Murugha mutt Seer Arrest ಮುರುಘಾ ಶ್ರೀ ಬಂಧನ, ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್!
ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಯಾವುದೇ ಅಹಿತರ ಘಟನೆ ಸಂಭವಿಸಿದಂತೆ ಹೆಚ್ಚುವರಿ ಪೋಲಿಸ್ ನಿಯೋಜಿಸಿ ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಚಿತ್ರದುರ್ಗ(ಸೆ.01): ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳ ವಿರುದ್ದ 6 ದಿನಗಳ ಹಿಂದೆ ಪೋಕ್ಸೋ ಕೇಸ್ ದಾಖಲಾಗಿತ್ತು. ಆದರೆ ಶ್ರೀಗಳ ಬಂಧನ, ವಿಚಾರಣೆ ನಡೆದಿರಲಿಲ್ಲ. ತನಿಖೆಯಲ್ಲಿ ಲೋಪವಾಗುತ್ತಿದೆ. ಪ್ರಭಾವಿಗಳ ಬಂಧಿಸಲು ವಿಳಂಬ ಯಾಕೆ ಎಂದು ಭಾರಿ ಪ್ರತಿಭಟನೆಗಳು ನಡೆದಿತ್ತು. ಇದರ ಬೆನ್ನಲ್ಲೇ ಇಂದು ಸಂಜೆ 7.45 ರಿಂದ ಮರುಘಾ ಶ್ರೀಗಳ ವಿಚಾರಣೆ ನಡೆಸಲಾಗಿತ್ತು. ಮುರುಘಾ ಮಠದಲ್ಲೇ ಪೊಲೀಸರು ಸತತ ವಿಚಾರಣೆ ನಡೆಸಿತ್ತು. ಬಳಿಕ ಶ್ರೀಗಳನ್ನು ಬಂಧಿಸಿದ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಶ್ರೀಗಳ ಬಂಧನ ಚಿತ್ರದುರ್ಗ ಹಾಗೂ ರಾಜ್ಯದಲ್ಲಿ ಗಲಭೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದ್ದರಿಂದ ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತೆ ನಿಯೋಜಿಸಿದೆ. ಡಿಸಿ ಸರ್ಕಲ್, ಮಠದ ಆವರಣ, ನಗರ ಸೇರಿದಂತೆ ಚಿತ್ರದುರ್ಗ ಸಂಪೂರ್ಣ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಇತರ ಜಿಲ್ಲೆಗಳಿಂದ ಪೊಲೀಸರನ್ನು ಚಿತ್ರದುರ್ಗಕ್ಕೆ ಕರೆಯಿಸಿಕೊಳ್ಳಾಗಿದೆ.. ಇತ್ತ ಬೆಂಗಳೂರಿನಿಂದ ಸಿಆರ್‌ಪಿಎಫ್ ತುಕಡಿ ಕೂಡ ಚಿತ್ರದುರ್ಗದಲ್ಲಿ ನಿಯೋಜಿಸಲಾಗಿದೆ.
ಚಿತ್ರದುರ್ಗ ಹಾಗೂ ರಾಜ್ಯದ ಇತರೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಶ್ರೀಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ಶೀಘ್ರದಲ್ಲೇ ಡಿವೈಎಸ್‌ಪಿ ಕಚೇರಿಗೆ ಕರೆತರಲಾಗುತ್ತದೆ. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳ ತಪಾಸಣೆ ನಡೆಯಲಿದೆ. ಈ ಪ್ರಕ್ರಿಯ ಮುಗಿದ ಬಳಿಕ ಇಂದು ರಾತ್ರಿ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಪೋಕ್ಸ್ ಕೇಸ್ ದಾಖಲಾದ 6 ದಿನಗಳ ಬಳಿಕ ಶ್ರೀಗಳ ವಿಚಾರಣೆ ಹಾಗೂ ಬಂಧನವಾಗಿದೆ. ಆಧರೆ ದೂರು ನೀಡಿರುವ ವಿದ್ಯಾರ್ಥಿನಿಯರ ವಿಚಾರಣೆ, ಸ್ಥಳ ಮಹಜರು ಹಾಗೂ 164 ಹೇಳಿಕೆಯನ್ನು ಪಡೆಯಲಾಗಿದೆ. ಶ್ರೀಗಳ ವಿಚಾರಣೆ ವಿಳಂಭಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಬಸವಕೇಂದ್ರ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ನೀಡಿರುವ ಸಂತ್ರಸ್ತ ಬಾಲಕಿಯರು ಒಂದನೇ ಅಪರ ಸಿವಿಲ್ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಹೇಳಿಕೆ ನೀಡಿದರು. ಬಾಲಕಿಯರ ಬಾಲ ಮಂದಿರದಿಂದ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಗ್ರಾಮಾಂತರ ಠಾಣೆ ಪೊಲೀಸರು ಸಂತ್ರಸ್ತ ಬಾಲಕಿಯರ ನ್ಯಾಯಾಲಯಕ್ಕೆ ಕರೆತಂದರಾದರೂ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹೇಳಿಕೆ ನೀಡಲು ನ್ಯಾಯಾಲಯದ ಒಳ ಆವರಣಕ್ಕೆ ಕರೆಯಿಸಿಕೊಳ್ಳಲಾಯಿತು.