ಕ್ಲಬ್‌ಹೌಸಲ್ಲಿ ಕಿಡಿಗೇಡಿಗಳಿಂದ ಪಾಕಿಸ್ತಾನ್ ಸ್ವಾತಂತ್ರ್ಯೋತ್ಸವ! ಪಾಕ್‌ಗೆ ಭಾರತ ಸೇರಬೇಕೆಂದು ಚರ್ಚಾಗೋಷ್ಠಿ ಕಠಿಣ ಕ್ರಮಕ್ಕೆ ಗೃಹ ಸಚಿವ ಆರಗ ಸೂಚನೆ
ಬೆಂಗಳೂರು ಆ.17) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಹೊತ್ತಿನಲ್ಲೇ ಪಾಕಿಸ್ತಾನದ ಪರವಾಗಿ ಕ್ಲಬ್ ಹೌಸ್ ಆ್ಯಪ್‌ನಲ್ಲಿ ಕೆಲ ಕಿಡಿಗೇಡಿಗಳು ಚರ್ಚೆ ನಡೆಸಿರುವ ರಾಷ್ಟ್ರ ವಿರೋಧಿ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕ್ಲಬ್ ಹೌಸ್‌ನಲ್ಲಿ ಪಾಕ್ ಪರ ಪ್ರೀತಿ ತೋರಿದ ಕಿಡಿಗೇಡಿಗಳ ಪತ್ತೆಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಗ್ರೂಪ್, ಭಾರತ ವಿರೋಧಿ ಚಟುವಟಿಕೆ ತಾಣವಾಯ್ತಾ ಕರ್ನಾಟಕ?
ಆ.14ರಂದು ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ(Pakistan Independence day)ದ ದಿನವೇ ಪಾಕಿಸ್ತಾನದ ಧ್ವಜವನ್ನು ಡಿಪಿ ಆಗಿ ಬಳಸಿ ಕ್ಲಬ್ ಹೌಸ್(Clubhouse)ನಲ್ಲಿ ಚರ್ಚಾಕೂಟ ಏರ್ಪಡಿಸಿದ ಏಳೆಂಟು ಮಂದಿ ಕಿಡಿಗೇಡಿಗಳು, ಭಾರತವು ಪಾಕಿಸ್ತಾನಕ್ಕೆ ಸೇರಬೇಕು ಎಂದು ಉದ್ಧಟತನ ತೋರಿದ್ದಾರೆ. ಅಲ್ಲದೆ ಪಾಕಿಸ್ತಾನದ ರಾಷ್ಟ್ರ ಗೀತೆ ಹಾಕಿ ಮನಬಂದಂತೆ ಮಾತನಾಡಿದ್ದಾರೆ. ಭಾರತ ವಿರೋಧಿ ವಿಚಾರವನ್ನು ಚರ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಶಿವಮೊಗ್ಗ(Shivamogga)ದಲ್ಲಿ ಮಂಗಳವಾರ ಸುದ್ದಿಗಾರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ(arag jnaanendra) ಅವರು, ದೇಶದ್ರೋಹದ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕ್ಲಬ್ ಹೌಸ್ ಆ್ಯಪ್‌ನಲ್ಲಿ ಪಾಕಿಸ್ತಾನದ ಪರ ಚರ್ಚೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ತನಿಖೆಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
