ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು (ಡಿ.26): ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ತುಂಬಿದ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ. ಎಫ್‌ಐಆರ್ ದಾಖಲು ಮಾಡಿ ವಿವಿಧ ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾದ ಸಲೀಂ ಉತ್ತರಪ್ರದೇಶ ರಾಜ್ಯದವನು. ಬಲೂನ್ ಮಾರುವ ವೃತ್ತಿ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ವಾರವಷ್ಟೇ ಈತ ಮೈಸೂರಿಗೆ ವ್ಯಾಪಾರಕ್ಕಾಗಿ ಬಂದಿದ್ದ. ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ಬಲೂನ್ ಮಾರುತ್ತಿದ್ದ ಎಂದು ಹೇಳಲಾಗಿದೆ.
ಸೈಕಲ್‌ನಲ್ಲಿ ಹೀಲಿಯಂ ಗ್ಯಾಸ್ ಇಟ್ಟುಕೊಂಡು ಬಲೂನ್‌ಗೆ ತುಂಬಿಸಿ ಮಾರಾಟ ಮಾಡುತ್ತಿದ್ದ. ಒಂದು ವಾರದಿಂದ ಅರಮನೆ ಸುತ್ತಲೂ ವಸ್ತುಪ್ರದರ್ಶನದ ಆವರಣದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ. ಗುರುವಾರ ರಾತ್ರಿ 8.30 ಗಂಟೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮಾಡುತ್ತಾ ಜಯಮಾರ್ತಾಂಡ ಗೇಟ್ ಬಳಿ ಬಂದಿದ್ದ ಎನ್ನಲಾಗಿದೆ. ದೊಡ್ಡಕೆರೆ ಮೈದಾನದ ಎದುರುಗಡೆ ಇರುವ ಜಯಮಾರ್ತಾಂಡ ಗೇಟ್ ಬಳಿ ಈತ ನಿಂತಿದ್ದ. ಈ ನಡುವೆ ಬಲೂನ್ ತೆಗೆದುಕೊಳ್ಳಲು ಕೆಲವರು ಬಂದಿದ್ದರು. ಸುಮಾರು ಐದಾರು ಜನರಿಗೆ ಸಲೀಂ ಬಲೂನ್ ಮಾರಾಟ ಮಾಡಿದ್ದ. ಸತತವಾಗಿ ಬಲೂನ್ ಗೆ ಹೀಲಿಯಂ ಗ್ಯಾಸ್ ತುಂಬಿದ್ದರಿಂದ ಸಿಲಿಂಡರ್‌ಹೀಟ್ ಆಗಿ ಸ್ಪಾರ್ಕ್ ಆಗಿದೆ. ಏಕಾಏಕಿ ಹೀಲಿಯಂ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಇಬ್ಬರ ಸ್ಥಿತಿ ಚಿಂತಾಜನಕ, ಸಲೀಂ ವಿರುದ್ಧ ದೂರು
ಸಿಲಿಂಡರ್ ಸ್ಪೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಸಾವು ಕಂಡಿದ್ದರೆ, ಆತನ ಪಕ್ಕದಲ್ಲಿ ನಿಂತಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದರೆ, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬರಿಗೆ ಮೈಸೂರಿನ ಜೆ.ಎಸ್.ಎಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಮೂವರಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಕೋ ಟೀಮ್ ಹಾಗೂ ಎಫ್.ಎಸ್.ಎಲ್ ತಂಡದಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದ್ದು, ಸಲೀಂ ವಿರುದ್ಧ ದೂರು ದಾಖಲಾಗಿದೆ.
ಆಕಸ್ಮಿಕವೋ, ಉದ್ದೇಶಪೂರ್ವಕವೋ? ತನಿಖೆ ಶುರು
ಈಗ ಪ್ರಕರಣದ ತನಿಖೆಯ ಮಗ್ಗುಲು ಬದಲಾಗಿದ್ದು, ಅರಮನೆಯ ಗೈಡ್ ಪ್ರಕಾರ ಈ ಸ್ಥಳದಲ್ಲಿ ಯಾರು ಬಲೂನ್ ಮಾರಾಟ ಮಾಡುತ್ತಿರಲಿಲ್ಲ. ನಿನ್ನೆಯೂ ಕೂಡ ಮೃತ ಸಲೀಂ ಇಲ್ಲಿ ನಿಂತಿರಲಿಲ್ಲ. ಏಕಾಏಕಿ ಅರಮನೆ ಮುಂಭಾಗಕ್ಕೆ ಸಲೀಂ ಬಂದ ಕೆಲ ಕ್ಷಣಗಳಲ್ಲೆ ಗ್ಯಾಸ್ ಸ್ಪೋಟವಾಗಿದೆ. ಸ್ಪೋಟ ಆಕಸ್ಮಿಕನಾ ಅಥವಾ ಉದ್ದೇಶ ಪೂರ್ವಕನಾ? ಈ ಆಯಾಮದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಅರಮನೆ ಬಳಿ ಎಂದೂ ಕಾಣಿಸಿಕೊಳ್ಳದವನು ಗುರುವಾರ ಏಕಾಏಕಿ ಬಂದಿದ್ದೇಕೆ? ಎನ್ನುವುದರ ಮೇನೆ ಅನುಮಾನ ಶುರುವಾಗಿದೆ. ಸಲೀಂ ಹಿನ್ನಲೆ ಬಗ್ಗೆ ತನಿಖೆ ಶುರು ಮಾಡಲಾಗಿದೆ. ಆತ ಮೈಸೂರಿಗೆ ಬಂದಿದ್ದು ಯಾವಾಗ? ಪ್ರತಿದಿನ ಬಲೂನ್ ಮಾರೋದೇ ಆತನ ಕೆಲಸವಾಗಿತ್ತೇ? ಮೈಸೂರಿಗೆ ಬಂದು ಎಷ್ಟು ವರ್ಷವಾಯ್ತು? ಅನ್ನೋದರ ಬಗ್ಗೆ ಪೊಲೀಸರು ಪತ್ತೆ ಮಾಡಲಿದ್ದಾರೆ.
ಸಲೀಂ ಮೈಸೂರಿಗೆ ಬಂದು ಒಂದು ತಿಂಗಳು
ಬಲೂನ್ ಮಾರಾಟ ಮಾಡುತ್ತಿದ್ದ ಸಲೀಂ ಮೈಸೂರಿಗೆ ಬಂದು ಒಂದು ತಿಂಗಳು ಆಗಿದೆ ಎನ್ನುವ ಮಾಹಿತಿಯೂ ಇದೆ. ನಿನ್ನೆ ಆತ ಮೊದಲ ಬಾರಿಗೆ ಅರಮನೆ ಮುಂಭಾಗದಲ್ಲಿ ಬಲೂನ್ ಮಾರಾಟಕ್ಕೆ ಇಳಿದಿದ್ದ. ಸ್ಫೋಟಕ್ಕೆ ಅರ್ಧಗಂಟೆ ಮುಂಚಿತವಾಗಿ ಆತ ಅಲ್ಲಿಗೆ ಬಂದಿದ್ದ. ಜಯಮಾರ್ತಾಂಡ ಗೇಟ್‌ಗೆ ಬಂದ ಕೆಲವೇ ಕ್ಷಣದಲ್ಲಿ ಸ್ಫೋಟವಾಗಿದೆ. ಮೈಸೂರಿನ ಲಾಡ್ಜ್‌ನಲ್ಲಿ ಒಂದು ತಿಂಗಳಿನಿಂದ ಸಹೋದರರ ಜೊತೆ ಉಳಿದುಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಬೇರೆ ಬೇರೆ ಭಾಗಗಳಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.


