ಬೆಂಗಳೂರು(ಡಿ. 02): ರಾಜಧಾನಿಯಲ್ಲಿ ಡ್ರಗ್ಸ್‌ ದಂಧೆ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 4 ಮಂದಿ ಪೆಡ್ಲರ್‌ಗಳನ್ನು ಸೆರೆ ಹಿಡಿದು ಸುಮಾರು 32 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಟ್ರಾವೆಲ್ಸ್‌ ಏಜೆನ್ಸಿ ಸೋಗಿನಲ್ಲಿ ಡ್ರಗ್ಸ್‌ ಮಾಫಿಯಾದಲ್ಲಿ ತೊಡಗಿದ್ದ ಆರೋಪಿ ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೂಡಲಪಾಳ್ಯದ ಹತ್ತಿರದ ಸಂಜೀವಿನಿನಗರದ ಆರ್‌.ಪ್ರದೀಪ್‌ ಕುಮಾರ್‌ ಬಂಧಿನಾಗಿದ್ದು, ಆರೋಪಿಯಿಂದ 30 ಲಕ್ಷ ಮೌಲ್ಯದ 60 ಕೆ.ಜಿ. ಗಾಂಜಾ ವಶಕ್ಕೆ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ಎನ್‌.ಎಂ.ರಸ್ತೆಯಲ್ಲಿ ಗಾಂಜಾ ಮಾರಾಟ ಯತ್ನಿಸಿದ್ದಾಗ ಆರೋಪಿಯನ್ನು ಬಂಧಿಸಲಾಯಿತು. ಈ ವೇಳೆ ತಪ್ಪಿಸಿಕೊಂಡಿರುವ ಸಲೀಂ ಎಂಬಾತನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐದು ವರ್ಷಗಳಿಂದ ಎಸ್‌.ಜೆ.ಪಾರ್ಕ್ ಸಮೀಪ ಟ್ರಾನ್ಸ್‌ ಪೋರ್ಟ್‌ ಸಲ್ಯೂಷನ್‌(ಬಿಟಿಎಸ್‌) ಎಂಬ ಹೆಸರಿನಲ್ಲಿ ಪ್ರದೀಪ್‌ ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ದುರಾಸೆಗೆ ಡ್ರಗ್ಸ್‌ ದಂಧೆಗಿಳಿದು ಈಗ ಜೈಲು ಸೇರಿದ್ದಾನೆ. ಐದು ವರ್ಷಗಳ ಹಿಂದೆ ಆತನಿಗೆ ಕೋಲಾರದ ಸಲೀಂ ಎಂಬಾತ ಗಾಂಜಾ ಪೂರೈಸುತ್ತಿದ್ದ. ಬಳಿಕ ತನ್ನ ಕಾರುಗಳಲ್ಲಿ ಪ್ರದೀಪ್‌ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಮಗಳೂರು: ಗಾಂಜಾ ಸಾಗಾಟ, ನಾಲ್ವರ ಬಂಧನ

ಬ್ಯಾಂಕ್‌ಗಳಲ್ಲಿ ಕಾರುಗಳ ಖರೀದಿಗೆ ಚಾಲಕರಿಗೆ ಪ್ರದೀಪ್‌ ನೆರವಾಗುತ್ತಿದ್ದ. ತನ್ನ ಏಜೆನ್ಸಿ ಹೆಸರಿನಲ್ಲಿ ಕಂತಿನ ರೂಪದಲ್ಲಿ ಕಾರು ಖರೀದಿಸಿ ಚಾಲಕರಿಗೆ ಆತ ನೀಡುತ್ತಿದ್ದ. ಆ ಸಾಲದ ಕಂತು ಮುಗಿದ ಬಳಿಕ ಏಜೆನ್ಸಿಗೆ ಕಾರುಗಳನ್ನು ಚಾಲಕರು ಮರಳಿಸುತ್ತಿದ್ದರು. ಈ ವ್ಯವಹಾರದಲ್ಲಿ ಆತನಿಗೆ ಕಮಿಷನರ್‌ ಸಿಗುತ್ತಿತ್ತು. ಆದರೆ ಡ್ರಗ್‌ ಮಾರಾಟದಲ್ಲಿ ಚಾಲಕರ ಪಾತ್ರ ಕಂಡು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

10 ಕೆ.ಜಿ. ಗಾಂಜಾ ವಶ

ಉಳ್ಳಾಲ ಉಪ ನಗರದ ಕೆರೆ ಸಮೀಪ ಬಸ್‌ ನಿಲ್ದಾಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಪೆಡ್ಲರ್‌ವೊಬ್ಬ ಜ್ಞಾನಭಾರತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕುಣಿಗಲ್‌ ತಾಲೂಕಿನ ಪುನೀತ್‌ ಬಂಧಿತನಾಗಿದ್ದು, ಆರೋಪಿಯಿಂದ .2 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಉಳ್ಳಾಲ ಉಪ ನಗರದ ಹತ್ತಿರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಆರೋಪಿ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರುಂಧತಿ ನಗರ ಪಾರ್ಕ್ ಬಳಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಮತ್ತಿಬ್ಬರು ಪೆಡ್ಲರ್‌ಗಳು ಚಂದ್ರಾಲೇಔಟ್‌ ಪೊಲೀಸರಿಗೆ ಸೆರೆಯಾಗಿದ್ದಾರೆ. ಮಧು ಮತ್ತು ವಿಜಯಕುಮಾರ್‌ ಬಂಧಿತರಾಗಿದ್ದು, 395 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆ ಸಮೀಪ ಚರಸ್‌ ಮಾರಾಟ ಮಾಡಲು ಬಂದಿದ್ದ ಫೆಡ್ರಿಕ್‌ ಮೆಡಾರ್ಡೋನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿ ಬಳಿ 665 ಗ್ರಾಂ ಚರಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.