ಉದ್ಯಮಿ ಮನೆಯಲ್ಲಿ ಜೋಡಿ ಕೊಲೆ: ಚಿನ್ನ ಲೂಟಿ ಕುಟುಂಬದೊಂದಿಗೆ ಹೊರಗೆ ತೆರಳಿದ್ದ ಉದ್ಯಮಿ ಸಂಪಲ್ಲಿ ಸೆಕ್ಯೂರಿಟಿ ಶವ ಪತ್ತೆ 5 ಲಕ್ಷ ನಗದು, 100 ಗ್ರಾಂ ಚಿನ್ನ ದರೋಡೆ ಕೋರಮಂಗಲ 6ನೇ ಬ್ಲಾಕ್‌ನಲ್ಲಿ ಘಟನೆ

ಬೆಂಗಳೂರು (ಡಿ.19) : ದುಷ್ಕರ್ಮಿಗಳು ಉದ್ಯಮಿಯೊಬ್ಬರ ಮನೆಯ ಸೆಕ್ಯೂರಿ ಗಾರ್ಡ್‌ ಮತ್ತು ಮನೆಗೆಲಸಗಾರನನ್ನು ಕೊಲೆಗೈದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕೋರಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾವಣಗೆರೆ ಮೂಲದ ಕರಿಯಪ್ಪ(50) ಮತ್ತು ಅಸ್ಸಾಂ ಮೂಲದ ದಿಲ್‌ ಬಹದ್ದೂರ್‌(52) ಕೊಲೆಯಾದ ದುರ್ದೈವಿಗಳು. ಕೋರಮಂಗಲ 6ನೇ ಬ್ಲಾಕ್‌ ನಿವಾಸಿ ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಮನೆಯಲ್ಲಿ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಮನೆಗೆಲಸಗಾರ ಕರಿಯಪ್ಪ ಹಾಗೂ ಸೆಕ್ಯೂರಿಗಾರ್ಡ್‌ ದಿಲ್‌ ಬಹದ್ದೂರ್‌ನನ್ನು ಕೊಲೆಗೈದು ಬಳಿಕ ಮನೆಯ ಬೀರುವಿನಲ್ಲಿದ್ದ .5 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿಯಲ್ಲಿ ಪಾಲು ಕೊಡದ ನಿವೃತ್ತ ಪಿಎಸ್‌ಐ: ತಂದೆಯನ್ನು ಕೊಲೆ ಮಾಡಿಸಿದ ಮಕ್ಕಳು

ಉದ್ಯಮಿ ರಾಜಗೋಪಾಲರೆಡ್ಡಿ ಅವರು ಶನಿವಾರ ಸಂಬಂಧಿಕರ ಮದುವೆ ಪ್ರಯುಕ್ತ ಕುಟುಂಬದೊಂದಿಗೆ ಅನಂತಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಮನೆಗೆಲಸಗಾರ ಕರಿಯಪ್ಪ ಮತ್ತು ಸೆಕ್ಯೂರಿಟಿ ಗಾರ್ಡ್‌ ದಿಲ್‌ ಬಹದ್ದೂರ್‌ ಮಾತ್ರ ಇದ್ದರು. ಭಾನುವಾರ ಬೆಳಗ್ಗೆ ಕೆಲಸಗಾರರು ಮನೆಗೆ ಬಂದಾಗ ಕರಿಯಪ್ಪನ ಕೈಕಾಲು ಕಟ್ಟಿ-ಬಾಯಿಗೆ ಪ್ಲಾಸ್ಟರ್‌ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕೂಡಲೇ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆರಂಭದಲ್ಲಿ ಸೆಕ್ಯೂರಿಟಿ ಗಾರ್ಡ್‌ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನೇ ಕರಿಯಪ್ಪನನ್ನು ಕೊಲೆಗೈದು ಕಳ್ಳತನ ಮಾಡಿ ಪರಾರಿಯಾಗಿರುವ ಶಂಕೆ ಇತ್ತು. ಸಂಜೆ ಸ್ಥಳ ಮಹಜರ್‌ ವೇಳೆ ಮನೆಯ ಸಂಪ್‌ನಲ್ಲಿ ಸೆಕ್ಯೂರಿಗಾರ್ಡ್‌ ದಿಲ್‌ ಬಹದ್ದೂರ್‌ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಇಬ್ಬರನ್ನೂ ಕೊಲೆಗೈದು ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವುದು ಕಂಡು ಬಂದಿದೆ.

ಮನೆಯಲ್ಲಿ ಇಬ್ಬರೇ ಇದ್ದರು

ಕೊಲೆಯಾದ ಕರಿಯಪ್ಪ ದಾವಣಗೆರೆ ಮೂಲದವರಾಗಿದ್ದು, ಕಳೆದ 30 ವರ್ಷಗಳಿಂದ ದಾವಣಗೆರೆ ಮೂಲದ ಉದ್ಯಮಿ ರಾಜಗೋಪಾಲರೆಡ್ಡಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ಅಸ್ಸಾಂ ಮೂಲದ ಸೆಕ್ಯೂರಿಗಾರ್ಡ್‌ ದಿಲ್‌ ಬಹದ್ದೂರ್‌ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹೀಗಾಗಿ ರಾಜಗೋಪಾಲರೆಡ್ಡಿ ಅವರು ಈ ಇಬ್ಬರು ನಂಬಿಕಸ್ಥರನ್ನು ಮನೆಯಲ್ಲಿ ಬಿಟ್ಟು ಕುಟುಂಬದ ಜತೆಗೆ ಕಾರ್ಯಕ್ರಮಕ್ಕೆ ತೆರಳಿದ್ದರು. ಶನಿವಾರ ರಾತ್ರಿ 10ರಿಂದ ಮುಂಜಾನೆ 3ರೊಳಗೆ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿವಿಆರ್‌ ಕದ್ದು ಎಸ್ಕೇಪ್‌

ದುಷ್ಕರ್ಮಿಗಳು ಕರಿಯಪ್ಪ ಹಾಗೂ ದಿಲ್‌ ಬಹದ್ದೂರ್‌ನನ್ನು ಕೊಲೆಗೈದು ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಹೋಗುವಾಗ, ಮನೆಯ ಸಿಸಿಟಿವಿ ಕ್ಯಾಮರಾಗಳನ್ನು ಹಾನಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಸಿಸಿಟಿವಿ ಕ್ಯಾಮರಾದ ಡಿವಿಆರ್‌ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಮನೆಯ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ದುಷ್ಕರ್ಮಿಗಳ ಸುಳಿವಿಗಾಗಿ ಪರಿಶೀಲಿಸುತ್ತಿದ್ದಾರೆ.

ಗೊತ್ತಿದ್ದವರೇ ಕೊಲೆ ಮಾಡಿದ್ರಾ?

ಮನೆ ಮಾಲಿಕ ರಾಜಗೋಪಾಲರೆಡ್ಡಿ ಅವರು ಅನಂತಪುರ ತೆರಳುವ ವಿಚಾರ ಹಾಗೂ ಮನೆಯಲ್ಲಿ ಇಬ್ಬರು ನೌಕರರು ಮಾತ್ರ ಇರುವ ಬಗ್ಗೆ ತಿಳಿದವರೇ ಹೊಂಚು ಹಾಕಿ ಈ ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಎರಡು ವಿಶೇಷ ತಂಡ ರಚಿಸಿದ್ದು, ಈಗಾಗಲೇ ತಂಡಗಳು ಕಾರ್ಯ ಪ್ರವೃತ್ತವಾಗಿವೆ.

ಬೇಸ್‌ಬಾಲ್‌ ಬ್ಯಾಟ್‌ನಲ್ಲಿ ತಲೆಗೆ ಹೊಡೆದು ನಟಿ ವೀಣಾ ಕಪೂರ್‌ ಕೊಲೆ ಮಾಡಿದ ಪುತ್ರ!

ದುಷ್ಕರ್ಮಿಗಳು ಮನೆಯಲ್ಲಿ ಕೆಲಸಗಾರರಿಬ್ಬರೇ ಇದ್ದಾಗ ಜೋಡಿ ಕೊಲೆ ಮಾಡಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ತನಿಖೆ ಕೈಗೊಂಡಿದ್ದು, ಶೀಘ್ರವೇ ಕೊಲೆಗಾರರನ್ನು ಪತ್ತೆಹಚ್ಚಿ ಬಂಧಿಸಲಾಗುವುದು.

-ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ.