ನಾಲ್ಕು ವರ್ಷ ಆದರೂ ಕುಮಾರಸ್ವಾಮಿಗೆ ಬೇಲ್ ಸಿಗೋದು ಡೌಟ್ ಆಗಿದೆ. ಕ್ವಶ್ಚನ್ ಪೇಪರ್ ಲೀಕೇಜ್ ಕಿಂಗ್ ಪಿನ್ ಕುಮಾರಸ್ವಾಮಿಗೆ ಜಾಮೀನು ವಿಳಂಬವಾಗುತ್ತಿದೆ.
ಬೆಂಗಳೂರು(ಸೆ.13): ಕಳೆದ 2015-16ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮೊದಲ ಆರೋಪಿ ಕುಮಾರಸ್ವಾಮಿಗೆ ಜಾಮೀನು ನೀಡಲು ನಿರಾಕರಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆ ವಿಳಂಬ ಮಾಡುತ್ತಿರುವ ಬಗ್ಗೆ ವಿಚಾರಣಾ ನ್ಯಾಯಾಲಯದ ವಿವರಣೆ ಪಡೆಯುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿದೆ. ಕುಮಾರಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ವಿಚಾರಣಾ ನ್ಯಾಯಾಲಯದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಅಂಶ ಪರಿಗಣಿಸಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ.
ಅಲ್ಲದೆ, ಹೈಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ಅವಧಿ ವಿಸ್ತರಿಸುವಂತೆ ಹೈಕೋರ್ಟ್‌ಗೆ ಮನವಿಯನ್ನೂ ಸಲ್ಲಿಸಿಲ್ಲ. ಇದು ವಿಚಾರಣಾ ನ್ಯಾಯಾಲಯದ ಬೇಜವಾಬ್ದಾರಿತನ ಹಾಗೂ ನಿಷ್ಕಿ್ರಯ ಧೋರಣೆಯನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿರುವ ಪೀಠ, ಹೈಕೋರ್ಟ್ ಆದೇಶವನ್ನು ಏಕೆ ಪಾಲನೆ ಮಾಡಲಾಗಿಲ್ಲ ಎಂಬುದಕ್ಕೆ ವಿವರಣೆ ಕೇಳಿ ವಿಚಾರಣಾ ನ್ಯಾಯಾಲಯಕ್ಕೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.
ನ್ಯಾಯಾಂಗ ಬಂಧನದಲ್ಲಿ ಕುಮಾರಸ್ವಾಮಿ:
2016ರ ಮಾ.21ರಂದು ನಡೆದಿದ್ದ ದ್ವಿತೀಯ ಪಿಯು ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅದೇ ದಿನ ಬೆಳಗ್ಗೆ 7.30ಕ್ಕೆ ಸೋರಿಕೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, 2016ರ ಮೇ 10ರಂದು ಕುಮಾರಸ್ವಾಮಿಯನ್ನು ಬಂಧಿಸಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಕುಮಾರಸ್ವಾಮಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಮಾತೆತ್ತಿದರೆ ರೇಪ್ ಕೇಸ್ ಹಾಕ್ತೀನಿ ಅಂತಾಳೆ ಈ ಆಂಟಿ; ಹುಷಾರ್ರಪ್ಪೋ ಹುಷಾರ್..!
ಅರ್ಜಿದಾರರ ಪರ ವಕೀಲರು, ಕುಮಾರಸ್ವಾಮಿ ಈ ಮುನ್ನ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2019ರ ಸೆ.9ರಂದು ವಜಾಗೊಳಿಸಿದ್ದ ಇದೇ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಆದರೆ, ಈವರೆಗೆ ವಿಚಾರಣೆಯಲ್ಲಿ ಪ್ರಗತಿಯಾಗಿಲ್ಲ. ಪ್ರಕರಣದ 18 ಆರೋಪಿಗಳ ಪೈಕಿ ಈಗಾಗಲೇ 17 ಮಂದಿಗೆ ಜಾಮೀನು ದೊರೆತಿದ್ದು, ಅರ್ಜಿದಾರನಿಗೂ ಜಾಮೀನು ಮಂಜೂರು ಮಾಡಬೇಕೆಂದು ಕೋರಿದರು.
ವಿಚಾರಣೆ ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಜಾಮೀನು ನೀಡಲಾಗದು. ಈಗಾಗಲೇ ಜಾಮೀನು ಪಡೆದಿರುವ ಹಲವು ಆರೋಪಿಗಳು ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಿರುವಾಗ ಮೊದಲ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ಆತನೂ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಜಾಮೀನು ನಿರಾಕರಿಸಿತು.
