ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ರೇಜರ್ ಬ್ಲೇಡ್‌ಗಳ ಬದಲಿಗೆ ಹಳೆಯ ಬಟ್ಟೆಗಳಿದ್ದ ಪಾರ್ಸೆಲ್ ಸ್ವೀಕರಿಸಿದ್ದಾರೆ. ಈ ವಂಚನೆ ಸಂಬಂಧ ಗುಡ್ ಮ್ಯಾಕ್ ಕಂಪನಿ ಹಾಗೂ ಡೆಲಿವರಿ ಸಂಸ್ಥೆ ಶ್ಯಾಡೋಫ್ಯಾಕ್ಸ್‌ ವಿರುದ್ಧ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು (ಫೆ.13): ಆನ್‌ಲೈನ್‌ ಮೂಲಕ ರೇಜರ್ ಬ್ಲೇಡ್‌ ಬುಕ್‌ ಮಾಡಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರಿಗೆ ರೇಜರ್ ಬ್ಲೇಡ್‌ ಬದಲು ಹಳೆಯ ಬಟ್ಟೆಗಳನ್ನು ಕೊಟ್ಟು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣ ವಿವರ: ಫೆ.4 ರಂದು ಫಣೀಂದ್ರ ಅವರು, ಗುಡ್ ಮ್ಯಾಕ್ ಕಂಪನಿಯ ವೆಬ್‌ಸೈಟ್‌ ಮೂಲಕ ಪುರುಷರ ರೇಜರ್ ಬ್ಲೇಡ್‌ ಅನ್ನು ಆನ್‌ಲೈನ್‌ ಮೂಲಕ ಆರ್ಡರ್ ಮಾಡಿದ್ದರು. ನಂತರ ಫೆ.9 ರಂದು ಶ್ಯಾಡೋಫಾಕ್ಸ್ ಸರ್ಫೇಸ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ಪ್ರತಿನಿಧಿ ವಿಜಯ್ ಎಂಬಾತ ಫಣೀಂದ್ರ ಅವರಿಗೆ ಕರೆ ಮಾಡಿ, ಆರ್ಡರ್ ಮಾಡಿದ ವಸ್ತು ಬಂದಿರುವುದಾಗಿ ತಿಳಿಸಿ ವಿತರಣೆಗೆ ಸಂಬಂಧಿಸಿದ ದೃಢೀಕರಣವನ್ನು ಕೇಳಿದ್ದಾನೆ. ಆ ಸಮಯದಲ್ಲಿ ಫಣೀಂದ್ರ ಅವರು ಕಚೇರಿಯಲ್ಲಿ ಇದ್ದರಿಂದ ಪಾರ್ಸಲ್‌ ಅನ್ನು ಅವರ ಮನೆ ವಿಳಾಸಕ್ಕೆ ತಲುಪಿಸುವಂತೆ ತಿಳಿಸಿದ್ದರು. 

ಅದರಂತೆ ವಿಜಯ್ ಎಂಬಾತ ಫಣೀಂದ್ರ ಅವರ ಮನೆ ವಿಳಾಸಕ್ಕೆ ವಸ್ತುವನ್ನು ತಲುಪಿಸಿ, 699 ನಗದು ಹಣವನ್ನು ಸ್ವೀಕರಿಸಿ ತೆರಳಿದ್ದಾನೆ. ಫಣೀಂದ್ರ ಅವರು ಸಂಜೆ ಮನೆಗೆ ಬಂದು ಪಾರ್ಸೆಲ್‌ ತೆರೆದು ನೋಡಿದಾಗ ಅವರು ಆರ್ಡರ್ ಮಾಡಿದ ರೇಜರ್ ಬ್ಲೇಡ್‌ ಬದಲು ಹಳೆಯ ಬಟ್ಟೆಗಳು ಇರುವುದು ಕಂಡು ಬಂದಿದೆ. ತಕ್ಷಣವೇ ವಸ್ತುವನ್ನು ವಿತರಿಸಿದ ವಿಜಯ್‌ನನ್ನು ಸಂಪರ್ಕಿಸಿದ್ದಾಗ ಪಾರ್ಸಲ್ ಒಳಗಿನ ವಸ್ತುಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿ ಸಂಬಂಧಿತ ಕಂಪನಿಯನ್ನು ಸಂಪರ್ಕಿಸಲು ಸಲಹೆ ನೀಡಿದ್ದಾನೆ.

ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೊಂದು ಹಳೆಯ ಬಟ್ಟೆಗಳನ್ನು ನೀಡಿ ಮೋಸ ಮಾಡಿರುವ ಗುಡ್ ಮ್ಯಾಕ್ಸ್‌ ಕಂಪನಿ ಹಾಗೂ ಆ ವಸ್ತುವನ್ನು ವಿತರಣೆ ಮಾಡಿರುವ ಶ್ಯಾಡೋಫ್ಯಾಕ್ಸ್‌ ಸರ್ಫೇಸ್ ಲಾಜಿಸ್ಟಿಕ್ ಸಂಸ್ಥೆಯ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಪಲೋಕಾಯುಕ್ತರು ಉಲ್ಲೇಖಿಸಿದ್ದಾರೆ. 

YouTube video player