ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ, ಮೃತಪಟ್ಟ ಬಲೂನ್ ವ್ಯಾಪಾರಿ ಸಲೀಂ ಅವರನ್ನೇ ಪ್ರಮುಖ ಆರೋಪಿಯನ್ನಾಗಿಸಿ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಾಯಗೊಂಡ ಪ್ರವಾಸಿಗರೊಬ್ಬರ ದೂರಿನ ಮೇರೆಗೆ, ನಿರ್ಲಕ್ಷ್ಯತನದ ಆರೋಪದ ಮೇಲೆ ಈ ಕ್ರಮ.
ಮೈಸೂರು (ಡಿ.26): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಬಲೂನ್ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಬಲೂನ್ ವ್ಯಾಪಾರಿ ಸಲೀಂ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರವಾಸಿಗರೊಬ್ಬರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಗಾಯಾಳು ಕೊಟ್ರೇಶ್ ಬೀರಪ್ಪ ಹೇಳಿಕೆ ಆಧರಿಸಿ ಪ್ರಕರಣ
ಈ ಸ್ಫೋಟದಲ್ಲಿ ಗಾಯಗೊಂಡಿದ್ದ ರಾಣೆಬೆನ್ನೂರು ಮೂಲದ ಕೊಟ್ರೇಶ್ ಬೀರಪ್ಪ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಎಫ್‌ಡಿಎ (FDA) ಆಗಿ ಕಾರ್ಯನಿರ್ವಹಿಸುತ್ತಿರುವ ಕೊಟ್ರೇಶ್ ಬೀರಪ್ಪ ಅವರು ತಮ್ಮ ಕುಟುಂಬದೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದರು. ತಮ್ಮ ಮಕ್ಕಳಿಗೆ ಬಲೂನ್ ಕೊಡಿಸಲು ಬಂದಿದ್ದ ವೇಳೆ ಬಲೂನ್ ವ್ಯಾಪಾರಿ ಸಲೀಂ ಸೈಕಲ್ ಮೇಲೆ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗೆ ಗಾಳಿ ತುಂಬಿಸುತ್ತಿದ್ದರು. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.
ಲಕ್ಷ್ಮೀ, ಮಂಜುಳಾ ಹಾಗೂ ಶಹೀನಾಗೆ ಗಂಭೀರ ಗಾಯ
ಸಿಲಿಂಡರ್ ಸ್ಫೋಟದ ತೀವ್ರತೆಗೆ ಕೊಟ್ರೇಶ್ ಬೀರಪ್ಪ ಅವರ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಸ್ಥಳದಲ್ಲಿದ್ದ ಲಕ್ಷ್ಮೀ, ಮಂಜುಳಾ ಹಾಗೂ ಶಹೀನಾ ಶಬ್ಬೀರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಪಾರಿ ಸಲೀಂ ಅವರ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್‌ನಲ್ಲಿ ಮೃತ ಸಲೀಂ ಎ-1 ಆರೋಪಿ
ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ಸಿಲಿಂಡರ್ ಬಳಕೆ ಮಾಡಿದ್ದಕ್ಕಾಗಿ ಸಲೀಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಟ್ರೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಸಲೀಂ ಹೆಸರನ್ನು ಎಫ್‌ಐಆರ್‌ನಲ್ಲಿ ಎ-1 ಆರೋಪಿಯಾಗಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.


