಿಗೆ ಮಾರಾಟ ಮಾಡುತ್ತಿದ್ದ. ಈ ಡ್ರಗ್ಸ್ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಈಗ ಆರೋಪಿಯಿಂದ ಜಪ್ತಿಯಾಗಿರುವ ಮೊಬೈಲ್‌ಗಳನ್ನು ಪರೀಶಿಲಿಸಲಾಗುತ್ತಿದೆ. ಯಾರೆಲ್ಲ ಆತನ ಸಂಪರ್ಕದಲ್ಲಿದ್ದರು ಎಂಬುದು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದೇಶಿ ಪೆಡ್ಲರ್ ಸೇರಿ ಐವರ ಬಂಧನ
ಮಾದಕ ವಸ್ತು ದಂಧೆ ವಿರುದ್ಧ ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ ಮತ್ತಷ್ಟುಚುರುಕಿನಿಂದ ಸಾಗಿದ್ದು, ವಿದೇಶಿ ಪ್ರಜೆಗಳು ಸೇರಿದಂತೆ ಐವರು ಮಾದಕ ವಸ್ತುಗಳ ಪೆಡ್ಲರ್‌ಗಳನ್ನು ಬಂಧಿಸಿ 20 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
ತುಮಕೂರು ರಸ್ತೆಯ ಬಸವೇಶ್ವರ ಬಸ್‌ನಿಲ್ದಾಣ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಪೀಣ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಂ.ಎಸ್.ಪಾಳ್ಯದ ಸಂತೋಷ್ ಹಾಗೂ ಮಂಜುನಾಥ್ ಬಂಧಿತರಾಗಿದ್ದು, ಆರೋಪಿಗಳಿಂದ 2.3 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಪೆಡ್ಲರ್‌ಗಳು ಮೂಲತಃ ತಮಿಳುನಾಡಿನವರು. ಲಾಕ್‌ಡೌನ್ ಪರಿಣಾಮ ಕೆಲಸ ಕಳೆದುಕೊಂಡ ನಿರುದ್ಯೋಗಿಗಳಾಗಿದ್ದ ಇವರು ಹಣಕ್ಕಾಗಿ ಗಾಂಜಾ ದಂಧೆಗಿಳಿದಿದ್ದರು.
ಮಾಲೂರಿನ ಟಿವಿಎಸ್ ಫ್ಯಾಕ್ಟರಿ ಬಳಿ ಮೃತ್ಯುಂಜಯ ಎಂಬಾತನ ಬಳಿ ಗಾಂಜಾ ಖರೀದಿಸಿದ ಆರೋಪಿಗಳು, ಬಳಿಕ ಬಸವೇಶ್ವರ ಬಸ್ ನಿಲ್ದಾಣ ಬಳಿ ಗ್ರಾಹಕರಿಗೆ ಪೂರೈಸಲು ಸಜ್ಜಾಗಿದ್ದರು. ಆಗ ಖಚಿತ ಮಾಹಿತಿ ಮೇರೆಗೆ ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿ ಅವರನ್ನು ಬಂಧಿಸಲಾಯಿತು. 2017ರಲ್ಲಿ ಮಾಲೂರು ಠಾಣೆಯಲ್ಲಿ ಈ ಆರೋಪಿಗಳ ವಿರುದ್ಧ ಡ್ರಗ್ಸ್ ಪ್ರಕರಣದಲ್ಲಿ ಗೂಂಡಾ ಕಾಯ್ದೆ ಪ್ರಯೋಗಿಸಲಾಗಿತ್ತು. ಜೈಲಿನಿಂದ ಹೊರ ಬಂದ ನಂತರ ಮತ್ತೆ ಹಣದಾಸೆಗೆ ಹಳೇ ಚಾಳಿ ಮುಂದುವರೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಕೆನ್ ಪತ್ತೆ:
ಪೀಣ್ಯ ಎರಡನೇ ಹಂತದ ಸಮೀಪ ರಾಜಗೋಪಾಲ ನಗರ ಠಾಣೆ ಪೊಲೀಸರ ಬೀಸಿದ ಗಾಳಕ್ಕೆ ಇಬ್ಬರು ವಿದೇಶಿ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ನೈಜೀರಿಯಾ ಮೂಲದ ಥಾಮಸ್ ಹಾಗೂ ಇಕೆಚುಕ್ವಾ ಡೆನಿಯಲ್ ಬಂಧಿತರಾಗಿದ್ದು, ಆರೋಪಿಗಳಿಂದ 2.26 ಕೆ.ಜಿ. ಗಾಂಜಾ ಮತ್ತು 6 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ.
ಪೀಣ್ಯ 2ನೇ ಹಂತ, ಜಿಕೆಡಬ್ಲ್ಯೂ ಲೇಔಟ್‌ನಲ್ಲಿ ಮಾದಕ ವಸ್ತು ಮಾರಾಟಕ್ಕೆ ವಿದೇಶಿ ಪ್ರಜೆಗಳು ಯತ್ನಿಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಆಗ ಸ್ಥಳಕ್ಕೆ ತೆರಳಿದ ಪೊಲೀಸರನ್ನು ಕಂಡು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಬೆನ್ನಹತ್ತಿ ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳು ಮೂಲತಃ ನೈಜೀರಿಯಾ ದೇಶದವರಾಗಿದ್ದು, ಬಾಗಲೂರು ಬಳಿ ನೆಲೆಸಿದ್ದರು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿದ್ದ ಅವರು, ಬಳಿಕ ತಮಿಳುನಾಡಿನಲ್ಲಿ ಟೀ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ವೇಳೆ ರಾಜೇಶ್ ಎಂಬಾತನಿಂದ ಗಾಂಜಾ ಖರೀದಿಸಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ರಾಜೇಶ್ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಕಳೀಪುರ ಬಳಿ 15 ಕೆ.ಜಿ.ಗಾಂಜಾ ಪತ್ತೆ:
ಓಕಳೀಪುರ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಬೈಕ್ ಸವಾರನನ್ನು ಅಡ್ಡಗಟ್ಟಿಶ್ರೀರಾಮಪುರ ಪೊಲೀಸರು ಪರಿಶೀಲಿಸಿದಾಗ 15 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಶ್ರೀರಾಂಪುರದ ಸತ್ಯ(23) ಬಂಧಿನಾಗಿದ್ದು, ಎರಡು ದಿನಗಳ ಹಿಂದೆ ಓಕಳೀಪುರ ಬಳಿ ಆತ ತೆರಳುವಾಗ ಪೊಲೀಸರಿಗೆ ಸೆರೆಯಾಗಿದ್ದಾನೆ. ವಿಶಾಖಪಟ್ಟಣದ ಪೆಡ್ಲರ್‌ನಿಂದ ಗಾಂಜಾ ತಂದು ನಗರದಲ್ಲಿ ಆರೋಪಿ ಮಾರುತ್ತಿದ್ದ. ಈ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಸಿಬಿ ಬಲೆಗೆ ಮತ್ತಿಬ್ಬರು ಪೆಡ್ಲರ್‌ಗಳು
ಕೊತ್ತನೂರಿನ ಜಾನ್ ನಿಖೋಲಸ್ ಹಾಗೂ ಜೆ.ಪಿ.ನಗರದ ಇರ್ಫಾನ್ ಶೇಖ್ ಬಂಧಿತರಾಗಿದ್ದು, ಅವರಿಂದ .4 ಲಕ್ಷ ಮೌಲ್ಯದ 34 ಎಕ್ಸಾಟ್ಸಿ ಮಾತ್ರೆಗಳು, 27 ಎಲ್‌ಎಸ್‌ಡಿ, ಎರಡು ಮೊಬೈಲ್‌ಗಳು ಹಾಗೂ ಕಾರು ಸೇರಿದಂತೆ ಇತರೆ ವಸ್ತುಗಳು ಜಪ್ತಿಯಾಗಿವೆ. ತಲೆಮರೆಸಿಕೊಂಡಿರುವ ಅಶ್ವಿನ್ ಎಂಬಾತನ ಪತ್ತೆಗೆ ತನಿಖೆ ನಡೆದಿದೆ. ಎಂ.ಜಿ.ರಸ್ತೆ ಬಳಿ ಡ್ರಗ್ಸ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.