ಬೆಂಗಳೂರು: ಹಣದಾಸೆಗೆ ಭೀಕರ ಕೊಲೆ, ಅಜ್ಜಿಯ ಕೊಂದವನಿಗೆ ಸಿಕ್ಕಿದ್ದು ನಕಲಿ ಆಭರಣ..!
ಹತ್ಯೆ ಸಂಬಂಧ ದಿನೇಶ್‌ನನ್ನು ಬಂಧಿಸಿದ ಕೆ.ಆರ್.ಪುರ ಠಾಣೆ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಹಣಕ್ಕಾಗಿ ಸುಶೀಲಮ್ಮ ಅವರನ್ನು ಹತ್ಯೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು(ಫೆ.27): ಕೆ.ಆರ್.ಪುರದಲ್ಲಿ ಹಣದಾಸೆಗೆ ವೃದ್ಧೆ ಸುಶೀಲಮ್ಮ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಂದು ಡ್ರಮ್‌ನಲ್ಲಿ ತುಂಬಿಟ್ಟಿದ್ದ ಮೃತರ ಪರಿಚಿತನಿಗೆ ಹತ್ಯೆ ಬಳಿಕ ಸಿಕ್ಕಿದ್ದು ನಕಲಿ ಆಭರಣಗಳು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹತ್ಯೆ ಸಂಬಂಧ ದಿನೇಶ್‌ನನ್ನು ಬಂಧಿಸಿದ ಕೆ.ಆರ್.ಪುರ ಠಾಣೆ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಹಣಕ್ಕಾಗಿ ಸುಶೀಲಮ್ಮ (70) ಅವರನ್ನು ಹತ್ಯೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
₹20 ಲಕ್ಷ ಸಾಲಗಾರ:
ತಮಿಳುನಾಡು ಮೂಲದ ದಿನೇಶ್ ಪತ್ನಿ ಹಾಗೂ ಮಗಳ ಜತೆ ನೆಲೆಸಿದ್ದ. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕೆಲವು ದಿನ ತಮಿಳುನಾಡಿನ ಚೆನ್ನೈನಲ್ಲಿ ನೌಕಾ ಪಡೆಯ ಹಡಗಿನಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿದಿದ್ದ. ಕೊರೋನಾ ನಂತರ ಉದ್ಯೋಗವಿರಲಿಲ್ಲ. ಮೋಜು ಮಾಡಲು ಪರಿಚಯಸ್ಥರಿಂದ ಸುಮಾರು ₹20 ಲಕ್ಷ ಸಾಲ ಮಾಡಿದ್ದ. ಹಲವು ವರ್ಷಗಳಿಂದ ಒಂದೇ ಬೀದಿಯಲ್ಲಿ ಸುಶೀಲಮ್ಮ ಹಾಗೂ ದಿನೇಶ್ ನೆಲೆಸಿದ್ದರಿಂದ ಪರಿಚಯವಿತ್ತು. ಬಿಜೆಪಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರಿಂದ ಸುಶೀಲಮ್ಮಗೆ ಸ್ಥಳೀಯ ಜನರ ಜತೆ ಹೆಚ್ಚಿನ ಒಡನಾಟವಿತ್ತು. ಹಣದ ಸಮಸ್ಯೆಯಿಂದ ಪಾರಾಗಲು ಚಿನ್ನಾಭರಣ ಧರಿಸಿಕೊಂಡು ಓಡಾಡುತ್ತಿದ್ದ ಸುಶೀಲಮ್ಮ ಅವರ ಬಳಿ ಇದ್ದ ಚಿನ್ನ ದೋಚಲು ಆತ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ
ಓಲೆ ಅಡವಿಟ್ಟು ₹11 ಸಾವಿರ ಪಡೆದ:
ಶನಿವಾರ ಮಧ್ಯಾಹ್ನ 11.30ರ ಸುಮಾರಿಗೆ ದಿನೇಶ್,ಮೀನಾಕ್ಷಿ ದೇವಾಲಯಕ್ಕೆ ಕರೆದೊಯ್ಯುವುದಾಗಿ ಹೇಳಿ ಸುಶೀಲಮ್ಮ ಅವರನ್ನು ತನ್ನ ಮನೆಗೆ ಕರೆತಂದಿದ್ದ. ಮನೆ ತೋರಿಸುವ ನೆಪದಲ್ಲಿ ಮಹಡಿಯಲ್ಲಿದ್ದ ಸ್ಟೋರ್ ರೂಮ್‌ಗೆ ಕರೆದೊಯ್ದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಬಳಿಕ ಧರಿಸಿದ್ದ ಚಿನ್ನಾಭರಣಗಳನ್ನು ದೋಚಿದ್ದ. ಆಭರಣಗಳನ್ನು ಅಡಮಾನಕ್ಕಿಡಲು ಖಾಸಗಿ ಫೈನಾನ್ಸ್ ಸಂಸ್ಥೆಗೆ ತೆರಳಿದಾಗ ಒಂದು ಜೊತೆ ಓಲೆಯನ್ನು ಹೊರತುಪಡಿಸಿ ಇನ್ನುಳಿದ ಆಭರಣಗಳು ನಕಲಿ ಎಂಬುದು ಗೊತ್ತಾಗಿದೆ. ಕೊನೆಗೆ ಆ ಓಲೆಗಳನ್ನು ಅಡವಿಟ್ಟು ₹11 ಸಾವಿರ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಂಡು ತುಂಡಾಗಿ ಕತ್ತರಿಸಿದ
ಅಡಮಾನದಿಂದ ಬಂದ ₹11,500 ಸಾವಿರದಲ್ಲಿ ಪರಿಚಿತರಿಗೆ ನೀಡಬೇಕಿದ್ದ ₹10 ಸಾವಿರ ಸಾಲ ಚುಕ್ತಾ ಮಾಡಿ ಉಳಿದ ಹಣದಲ್ಲಿ ಹರಿತವಾದ ಚಾಕು (ಮಾಂಸದಂಗಡಿಯಲ್ಲಿ ಬಳಸುವ), 10 ಲೀಟರ್ ಸಾಮರ್ಥ್ಯ ಡ್ರಮ್, ಎರಡು ದಿನಸಿ ತುಂಬುವ ಡಬ್ಬಿಗಳು ಹಾಗೂ ತ್ಯಾಜ್ಯ ತುಂಬುವ ಕವರ್ ಖರೀದಿಸಿ ಮನೆಗೆ ಮರಳಿದ್ದ. ನಂತರ ಮಹಡಿ ಕೋಣೆಯಲ್ಲಿದ್ದ ಬಾತ್ ರೂಮ್‌ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಕೈ, ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ ದಿನಸಿ ಡಬ್ಬಿಗಳಲ್ಲಿ ತುಂಬಿದ್ದಾನೆ. ಉಳಿದ ದೇಹದ ಭಾಗವನ್ನು ಆತ ಡ್ರಮ್‌ನಲ್ಲಿಟ್ಟಿದ್ದಾನೆ. ಬಳಿಕ ಆ ಕೋಣೆಯಲ್ಲಿ ರಕ್ತ ಚೆಲ್ಲಾಡಿದ್ದ ಸ್ಥಳವನ್ನು ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮುಂಜಾನೆ ಡ್ರಮ್‌ನಲ್ಲಿ ಮೃತದೇಹ
ಪತ್ನಿ ಹಾಗೂ ಮಗಳು ಮಲಗಿದ ಬಳಿಕ ಮೊದಲು ದಿನಸಿ ಡಬ್ಬಿಗಳಲ್ಲಿದ್ದ ಕೈ-ಕಾಲುಗಳನ್ನು ಮನೆ ಸಮೀಪದ ವೆಂಗಯ್ಯನಕೆರೆಯಲ್ಲಿ ಎಸೆದಿದ್ದಾನೆ. ಡ್ರಮ್ ಸಾಗಿಸಲಾಗದೆ ಓಣಿಯಲ್ಲಿಟ್ಟು ನಸುಕಿನ 3.30 ಗಂಟೆಯಲ್ಲಿ ಮನೆಗೆ ಮರಳಿದ್ದ. ಬೆಳಗ್ಗೆ ಓಣಿಯಲ್ಲಿ ಅನಾಥವಾಗಿ ಬಿದ್ದಿದ್ದ ಡ್ರಮ್ಮನ್ನು ಶಂಕೆ ಮೇರೆಗೆ ಸ್ಥಳೀಯರು ನೋಡಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿಕ್ಕಿಬಿದ್ದು ಹೇಗೆ?
ಮನೆ ಬಳಿ ಶನಿವಾರ ಬೆಳಗ್ಗೆ 11ರಲ್ಲಿ ಸುಶೀಲಮ್ಮ ಜತೆ ದಿನೇಶ್ ಮಾತನಾಡುತ್ತಿದ್ದನ್ನು ಮೃತರ ಮೊಮ್ಮಗಳು ಸೇರಿದಂತೆ ಸ್ಥಳೀಯರು ನೋಡಿದ್ದರು. ಈ ಸಂಗತಿ ತಿಳಿದ ಪೊಲೀಸರು, ದಿನೇಶ್‌ನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪತ್ನಿ, ಮಗಳನ್ನು ನೆಂಟರ ಮನೆಗೆ ಬಿಟ್ಟು ಬಂದ:
ಪೂಜಾ ಕಾರ್ಯನಿಮಿತ್ತ ಪತ್ನಿ ಹಾಗೂ ಮಗಳನ್ನು ತಮ್ಮ ಸಂಬಂಧಿಕರ ಮನೆಗೆ ಬೆಳಗ್ಗೆ 7.30ರಲ್ಲಿ ಕರೆದೊಯ್ದು ಬಿಟ್ಟು ಮನೆಗೆ ಮರಳಿದ ದಿನೇಶ್, ಸುಶೀಲಮ್ಮ ನವರ ಮನೆಗೆ ತೆರಳಿ ಮೀನಾಕ್ಷಿ ದೇವಸ್ಥಾನಕ್ಕೆ ಹೋಗೋಣ ಎಂದು ನಂಬಿಸಿ ಹೊರಡಿಸಿದ್ದಾನೆ. ನನ್ನ ಮನೆಯನ್ನು ನೋಡಿ ಬನ್ನಿ ಎಂದು ಕರೆದುಕೊಂಡು ಹೋಗಿದ್ದಾನೆ. ಈ ಕೃತ್ಯವನ್ನು ಶನಿವಾರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 2.30 ರೊಳಗೆ ಎಸಗಿದ್ದಾನೆ. ನೆಂಟರ ಮನೆಯಿಂದ ರಾತ್ರಿ ಆತನ ಪತ್ನಿ ಹಾಗೂ ಮಗಳು ಮನೆಗೆ ಮರಳಿದ್ದರು. ಆದರೆ ಅನುಮಾನ ಬಾರದಂತೆ ಆತ ನಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!
ಮೃತದೇಹ ಇಟ್ಟುಕೊಂಡೇ ಊಟ:
ಮಹಡಿಯಲ್ಲಿ ಸ್ಟೋರ್ ರೂಮ್ ಇದ್ದ ಕಾರಣ ದಿನೇಶ್ ಪತ್ನಿ ಹಾಗೂ ಮಗಳಿಗೆ ವೃದ್ದೆ ಹತ್ಯೆ ಕೃತ್ಯ ಗೊತ್ತಾಗಿಲ್ಲ. ಮಹಡಿಯ ಕೋಣೆಯಲ್ಲಿ ಮೃತದೇಹವಿಟ್ಟುಕೊಂಡೇ ರಾತ್ರಿ ಕುಟುಂಬದವರ ಜತೆ ಊಟ ಮಾಡಿ ಸಹಜವಾಗಿಯೇ ಆತ ಇದ್ದ. ತಾಯಿ-ಮಗಳು ಗಾಢ ನಿದ್ರೆಯಲ್ಲಿದ್ದಾಗ ಮೃತದೇಹವನ್ನು ಆತ ಸಾಗಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತ
ಸ್ಥಳೀಯ ಬಿಜೆಪಿ ಚಟುವಟಿಕೆಯಲ್ಲಿ ದಿನೇಶ್ ಓಡಾತ್ತಿದ್ದರಿಂದ ಸುಶೀಲಮ್ಮ ಅವರಿಗೆ ಸಾಕಷ್ಟು ಪರಿಚಯವಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೈರತಿ ಬಸವರಾಜು ಪರವಾಗಿ ಇಬ್ಬರು ಪ್ರಚಾರ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.