ಟಿಕ್‌ಟಾಕ್ ಮೂಲಕ ಯುವಕನ ಮೋಹಕ್ಕೆ ಮನಸೋತು ಬಂದ 2 ಮಕ್ಕಳ ತಾಯಿ, ಇದೀಗ ಕಂಗಾಲು
* ಟಿಕ್‌ಟಾಕ್ ಮೂಲಕ ಯುವಕನ ಮೋಹಕ್ಕೆ ಮನಸೋತು ಬಂದ 2 ಮಕ್ಕಳ ತಾಯಿ,
* ಟಿಕ್‌ಟಾಕ್ ಲವ್, ಇದೀಗ ಕಂಗಾಲು
* ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ಬುಕ್
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು/ಮುಂಡಗೋಡ, (ಮೇ.06): ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕನೊಬ್ಬ ಟಿಕ್‌ಟಾಕ್‌ನಲ್ಲಿ ಮಹಿಳೆಯನ್ನು ಪರಿಚಿಯಿಸಿ ಮದುವೆ ಮಾಡಿಕೊಂಡು ನಂತರ ಅವಳನ್ನು ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಇದೀಗ ಪತಿಯನ್ನು ಹುಡಿಕಿಕೊಂಡುವಂತೆ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾಳೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಬೆಂಗಳೂರು ಮೂಲದ ರೇಷ್ಮಾ ಯಾನೆ ಸಿಂಧೂ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಳು. ನಂತರ ದಿನದಲ್ಲಿ ಮೊದಲನೇ ಗಂಡ ಕುಡಿದು ಕಿರಕುಳ ನೀಡುವ ಕಾರಣದಿಂದ ಅವನಿಂದ ದೂರವಾಗಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ. ಟಿಕ್‌ಟಾಕ್‌ನಲ್ಲಿ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ರಮೇಶ್ ಎಂಬ ಯುವಕನ ಪರಿಚಯವಾಗಿ, ಆತನ ಜತೆ ಟಿಕ್‌ಟಾಕ್ ಡ್ಯುಯೆಟ್ ಮಾಡುತ್ತಿದ್ದ ರೇಶ್ಮಾ, ನಂತರ ಆತನ ಪ್ರೀತಿಯ ಬಲೆಗೆ ಬಿದ್ದಿದ್ದಳು.
Chamarajanagar: ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ ಕೈ ಕೊಟ್ಟ ಯುವಕ
ತನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ ಎನ್ನುವ ವಿಚಾರವನ್ನು ಕೂಡಾ ರಮೇಶ್‌ನ ಪರಿಚಯವಾದಾಗಲೇ ರೇಶ್ಮಾ ತಿಳಿಸಿದ್ದಳು ಎನ್ನಲಾಗಿದೆ. ಆದರೆ, ರಮೇಶ್ ಮಾತ್ರ ಏನೋ ಆದರೂ ನೀನು ಬೇಕು. ನಿನ್ನನ್ನು ಬಿಟ್ಟು ನಾನು ಇರುವುದಿಲ್ಲ. ನನ್ನ ತಾಯಿ ತೀರಿ ಹೋಗಿದ್ದಾಳೆ. ನನಗೆ ಊಟ ಮಾಡಿ ಹಾಕಲು ಯಾರೂ ಇಲ್ಲ. ನನ್ನ ಜತೆಗೆ ಬಂದು ಬಿಡು. ನಿನಗೆ ಜೀವನ ನೀಡುತ್ತೇನೆಂದು ಬೆಂಗಳೂರಿನಿಂದ ರೇಶ್ಮಾಳನ್ನು ನೇರವಾಗಿ ತಾಲೂಕಿಗೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿಕೊಂಡಿದ್ದನು.
ನಂತರ ಕೆಲವು ತಿಂಗಳಾದ ಮೇಲೆ ಮನೆಯವರೆಲ್ಲರನ್ನು ಮದುವೆಗೆ ಒಪ್ಪಿಸಿ 2021 ಎಪ್ರಿಲ್ 2ರಂದು ಶಿರಸಿ ದೇವಸ್ಥಾನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ರೇಶ್ಮಾಳ ಹೆಸರನ್ನು ಸಿಂಧೂವನ್ನಾಗಿ ಬದಲಾಯಿಸಲಾಗಿತ್ತು. ಒಂದು ವರ್ಷಗಳ ಕಾಲ ರಮೇಶ್ ಹಾಗೂ ಸಿಂಧೂ ಸಂಸಾರ ಚೆನ್ನಾಗೇ ನಡೆಯುತ್ತಿತ್ತಾದರೂ, ನಂತರ ಪತಿ ರಮೇಶ್, ಪತ್ನಿ ಸಿಂಧೂಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆದರೂ ಮಹಿಳೆ ಅದನ್ನೆಲ್ಲಾ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ದಿನ ಕಳೆದಂತೆ ಕಿರುಕುಳ ಹೆಚ್ಚಾದ ಕಾರಣ ಆತ್ಮಹತ್ಯೆಗೆ ಪ್ರಯತ್ನ ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಳು.
ನಂತರ ಮುಂಡಗೋಡ ಪೊಲೀಸ್ ಠಾಣೆಗೆ ರಮೇಶನನ್ನು ಕರೆಯಿಸಿ ಬುದ್ಧಿವಾದ ಹೇಳಿ ನನ್ನ ಜತೆ ಜೀವನ ಮಾಡಲು ಅವಕಾಶ ಮಾಡಿಕೊಡುವಂತೆ ದೂರು ಸಲ್ಲಿಸಿದ್ದಳು. ಠಾಣೆಯ ಸಿಪಿಐ ಸಿದ್ದಪ್ಪಾ ಸಿಮಾನಿ ಹಾಗೂ ಪಿ.ಎಸ್.ಐ ಬಸವರಾಜ್ ಮಬನೂರ ಕಾಳಜಿ ವಹಿಸಿ ಊರಿನ ಗ್ರಾಮಸ್ಥರನ್ನು ಹಾಗೂ ಯುವಕನ ಕುಟುಂಬಸ್ಥರನ್ನು ಕರೆಯಿಸಿ ಆತನಿಗೆ ಬುದ್ಧಿವಾದ ಹೇಳಿ ಮಹಿಳೆಯ ಜತೆ ಸಂಸಾರ ನಡೆಸುವಂತೆ ತಿಳಿಸಿ ಕಳುಹಿಸಿಕೊಟ್ಟಿದ್ದರು. ನಂತರ ಜೀವನ ನಡೆಸಲು ಸಿಂಧೂ ಮತ್ತು ರಮೇಶ್ ಬೆಂಗಳೂರಿಗೆ ತೆರಳಿದ್ದರು. ಆದರೆ, ಇತ್ತೀಚೆಗೆ ಮಹಿಳೆಯ ಮನೆಯಿಂದಲೇ ರಮೇಶ್ ನಾಪತ್ತೆಯಾಗಿದ್ದಾನೆ.
ಇದೀಗ ಮತ್ತೆ ಮಹಿಳೆ ತನ್ನ ಗಂಡನನ್ನು ಹುಡುಕಿಕೊಡುವಂತೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗಂಡನಿಂದ ಮೋಸಹೋಗಿ ರೇಶ್ಮಾ ಯಾನೆ ಸಿಂಧೂ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾಳೆ. ಘಟನೆಯ ಬಗ್ಗೆ ಮಹಿಳೆ ವಿಡಿಯೋ ರೆಕಾರ್ಡ್ ಕೂಡಾ ಮಾಡಿಕೊಂಡಿದ್ದು, ತನ್ನ ಜೀವನದ ದುರಂತದ ಬಗ್ಗೆ ತಿಳಿಸಿದ್ದಾಳೆ. ಮುಂಡಗೋಡದ ನಂದಿಕಟ್ಟಾ ಗ್ರಾಮದ ರಮೇಶ ಎಂಬಾತ ನನ್ನನ್ನು ನಂಬಿಸಿ ಮದುವೆ ಮಾಡಿಕೊಂಡಿದ್ದ. ನನ್ನಲ್ಲಿದ್ದ ಬಂಗಾರ, ಹಣ ಸೇರಿ ನನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಲೋನ್ ಮಾಡಿಕೊಂಡು ನನಗೆ ಬೆಂಗಳೂರಿನಲ್ಲಿ ಕೆಲಸ ಮಾಡುವಂತೆ ಕರೆತಂದು ಇಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾನೆ.
ಗಂಡನ ಕುಟುಂಬಸ್ಥರ ಕಿರುಕುಳದಿಂದಾಗಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ. ನಾಪತ್ತೆಯಾಗಿರುವ ಗಂಡನನ್ನು ಹುಡುಕಿಕೊಡುವಂತೆ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನನ್ನ ಗಂಡ ಬೇಕು. ಎಷ್ಟೇ ಕಷ್ಟವಾದರೂ ಅವನ ಜತೆಯೇ ಜೀವನ ನಡೆಸುತ್ತೇನೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಮೂಲಗಳ ಪ್ರಕಾರ, ಪತ್ನಿಯನ್ನು ಬಿಟ್ಟುಬಂದಿರುವ ಗಂಡ ರಮೇಶ್ ಮತ್ತೆ ಮುಂಡಗೋಡಕ್ಕೆ ಹಿಂತಿರುಗಿದ್ದಾನೆ ಎನ್ನಲಾಗಿದೆ.