Murugha Mutt: ಜೈಲಿನಲ್ಲಿ ಎದೆ ನೋವಿನಿಂದ ಕುಸಿದು ಬಿದ್ದ ಶ್ರೀ: ಆಸ್ಪತ್ರೆಗೆ ಶಿಫ್ಟ್
Murugha Mutt Row: ಜೈಲಿನಲ್ಲಿ ಎದೆನೋವಿನಿಂದ ಶ್ರೀಗಳು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಚಿತ್ರದುರ್ಗ (ಸೆ. 02): ಬಾಲಕಿಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ರಾತ್ರಿ ಬಂಧಿಸಿದ್ದಾರೆ. ಜೈಲಿನಲ್ಲಿ ಎದೆನೋವಿನಿಂದ ಶ್ರೀಗಳು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯರಾದ ಅರ್ಪಿತಾ ರೂಪಾ, ಮುರುಘಾ ಶ್ರೀಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಮುರುಘಾ ಶ್ರೀಗಳ ಅರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಮುರುಘಾ ಶ್ರೀಗಳ ತಪಾಸಣೆ ವೇಳೆ ಮಠದ ಕಾನೂನು ಸಲಹೆಗಾರ ವಕೀಲ ಉಮೇಶ್ ಹಾಜರಾಗಿದ್ದಾರೆ. ಸದ್ಯ ತಪಾಸಣೆಯ ನಂತರ ಮುರುಘಾ ಶರಣರಿಗೆ ವೈದ್ಯರು ಗ್ಲೂಕೋಸ್ ಬಾಟಲ್ ಹಾಕಿದ್ದಾರೆ. ಗ್ಲೂಕೋಸ್ ಮುಗಿಯಲು ಇನ್ನೂ ಅರ್ಧ ಗಂಟೆ ಸಮಯ ಬೇಕಿದೆ. ಗ್ಲೂಕೋಸ್ ಮುಗಿದ ಮೇಲೆ ಹೆಚ್ಚಿನ ಚಿಕಿತ್ಸೆ ಬೇಕೋ? ಬೇಡವೋ? ಎಂಬುದನ್ನು ವೈದ್ಯರು ನಿರ್ಧರಿಸಲಿದ್ದಾರೆ.
Murugha mutt Seer Arrest ಮುರುಘಾ ಶ್ರೀ ಬಂಧನ, ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್!
ಲೈಂಗಿಕ ದೌರ್ಜನ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ಆರೋಪದಡಿ ಬಂಧನ ಭೀತಿಯಲ್ಲಿದ್ದ ಸ್ವಾಮೀಜಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ಸ್ಥಳೀಯ ನ್ಯಾಯಾಲಯ, ಶುಕ್ರವಾರ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸ್ವಾಮೀಜಿಯನ್ನು ಬಂಧಿಸಲಾಗಿದೆ.
ರಾತ್ರಿ 9.45ರ ವೇಳೆಗೆ ಡಿವೈಎಸ್ಪಿ ಅನಿಲ್‌ಕುಮಾರ್ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಮುರುಘಾಮಠಕ್ಕೆ ಆಗಮಿಸಿ, ಶರಣರ ಜೊತೆ ಕೆಲ ಹೊತ್ತು ಮಾತನಾಡಿ ನಂತರ ಬಂಧನದ ವಿಷಯ ತಿಳಿಸಿದ್ದಾರೆ. ಬಂಧನದ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟು ಸಹಕರಿಸುವಂತೆ ಕೋರಿದ್ದಾರೆ. ನಂತರ ಅವರನ್ನು ಬಂಧಿಸಿ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಡಿವೈಎಸ್ಪಿ ಕಚೇರಿ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾರಿಕೇಡ್‌ಗಳನ್ನು ತಂದಿರಿಸಲಾಗಿತ್ತು. ಜೊತೆಗೆ ಮುರುಘಾಮಠಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.