ಝೋಮ್ಯಾಟೋ ಬಾಯ್ ವೇಷದಲ್ಲಿ Chain Snatchers ಬಲೆಗೆ ಕೆಡವಿದ ಪೊಲೀಸರು

ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯ ಡೆಲಿವರಿ ಏಜೆಂಟ್ ಧಿರಿಸು ಧರಿಸಿ ಮುಂಬೈ ಪೊಲೀಸರು ಇಬ್ಬರು ಸರಗಳ್ಳರನ್ನು ಬಲೆಗೆ ಕೆಡವಿದ್ದಾರೆ.

Mumbai police disguise like zomato delivery boy, arrrested chain Snatchers red handedly akb

ಮುಂಬೈ: ಸಾಮಾನ್ಯವಾಗಿ ನಿಜ ಘಟನೆಗಳೇ ಸಿನಿಮಾಗಳಾಗುತ್ತವೆ. ಆದರೆ ಕೆಲವೊಮ್ಮೆ ಸಿನಿಮಾ ಕತೆಗಳೇ ನಿಜ ಜೀವನದಲ್ಲಿ ನಡೆಯುತ್ತವೆ. ಇದಕ್ಕೆ ಈ ಘಟನೆ ಸಾಕ್ಷಿ. ಏನದು ಅಂತೀರಾ ಮುಂದೆ ಓದಿ. ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯ ಡೆಲಿವರಿ ಏಜೆಂಟ್ ಧಿರಿಸು ಧರಿಸಿ ಪೊಲೀಸರು ಇಬ್ಬರು ಸರಗಳ್ಳರನ್ನು ಬಲೆಗೆ ಕೆಡವಿದ್ದಾರೆ. ಸುಯ್ಯನೇ ಬೈಕ್‌ನಲ್ಲಿ ಬಂದು ದಾರಿಯಲ್ಲಿ ಸಾಗುವ ಒಂಟಿ ಮಹಿಳೆಯರ ಸರ, ಪರ್ಸ್‌ ಮೊಬೈಲ್‌ ಎಗ್ಗರಿಸಿಕೊಂಡು ಬುರ್ ಎಂದು ಹಾರಿ ಹೋಗಿ ಬಡಪಾಯಿಗಳಿಗೆ ಪೀಕಲಾಟ ನೀಡುತ್ತಿದ್ದ ಈ ಸರಗಳ್ಳರನ್ನು ಅವರಿಗಿಂತಲೂ ಚಾಣಾಕ್ಷ ರೀತಿಯಲ್ಲಿ ಬಲೆ ಕೆಡವಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕಳ್ಳರು ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿದ್ದಾರೆ. ಈ ಇಬ್ಬರು ಸರಗಳ್ಳರ ವಿರುದ್ಧ ಹಲವು ಸರಗಳ್ಳತನ ಪ್ರಕರಣಗಳಿದ್ದವು. 

ಸುದ್ದಿಸಂಸ್ಥೆ ಎಎನ್‌ಐ ವರದಿ ಪ್ರಕಾರ, ಮುಂಬೈ ಪೊಲೀಸ್ ಝೋನ್‌ 12ರ ಡೆಪ್ಯೂಟಿ ಕಮೀಷನರ್ ಆಫ್‌ ಪೊಲೀಸ್‌ ಸೋಮನಾಥ್ ಗಾರ್ಗ್‌, ಈ ಬಗ್ಗೆ ಮಾಹಿತಿ ನೀಡಿದ್ದು, ಕಸ್ತೂರ್‌ಮಾರ್ಗ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೂರು ಹಾಗೂ ಬಂಗೂರ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಸರ ಕಳ್ಳತನ ಪ್ರಕರಣಗಳು ನಡೆದಿದ್ದವು. ಇದಾದ ಬಳಿಕ ಈ ಸರಗಳ್ಳರ ಹೆಡೆಮುರಿಕಟ್ಟಲು ಕಾರ್ಯಾಚರಣೆಗೆ ಇಳಿದ ಪೊಲೀಸ್ ಸಿಬ್ಬಂದಿ ಓಂ ತೊತವಾರ್ ಹಾಗೂ ರಾಹುಲ್‌ ವಲುಸ್ಕರ್‌, ಈ ಖತರ್ನಾಕ್‌ ಸರಗಳ್ಳರ ಬಂಧನಕ್ಕಾಗಿ ಅವರ ಗುರುತನನ್ನು ಸರಿಯಾಗಿ ಪತ್ತೆ ಮಾಡಲು ಘಟನೆ ನಡೆದ ಆ ವ್ಯಾಪ್ತಿಯ 300 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು.  

ಝೋಮ್ಯಾಟೋ ಡೆಲಿವರಿ ಬಾಯ್‌ಗೆ ಥಳಿಸಿದ ಮಹಿಳೆ: ವಿಡಿಯೋ ವೈರಲ್

ಅಲ್ಲದೇ ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದಾಗ, ಈ ಕಳ್ಳರು ಸರಗಳ್ಳತನ ಪ್ರಕರಣಕ್ಕೆ ಬಳಸಿದ್ದ ಬೈಕ್ ಕೂಡ ಪೊಲೀಸರಿಗೆ ಸಿಕ್ಕಿತ್ತು, ಬೈಕ್‌ನ್ನು ರೈಲ್ವೆ ಸ್ವೇಷನ್‌ ಒಂದರಲ್ಲಿ ಪಾರ್ಕ್ ಮಾಡಲಾಗಿತ್ತು. ಹೀಗಾಗಿ ಆರೋಪಿಗಳು ತಮ್ಮ ಬೈಕ್‌ನ್ನು ತೆಗೆದುಕೊಳ್ಳಲು ರೈಲ್ವೆ ಸ್ಟೇಷನ್‌ಗೆ ಬಂದೇ ಬರುತ್ತಾರೆ ಎಂದು ಡಿಸಿಪಿ, ಪೊಲೀಸರಿಗೆ ತಿಳಿಸಿದ್ದರು. 


ಇದಾದ ಬಳಿಕ ಈ ಕಾರ್ಯಾಚರಣೆಗೆ ಇಳಿದ ಕಸ್ತೂರ್‌ಬಾ ಪೊಲೀಸ್‌ ಠಾಣೆಯ ಎಲ್ಲಾ ಸಿಬ್ಬಂದಿ ಝೋಮ್ಯಾಟೋ ಡೆಲಿವರಿ ಬಾಯ್‌ಗಳ ವೇಷ ಧರಿಸಿದರು. ಅಲ್ಲದೇ ಸುಮಾರು ಮೂರು ದಿನಗಳ ಕಾಲ ವಿಠಲವಾಡಿ ಹಾಗೂ ಅಂಬಿವ್ಲಿ ಪ್ರದೇಶದಲ್ಲಿ ಈ ಖದೀಮರ ಬಲೆಗೆ ಬೀಳಿಸಲು ಕಾದಿದ್ದರು. ಇದೇ ವೇಳೆ ಈ ಸರಗಳ್ಳರಲ್ಲಿ ಓರ್ವ ಆತನ ಬೈಕ್‌ನ್ನು ತೆಗೆದುಕೊಂಡು ಹೋಗಲು ರೈಲು ನಿಲ್ದಾಣಕ್ಕೆ ಬಂದಿದ್ದು, ಆತನಿಗೆ ಝೋಮ್ಯಾಟೋ ಡೆಲಿವರಿ ಬಾಯ್‌ಗಳ ವೇಷದಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಏಕೆಂದರೆ ಪೊಲೀಸರು ಆಗಲೇ ಬೈಕ್‌ ಟಯರ್‌ನ ಗಾಳಿ ತೆಗೆದಿದ್ದರು. ಓರ್ವನ ಬಂಧನದ ಬಳಿಕ ಪೊಲೀಸರು ಮತ್ತೊರ್ವನನ್ನು ಬಂಧಿತ ನೀಡಿದ ಮಾಹಿತಿ ಮೇರೆಗೆ ಬಲೆಗೆ ಕೆಡವಿದ್ದಾರೆ. ಬಂಧಿತರಿಂದ ಎರಡು ಕಳವಾದ ಬೈಕ್ ಹಾಗೂ ಸರಗಳನ್ನು ವಶಕ್ಕೆ ಪಡೆಯಲಾಗಿದೆ.  

ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಝೋಮ್ಯಾಟೋ ಬಾಯ್ ವಿಡಿಯೋ ವೈರಲ್

ಈ ಕಳ್ಳರು ಅತೀ ಬುದ್ಧಿವಂತರಾಗಿದ್ದರು. ಅಂಬಿವ್ಲಿ ಪಶ್ಚಿಮದಲ್ಲಿ ಬೈಕ್‌ ಇಟ್ಟು ಅಂಬಿವ್ಲಿ ಪೂರ್ವದಲ್ಲಿ ಸರ ಕಳ್ಳತನಕ್ಕೆ ಹೋಗುತ್ತಿದ್ದರು. ಅಪರಾಧ ಕೃತ್ಯವೆಸಗಿದ ಬಳಿಕ ಜನರನ್ನು ಗೊಂದಲಕ್ಕೊಳಗಾಗಿಸುತ್ತಿದ್ದರು. ಅವರನ್ನು ರೆಡ್‌ ಹ್ಯಾಂಡ್ ಆಗಿ ಸೆರೆ ಹಿಡಿದ ಬಳಿಕವೂ ಅಂಬಿವ್ಲಿಯ ಕೆಲ ಸ್ಥಳೀಯ ಮಹಿಳೆಯರು ಅವರ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಂಧಿತರನ್ನು ಫಿರೋಜ್‌ ನಾಸೀರ್ ಶೇಕ್ ಹಾಗೂ ಜಾಫರ್ ಯೂಸುಫ್ ಜಾಫ್ರಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಕ್ರಮವಾಗಿ ವಿಠಲವಾಡಿ ಹಾಗೂ ಅಂಬಿವ್ಲಿ ನಿವಾಸಿಗಳು, ಅಲ್ಲದೇ ಅಪರಾಧ ಪಟ್ಟಿಗಳಲ್ಲಿಯೂ ಇವರ ಹೆಸರಿದ್ದು, 20 ಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಇವರು ಬೇಕಾಗಿದ್ದರು, ಪ್ರಸ್ತುತ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಡಿಸಿಪಿ ತಿಳಿಸಿದರು. 

Latest Videos
Follow Us:
Download App:
  • android
  • ios