ಗುಬ್ಬಿಯಲ್ಲಿ ಅಕ್ರಮ: ಭ್ರಷ್ಟ ಅಧಿಕಾರಿಗಳನ್ನ ಜೈಲಿಗಟ್ಟಿಸಿದ ಶಾಸಕ ಶ್ರೀನಿವಾಸ್
* ತುಮಕೂರು ಜಿಲ್ಲೆ ಗುಬ್ಬಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಅಕ್ರಮ
* ಅಕ್ರಮ ನಡೆಸಿದ ಅಧಿಕಾರಿಗಳು ಪೊಲೀಸ್ ಬಲೆಗೆ
* 450 ಎಕರೆ ಸರ್ಕಾರಿ ಗೋಮಾಳ ಜಮೀನು ಸ್ವಾಹಃ ಸರ್ಕಾರಿ ಅಧಿಕಾರಿಗಳೇ ಸೇರಿ ನಡೆಸಿದ ಅಕ್ರಮ
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ತುಮಕೂರು.
ತುಮಕೂರು, (ಜುಲೈ.07) : ಜಿಲ್ಲೆಯಲ್ಲಿ ಅತಿದೊಡ್ಡ ಸರ್ಕಾರಿ ಜಮೀನು ಗುಳುಂ ಸ್ಕ್ಯಾಮ್ ಪತ್ತೆಯಾಗಿದೆ. ಸರ್ಕಾರಿ ಅಧಿಕಾರಿಗಳೇ ಸೇರಿಕೊಂಡು ಗುಬ್ಬಿ ತಾಲ್ಲೂಕಿನಲ್ಲಿ 450ಕ್ಕೂ ಹೆಚ್ಚು ಎಕರೆ ಸರ್ಕಾರಿ ಜಾಗ ಗುಳುಂ ಸ್ವಾಹಂ ಮಾಡಿದ್ದಾರೆ. ತಹಶೀಲ್ದಾರ್ ಸಿಹಿಯನ್ನು ನಕಲು ಮಾಡಿ, ಮೂಲ ದಾಖಲೆಗಳನ್ನು ನಾಶ ಪಡಿಸಿ ಹೊಸ ದಾಖಲೆಗಳನ್ನು ಸೃಷ್ಟಿಸಿರುವುದು ಜಗತ್ ಜಾಹೀರಾತಾಗಿದೆ. ಸರಿಸುಮಾರು ಎರಡು ಮೂರು ವರ್ಷಗಳಿಂದ ನಿರಂತರವಾಗಿ ದಾಖಲೆಗಳನ್ನು ತಿರುಚುವ ಕೆಲಸ ಎಗ್ಗಿಲ್ಲದೆ ನಡೆದಿದೆ.
ಗುಬ್ಬಿ ತಾಲ್ಲೂಕಿನ ನಾಲ್ಕು ಹೋಬಳಿಗಳಾದ ಕಸಬಾ, ಸಿ.ಎಸ್ ಪುರ, ನಿಟ್ಟೂರು, ಹಾಗಲವಾಡಿ ಹೋಬಳಿಗಳ ತಿಪ್ಪೂರು, ಹಳೇಗುಬ್ಬಿ, ನೆಟ್ಟೆಕೆರೆ, ಅಡಿಕೆಕೆರೆ, ಈಚಲುಕಾವಲ್ ದೊಡ್ಡಗುಣಿ ಬೋಸಿಂಗನಹಳ್ಳಿ, ಎರಚಲುಕಟ್ಟೆಗಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 451 ಎಕರೆ ಗೋಮಾಳ ಜಾಗದ ದಾಖಲೆಗಳನ್ನು ತಿದ್ದಲಾಗಿದೆ. ಈ 451 ಎಕರೆ ಜಾಗವನ್ನು 137 ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯ ಮಾಡಿಕೊಡಲಾಗಿದೆ. ಜಮೀನಿನ ಜಾಗದ ದಾಖಲೆ ಪತ್ರಗಳನ್ನು ತಿದ್ದಿರುವ ಹಾಗೂ ನಾಪತ್ತೆಯಾಗಿರುವ ಬಗ್ಗೆ ರೈತರು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಬಳಿ ಹೇಳಿಕೊಂಡಿದ್ದಾರೆ.
ಕಚೇರಿಯಲ್ಲೇ PDO ಜೊತೆ ಗ್ರಾ.ಪಂ ಸದಸ್ಯನ ಅನುಚಿತ ವರ್ತನೆ : Video ವೈರಲ್
ರೈತರಿಂದ ಬಂದ ದೂರನ್ನು ಶಾಸಕ ಶ್ರೀನಿವಾಸ್ ಗಂಭೀರವಾಗಿ ಪರಿಗಣಿಸಿ, ಗುಬ್ಬಿ ತಹಶೀಲ್ದಾರ್ ಆರತಿಯವರಿಗೆ ಮೌಖಿಕ ಆದೇಶ ನೀಡಿದ್ದಾರೆ. ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಅಕ್ರಮ ನಡೆದ ಸರ್ವೇಗಳ ದಾಖಲಾತಿಗಳನ್ನು ಕೇಳಿದಾಗ ಕೆಳ ಹಂತದ ಅಧಿಕಾರಿಗಳು ಸ್ಪಂದಿಸಿಲ್ಲ, ಕೊನೆಗೆ ಖುದ್ದು ತಹಶೀಲ್ದಾರ್ ಆರತಿಯವ್ರು ನೇರವಾಗಿ ನಾಡಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ತಹಶೀಲ್ದಾರ್ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣದ ಕಿಂಗ್ ಪಿನ್ ಸತೀಶ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸತೀಶ್ ದ್ವಿತೀಯ ದರ್ಜೆ ಸಹಾಯಕನಾಗಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳ ದಾಸ್ತಾನು ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ, ಈತನ ವಿಚಾರಣೆ ನಡೆಸಿದಾಗ, ಹೆಚ್ಚುವರಿ ತಹಶೀಲ್ದಾರ್ ಚೇತನನಾಂದ, ಅರಿವೆಸಂದ್ರ ಗ್ರಾಮದ ಮಾಜಿ ಗ್ರಾಪಂ ಸದಸ್ಯ ಬ್ರೋಕರ್ ಕರಿಯಣ್ಣ ಅಕ್ರಮದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಈವರೆಗೂ 19 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಗುಬ್ಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.