ಕೇಂದ್ರ ಸರ್ಕಾರದ .7 ಕೋಟಿ ಮೊತ್ತದ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ತನ್ನ ಕಚೇರಿಗೆ ಕರೆಸಿಕೊಂಡು ನಕಲಿ ರಿವಾಲ್ವರ್‌ನಿಂದ ಜೀವ ಬೆದರಿಕೆ ಹಾಕಿ ಸಿವಿಲ್‌ ಗುತ್ತಿಗೆದಾರನಿಂದ .25 ಲಕ್ಷ ಸುಲಿಗೆ ಮಾಡಿದ್ದ ಸ್ವಯಂ ಸೇವಾ ಸಂಸ್ಥೆಯೊಂದರ ಮುಖ್ಯಸ್ಥೆ ಹಾಗೂ ಆಕೆಯ ಸಹಚರನನ್ನು ಬ್ಯಾಟರಾಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.25 ): ಕೇಂದ್ರ ಸರ್ಕಾರದ .7 ಕೋಟಿ ಮೊತ್ತದ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ತನ್ನ ಕಚೇರಿಗೆ ಕರೆಸಿಕೊಂಡು ನಕಲಿ ರಿವಾಲ್ವರ್‌ನಿಂದ ಜೀವ ಬೆದರಿಕೆ ಹಾಕಿ ಸಿವಿಲ್‌ ಗುತ್ತಿಗೆದಾರನಿಂದ .25 ಲಕ್ಷ ಸುಲಿಗೆ ಮಾಡಿದ್ದ ಸ್ವಯಂ ಸೇವಾ ಸಂಸ್ಥೆಯೊಂದರ ಮುಖ್ಯಸ್ಥೆ ಹಾಗೂ ಆಕೆಯ ಸಹಚರನನ್ನು ಬ್ಯಾಟರಾಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಸ್ತೆಯ ಜನತಾ ಕಾಲೋನಿ ನಿವಾಸಿ ಪುಷ್ಪಲತಾ ಹಾಗೂ ಬ್ಯಾಟರಾಯನಪುರದ ಆಕೆಯ ಸಹಚರ ರಾಕೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ .20 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಹನುಮಂತನಗರದ ರೌಡಿ ಅಯ್ಯಪ್ಪ ಅಲಿಯಾಸ್‌ ಅರ್ಜುನ್‌ ಹಾಗೂ ಸಂತೋಷ್‌ ಪತ್ತೆಗೆ ತನಿಖೆ ನಡೆದಿದೆ.

ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ಪಂಗನಾಮ; ಕೋಟ್ಯಂತರ ರೂ. ಹಣದೊಂದಿಗೆ ಎಸ್ಕೆಪ್!

ಜನತಾ ಕಾಲೋನಿಯ ಪುಷ್ಪಲತಾ, ಏಳು ವರ್ಷಗಳ ಹಿಂದೆ ರಾಷ್ಟ್ರಪತಿ ದಿ.ಡಾ.ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರಿನಲ್ಲಿ ಟ್ರಸ್ಟ್‌ವೊಂದನ್ನು ಸ್ಥಾಪಿಸಿದ್ದಳು. ಮೈಸೂರು ರಸ್ತೆಯ ಬ್ಯಾಟರಾಯನಪುರದ ಗಾಳಿ ಅಂಜನೇಯ ಸ್ವಾಮಿ ದೇವಾಲಯ ಬಳಿ ಟ್ರಸ್ಟ್‌ ಕಚೇರಿ ಹೊಂದಿದ್ದ ಆಕೆ, ಆ ಟ್ರಸ್ಟ್‌ ಹೆಸರಿನಲ್ಲಿ ಕಪ್ಪು ಹಣ ಸಕ್ರಮಗೊಳಿಸುವ ಬ್ಲಾಕ್‌ ಆ್ಯಂಡ್‌ ವೈಟ್‌ ದಂಧೆ ಹಾಗೂ ಸರ್ಕಾರಿ ಅನುದಾನ ಮತ್ತು ಗುತ್ತಿಗೆ ಕೊಡಿಸುವುದಾಗಿ ಜನರಿಗೆ ನಂಬಿಸಿ ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಳು. ಈಕೆಗೆ ರೌಡಿ ಅಯ್ಯಪ್ಪ, ರಾಕೇಶ್‌ ಹಾಗೂ ಸಂತೋಷ್‌ ಸಾಥ್‌ ನೀಡಿದ್ದರು. ಒಂದೂವರೆ ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಸೂರಜ್‌ಗೆ ಪುಷ್ಪಲತಾ ಪರಿಚಯವಾಗಿದ್ದಳು. ಆಗ ಸರ್ಕಾರದ ಗುತ್ತಿಗೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದಳು. ಆ ವೇಳೆ ಆಕೆಗೆ ಸೂರಜ್‌ ಬಳಿ ಹಣವಿದೆ ಎಂಬುದು ಖಚಿತವಾಗಿತ್ತು. ಆದರೆ ಯೋಜಿತ ಕೆಲಸವಾಗದ ಕಾರಣ ಪುಷ್ಪಲತಾಳ ಸಂಪರ್ಕವನ್ನು ಸೂರಜ್‌ ಕಡಿತಗೊಳಿಸಿದ್ದ. ಹೆಚ್ಚು ಕಮ್ಮಿ ಒಂದು ವರ್ಷ ಇಬ್ಬರ ನಡುವೆ ಮಾತುಕತೆ ಇರಲಿಲ್ಲ.

ಪುಷ್ಪಲತಾಳೇ ಸೂರಜ್‌ಗೆ ಕರೆ ಮಾಡಿ ಕೇಂದ್ರ ಸರ್ಕಾರದ .7 ಕೋಟಿ ಮೌಲ್ಯದ ಪ್ರಾಜೆಕ್ಟ್ ನಿಮಗೆ ಕೊಡಿಸುವುದಾಗಿ ಹೇಳಿದ್ದಳು. ಆ ಮಾತು ನಂಬಿದ ಸೂರಜ್‌, ಆ.18ರಂದು ಆಕೆಯ ಟ್ರಸ್ಟ್‌ ಕಚೇರಿಗೆ ಹೋಗಿದ್ದರು. ಆ ವೇಳೆ ಕಚೇರಿಯಲ್ಲಿ ಪುಷ್ಪಲತಾ ಹಾಗೂ ರಾಕೇಶ್‌ ಇದ್ದರು. ಕೆಲ ನಿಮಿಷಗಳ ನಂತರ ರೌಡಿ ಅಯ್ಯಪ್ಪ ಹಾಗೂ ಸಂತೋಷ್‌ ಸಹ ಬಂದಿದ್ದಾರೆ. ಆಗ ಕಚೇರಿ ಬಾಗಿಲು ಹಾಕಿ ಸೂರಜ್‌ ಮೇಲೆ ಹಲ್ಲೆ ನಡೆಸಿದ ಪುಷ್ಪಲತಾ, ಆತನಿಗೆ ಏರ್‌ ಗನ್‌ ತೋರಿಸಿ .4 ಕೋಟಿ ಕೊಡದೆ ಹೋದರೆ ಜೀವ ತೆಗೆಯುತ್ತೇವೆ ಎಂದು ಬೆದರಿಸಿದ್ದಾಳೆ. ಆಗ ತನ್ನ ಬಳಿ ಹಣ ಇಲ್ಲ ಎಂದ ಸೂರಜ್‌ ಮೇಲೆ ಹಲ್ಲೆ ನಡೆಸಿ ಆರೋಪಿಗಳು, ಕೈ-ಕಾಲು ಕಟ್ಟಿಬಂಧನಲ್ಲಿಟ್ಟಿದ್ದಾರೆ. ಕೊನೆಗೆ ತನ್ನ ಪರಿಚಿತ ಫೈನಾಶಿಯರ್‌ ಮೂಲಕ ಹಣ ಕೊಡಿಸುವುದಾಗಿ ಸೂರಜ್‌ ಹೇಳಿದ್ದಾನೆ.

ರೇಪ್‌ ಕೇಸ್‌ ಹಾಕುವ ಬೆದರಿಕೆ:

ಅಂತೆಯೇ ಫೈನಾಶಿಯರ್‌ಗೆ ಸೂರಜ್‌ನಿಂದ ಆರೋಪಿಗಳು ಕರೆ ಮಾಡಿಸಿದ್ದಾರೆ. ಆದರೆ ಸೂರಜ್‌ ಬಾರದೆ ತಾನು ಹಣ ಕೊಡುವುದಿಲ್ಲ ಎಂದಿದ್ದಾನೆ. ಕೊನೆಗೆ ಸೂರಜ್‌ನನ್ನು ಫೈನಾಶಿಯರ್‌ ಮನೆಗೆ ಕರೆದೊಯ್ದು .25 ಲಕ್ಷ ವಸೂಲಿ ಮಾಡಿದ ಪುಷ್ಪಲತಾ ತಂಡ, ಬಳಿಕ ಆತನಿಗೆ ನೀನು ಪೊಲೀಸರಿಗೆ ದೂರು ನೀಡಿದರೆ ರೇಪ್‌ ಕೇಸ್‌ ಹಾಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದಾಳೆ. ಎರಡು ದಿನದ ಬಳಿಕ ಸೂರಜ್‌ ಬ್ಯಾಟರಾಯನಪುರ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಅದರನ್ವಯ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ ತಂಡ, ದೂರು ದಾಖಲಾದ ಬಳಿಕ ನಗರ ತೊರೆದು ಮಂಗಳೂರು ಸೇರಿದ್ದ ಪುಷ್ಪಲತಾಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಲ ತೀರಿಸಲು ಸುಲಿಗೆ: ಪುಷ್ಪಾ

ತಾನು ಸಾಲ ಮಾಡಿಕೊಂಡಿದ್ದೆ. ಹೀಗಾಗಿ ಸೂರಜ್‌ ಬಳಿ ಹಣವಿದೆ ಎಂದು ತಿಳಿದು ಸುಲಿಗೆ ಮಾಡಿದ್ದೆ. ಸೂರಜ್‌ ಬಾರಿ ಜಿಪುಣ. ಹಣಕಾಸಿನ ಸಹಾಯ ಕೇಳಿದರೆ ಆತ ಕೊಡುತ್ತಿರಲಿಲ್ಲ. ಹೀಗಾಗಿ ರೌಡಿ ಅಯ್ಯಪ್ಪನ ನೆರವು ಪಡೆದು ಹಣ ದೋಚಲು ಸಂಚು ರೂಪಿಸಿದೆ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ ಎನ್ನಲಾಗಿದೆ.

ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ಸೆಕ್ರೆಟರಿ ಎಸ್ಕೇಪ್!

ನಟೋರಿಯಸ್‌ ರೌಡಿ ಅಯ್ಯಪ್ಪ:

ಅಯ್ಯಪ್ಪ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಕೊಲೆ ಹಾಗೂ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌ ಕೃತ್ಯಗಳ ಹಿನ್ನಲೆಯಲ್ಲಿ ಜೆ.ಪಿ.ನಗರ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿತೆರೆಯಲಾಗಿದೆ.