ಎನ್ಐಎ ತನಿಖೆಗೆ ಎಲ್ಲರೂ ಒತ್ತಾಯಿಸೋದು ಯಾಕೆ ಅಂತ ಉತ್ತರ ಸಿಕ್ತು!
ಯಾವುದೇ ಹೈ ಪ್ರೊಫೈಲ್ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಯಾಕೆ ಎಲ್ಲರೂ ಎನ್ಐಎಗೆ ತನಿಖೆ ವಹಿಸಿ ಅಂತ ಒತ್ತಾಯಿಸ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎನ್ಐಎ ಕೇಸ್‌ಗಳ ಶಿಕ್ಷೆ ಪ್ರಮಾಣ ಶೇ.93.7 ರಷ್ಟಿದೆ.
ವರದಿ: ರಮೇಶ್.ಕೆ.ಹೆಚ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜು.30): ಯಾವುದೇ ಹೈ ಪ್ರೊಫೈಲ್ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಯಾಕೆ ಎಲ್ಲರೂ ಎನ್ಐಎಗೆ ತನಿಖೆ ವಹಿಸಿ ಅಂತ ಒತ್ತಾಯಿಸಿಸ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಡೀ ದೇಶದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ ಕೇಸ್‌ಗಳ ಶಿಕ್ಷೆ ಪ್ರಮಾಣವೇ ಹೇಳುತ್ತದೆ ಎನ್ಐಎ ವಿಶೇಷತೆ ಏನು ಎಂಬುದನ್ನು. ಸದ್ಯ ಕರ್ನಾಟಕ ಸೇರಿ ಇಡೀ ದೇಶದಲ್ಲಿ ಎನ್ಐಎ ತನಿಖೆ ಮಾಡಿದ ಶೇ.93.7ರಷ್ಟು ಕೇಸ್‌ಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ವಿಶೇಷ ಅಂದ್ರೆ ಹಲವು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನೂ ಎನ್ಐಎ ವಿಶೇಷ ನ್ಯಾಯಾಲಯಗಳು ನೀಡಿವೆ. ಎನ್ಐಎ ಅಧಿಕಾರಿಗಳು ಯುಎಪಿಎ ಕಾಯಿದೆ ಅಡಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ರೆ ಜಾಮೀನು ಸಿಗೋದಂತು ಕನಸಿನ ಮಾತು. ಕರ್ನಾಟಕದಲ್ಲಿ ಮಟ್ಟಿಗೆ ನೋಡೋದಾದ್ರೆ ಕಳೆದ 5-6 ವರ್ಷಗಳಲ್ಲಿ ಎನ್ಐಎಗೆ ವಹಿಸಿದ ಕೇಸ್‌ಗಳಲ್ಲಿ ಬಹುತೇಕರಿಗೆ ಜಾಮೀನು ಸಿಕ್ಕಲ್ಲ. 2016ರಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯ ಆರೋಪಿಗಳು ಇಂದಿಗೂ ಜೈಲಿನಲ್ಲೇ ಕಂಬಿ ಎಣಿಸುತ್ತಿದ್ದಾರೆ. ರುದ್ರೇಶ್ ಕೊಲೆಯಲ್ಲಿ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರೇ ಆರೋಪಿಗಳಾಗಿದ್ದಾರೆ. 2016ರಲ್ಲಿ ಅರೆಸ್ಟ್ ಆಗಿರುವ ಆರೋಪಿಗಳು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರೂ, ಈವರೆಗೂ ಜಾಮೀನು ಸಿಕ್ಕಿಲ್ಲ. ಎನ್ಐಎ ಅಧಿಕಾರಿಗಳ ತನಿಖೆ ನಡೆಸಿದ್ರೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಅವಕಾಶ ಆಗದಂತೆ ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸ್ತಾರೆ.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣವನ್ನೂ ರಾಜ್ಯ ಸರ್ಕಾರ ಎನ್ಐಎಗೆ ವಹಿಸಿದ್ದು ತನಿಖೆ ಮುಂದುವರೆಸಿದೆ. ಆರೋಪಿಗಳು ಅರೆಸ್ಟ್ ಆಗಿ 6 ತಿಂಗಳಾಗಿದೆ. ಈವರೆಗೆ ಅವರಿಗೆ ಜಾಮೀನು ಸಿಕ್ಕಿಲ್ಲ. ಎನ್ಐಎ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಆರೋಪ ಪಟ್ಟಿ ಸಲ್ಲಿಸುವ ಹಂತಕ್ಕೆ ತಲುಪಿದ್ದಾರೆ. ಅಲ್ಲದೆ, ಹರ್ಷ ಕೊಲೆ ಆರೋಪಿಗಳ ಹಿಂದೆ ಹಲವು ಉಗ್ರ ಶಕ್ತಿಗಳು ಇರುವ ಬಗ್ಗೆಯೂ ಸಾಕ್ಷಿಗಳು ಲಭ್ಯವಾಗಿದ್ದು ತನಿಖೆ ಮುಂದುರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ NIAಗೆ ಹಸ್ತಾಂತರ
ಅಷ್ಟೇ ಅಲ್ಲದೆ, ಮೈಸೂರಿನ ಕೋರ್ಟ್‌ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಕೇಸ್, 2013ರಲ್ಲಿ ಪತ್ರಕರ್ತ, ಈಗಿನ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಪತ್ರಕರ್ತರ ಹತ್ಯೆ ಸಂಚಿನ ಪ್ರಕರಣಗಳಲ್ಲಿಯೂ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇನ್ನೂ ಹೈದ್ರಾಬಾದ್ನಲ್ಲಿ 2013ರ ಫೆಬ್ರವರಿಯಲ್ಲಿ ನಡೆದಿದ್ದ ಅವಳಿ ಬಾಂಬ್ ಸ್ಪೋಟ ಕೇಸ್‌ನಲ್ಲಿ ಆರೋಪಿಗಳಿಗೇ ಮೂರೇ ವರ್ಷದಲ್ಲಿ ಗಲ್ಲು ಶಿಕ್ಷೆ ಕೊಡಿಸಿದ ಕೀರ್ತಿ ಎನ್ಐಎ ಗೆ ಸಂದಿದೆ. ಯಾಸೀನ್ ಭಟ್ಕಳ್ ಸೇರಿ ಐವರು ಆರೋಪಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.
Praveen Nettaru Murder Case; ಕೇರಳದಲ್ಲಿ ಮೂರನೇ ವ್ಯಕ್ತಿ ಬಂಧನ
ಇದೇ ರೀತಿ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನೂ ಕೂಡ ಎನ್ಐಎ ವಹಿಸುವಂತೆ ಒತ್ತಡ ಹೆಚ್ಚಿದ ಕಾರಣ ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ಆದೇಶ ಹೊರಡಿಸಿದೆ. ಎನ್ಐಎ ಅಧಿಕಾರಿಗಳ ತನಿಖೆ ಪರಿ ಹಾಗೂ ಶಿಕ್ಷೆಯ ಪ್ರಮಾಣವೇ ಎನ್ಐಎ ತಾಕತ್ತನ್ನು ಎತ್ತಿ ಹೇಳುತ್ತಿವೆ.