ಬೆಂಗಳೂರು(ಡಿ.16): ರಾಜಧಾನಿಯಲ್ಲಿ ಪೇಜ್‌ ತ್ರಿ ಪಾರ್ಟಿಗಳು ಸೇರಿದಂತೆ ಡ್ರಗ್ಸ್‌ ದಂಧೆಕೋರರಿಗೆ ಕೊಕೇನ್‌ ಪೂರೈಸುತ್ತಿದ್ದ ವಿದೇಶಿ ಮೂಲದ ಪ್ರಮುಖ ಪೆಡ್ಲರ್‌ವೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ನೈಜೀರಿಯಾ ಮೂಲದ ಚಿಡೀಬೆರೆ ಆಂಬ್ರೋಸ್‌ ಅಲಿಯಾಸ್‌ ಚೀಫ್‌ ಬಂಧಿತ. ಕೆಲ ದಿನಗಳಿಂದ ನಿರಂತರವಾಗಿ ಡ್ರಗ್ಸ್‌ ಪ್ರಕರಣದಲ್ಲಿ ನೈಜೀರಿಯಾ ಮೂಲದ ಪೆಡ್ಲರ್‌ಗಳು ಸಿಸಿಬಿ ಗಾಳಕ್ಕೆ ಬಿದ್ದಿದ್ದರು. ಈ ಪೆಡ್ಲರ್‌ಗಳ ವಿಚಾರಣೆಗೆ ಆಂಬ್ರೋಸ್‌ ಕೊಕೇನ್‌ ಪೂರೈಸುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾವೆಲ್ಸ್‌ ಏಜೆನ್ಸಿ ಸೋಗಲ್ಲಿ ಡ್ರಗ್ಸ್‌ ಮಾಫಿಯಾ: 32 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಐದು ವರ್ಷಗಳ ವ್ಯವಹಾರಿಕ ವೀಸಾದಡಿ ನಗರಕ್ಕೆ ಬಂದಿದ್ದ ಆಂಬ್ರೋಸ್‌, ಬಾಣಸವಾಡಿಯಲ್ಲಿ ನೆಲೆಸಿದ್ದ. ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲದ ಜತೆ ನಂಟು ಹೊಂದಿದ್ದ ಆತ, ಬೆಂಗಳೂರಿನಲ್ಲಿ ಪ್ರಮುಖ ಕೊಕೇನ್‌ ಪೂರೈಕೆದಾರನಾಗಿ ಕುಖ್ಯಾತಿ ಪಡೆದಿದ್ದ. ವಿದೇಶದಿಂದ ಕಳ್ಳ ಮಾರ್ಗದಲ್ಲಿ ಕೊಕೇನ್‌ ತರಿಸಿಕೊಳ್ಳುತ್ತಿದ್ದ ಆಂಬ್ರೋಸ್‌, ನಂತರ ನೈಜೀರಿಯಾ ಪೆಡ್ಲರ್‌ಗಳ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ. ಮೂರು ತಿಂಗಳಿಂದ ನಿರಂತರ ಡ್ರಗ್ಸ್‌ ದಂಧೆ ವಿರುದ್ಧ ಕಾರ್ಯಾಚರಣೆಯಲ್ಲಿ ಕೆಲವು ನೈಜೀರಿಯಾ ಪೆಡ್ಲರ್‌ಗಳು ಸೆರೆಯಾಗಿದ್ದರು. ಆಗ ವಿಚಾರಣೆ ವೇಳೆ ಆಂಬ್ರೋಸ್‌ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ತನ್ನ ಸಹಚರರು ಬಂಧಿತರಾದ ಬಳಿಕ ಆತ ಭೂಗತನಾಗಿದ್ದ. ಕೊನೆಗೆ ಎರಡು ತಿಂಗಳ ಸತತ ಪ್ರಯತ್ನದ ಫಲವಾಗಿ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಟಿಯರ ಕೇಸಲ್ಲಿ ನಂಟು

ನಗರದ ಪಂಚಾತಾರ ಹೋಟೆಲ್‌, ಪಬ್‌, ಕ್ಲಬ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದ್ದ ಪೇಜ್‌ ತ್ರಿ ಪಾರ್ಟಿಗಳಿಗೆ ಸಹ ಆರೋಪಿ ಕೊಕೇನ್‌ ಪೂರೈಸಿರುವ ಮಾಹಿತಿ ಇದೆ. ಅಂತೆಯೇ ಕನ್ನಡ ಚಲನಚಿತ್ರ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ವಿರುದ್ಧದ ಡ್ರಗ್ಸ್‌ ಪ್ರಕರಣದಲ್ಲಿ ಸೆರೆಯಾಗಿರುವ ನೈಜೀರಿಯಾ ಮೂಲದ ಬ್ಲ್ಯಾಕಿ ಜತೆ ಆಂಬ್ರೋಸ್‌ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ನಟಿಯರ ಡ್ರಗ್ಸ್‌ ಕೇಸ್‌ನಲ್ಲಿ ಕೂಡಾ ಆಂಬ್ರೋಸ್‌ನನ್ನು ಆರೋಪಿಯಾಗಿದ್ದಾನೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.