ಪರೇಶ್ ಮೇಸ್ತಾ ಹತ್ಯೆ ಪ್ರಕರಣ , ಸಾವಿನ ನೈಜ ಕಾರಣಕ್ಕೆ ಕಾಂಗ್ರೆಸ್ ಒತ್ತಾಯ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ವಿರೋಧ ಪಕ್ಷ ಕಾಂಗ್ರೆಸ್ ಪರೇಶ್ ಮೇಸ್ತಾ ಹತ್ಯೆ ಪ್ರಕರಣವನ್ನು ಕೆದುಕಲು ಪ್ರಾರಂಭಿಸಿದೆ. ಅಲ್ಲದೇ, ಐದು ವರ್ಷದಿಂದ ನಡೆಸುತ್ತಿರುವ ತನಿಖೆಯನ್ನು ಇತ್ಯರ್ಥಗೊಳಿಸಿ ಎನ್ನುವ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮಾಡಲಾರಂಭಿಸಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರಕನ್ನಡ (ಅ.1): ಪರೇಶ್ ಮೇಸ್ತಾ ಸಾವು ಪ್ರಕರಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಿಷಯವಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇದೇ ಪ್ರಕರಣವನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದರು. ಇದೀಗ ಮತ್ತೆ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ವಿರೋಧ ಪಕ್ಷ ಕಾಂಗ್ರೆಸ್ ಇದೇ ಪ್ರಕರಣವನ್ನು ಕೆದುಕಲು ಪ್ರಾರಂಭಿಸಿದೆ. ಅಲ್ಲದೇ, ಐದು ವರ್ಷದಿಂದ ನಡೆಸುತ್ತಿರುವ ತನಿಖೆಯನ್ನು ಇತ್ಯರ್ಥಗೊಳಿಸಿ ಎನ್ನುವ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮಾಡಲಾರಂಭಿಸಿದ್ದಾರೆ. ಕಳೆದ 2017ರ ಡಿಸೆಂಬರ್ ತಿಂಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಎಂಬ ಯುವಕನ ಸಾವಿನ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಡಿಸೆಂಬರ್ 6ರಂದು ನಡೆದ ಕೋಮುಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ನಡೆಸಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿದ್ದು, ಸಿಬಿಐ ತನಿಖೆಗೆ ಕೂಡಾ ವಹಿಸಲಾಗಿತ್ತು.
ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯುತ್ತಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್ ನವರು ಪರೇಶ್ ಮೇಸ್ತಾ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಸಿಬಿಐ ತನಿಖೆ ಪ್ರಾರಂಭಿಸಿ ಐದು ವರ್ಷವಾದರೂ ಇನ್ನೂ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ಬಿಜೆಪಿಗರು ಈ ಬಾರಿ ಕೂಡಾ ಇದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಪರೇಶ್ ಮೇಸ್ತಾ ಸಾವಿನ ಹಿಂದೆ ಯಾರು ಇದ್ದಾರೆ ಎಂದು ಸ್ಪಷ್ಟ ಪಡಿಸಲಿ. ಇಲ್ಲವೇ ಅಸಹಜ ಸಾವಾಗಿದ್ದರೆ, ಅಸಹಜ ಎಂದು ಘೋಷಿಸಲಿ ಅನ್ನೋ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮುಂದಿಟ್ಟಿದ್ದಾರೆ.
ಕೆಲವು ದಿನದ ಹಿಂದೆ ಬಿಜೆಪಿ ನಾಯಕರು ಪರೇಶ್ ಮೇಸ್ತಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಸಾಕ್ಷಿ ನಾಶ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಮೂರನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿಗರು ಸುಖಾಸುಮ್ಮನೇ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಕೈ ನಾಯಕರು ಕಿಡಿಕಾರಿದ್ದಾರೆ.
Paresh Mesta Murder Case: ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ!
ಇನ್ನು ಪರೇಶ್ ಮೇಸ್ತಾ ಸಾವಿನ ನಂತರ ಮಣಿಪಾಲಿನ ವೈದ್ಯರು ಹೊನ್ನಾವರಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ವರದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಸಹಜ ಸಾವು ಎಂದು ವರದಿಯಲ್ಲಿದೆ. ಆದರೂ ಬಿಜೆಪಿ ಇದನ್ನು ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ. ಮಣಿಪಾಲದ ವೈದ್ಯರೇ ಸುಳ್ಳು ಮರಣೋತ್ತರ ಪರೀಕ್ಷೆ ವರದಿ ನೀಡಿದ್ದರೆ ಅವರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಿ. ಅದನ್ನು ಬಿಟ್ಟು ಪ್ರಕರಣವನ್ನು ಇನ್ನೂ ಜೀವಂತ ಇಟ್ಟು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.
PFI Ban: ಭಾವುಕರಾದ ಹೊನ್ನಾವರದ ಪರೇಶ್ ಮೇಸ್ತಾ ತಂದೆ ಕಮಲಾಕರ್
ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಜಿಲ್ಲೆಯಲ್ಲಿ ಮತ್ತೆ ಪರೇಶ್ ಮೇಸ್ತಾ ಪ್ರಕರಣ ಜೀವ ಪಡೆಯುತ್ತಿದೆ. ಕಳೆದ ಬಾರಿ ಪ್ರಕರಣದ ಲಾಭ ಪಡೆದಿದ್ದ ಬಿಜೆಪಿಗೆ ಇನ್ನೂ ಪ್ರಕರಣ ಇತ್ಯರ್ಥ ಮಾಡದಿರುವುದು ಈ ಬಾರಿ ಹಿನ್ನಡೆಯಾಗಲಿದೆಯೇ ಇಲ್ಲವೋ ಅನ್ನುವುದನ್ನ ಕಾದು ನೋಡಬೇಕಾಗಿದೆ.