ಪ್ಲಾಸ್ಟಿಕ್ ಗನ್ ಬಳಸಿ ಚಿನ್ನಾಭರಣಗಳನ್ನು ಲೂಟಿ ಮಾಡಿದ 16 ವರ್ಷದ ಬಾಲಕ!
ಶನಿವಾರ ಸಂಜೆ 4.30 ರ ಸುಮಾರಿಗೆ ಭಾಯಂದರ್ ವೆಸ್ಟ್‌ನ 60 ಅಡಿ ರಸ್ತೆಯಲ್ಲಿರುವ ಶಕ್ತಿ ಜ್ಯುವೆಲರ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈ (ಮೇ 7, 2023): ಮಹಾರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನ ಭಾಯಂದರ್ ಪಶ್ಚಿಮದಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಗನ್ ಬಳಸಿ ದರೋಡೆಗೆ ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಪ್ರಕರಣ ದಾಖಲಾಗಿದೆ. ಬಾಲಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಬಯಸಿದ್ದರಿಂದ ಈ ಅಪರಾಧ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ 4.30 ರ ಸುಮಾರಿಗೆ ಭಾಯಂದರ್ ವೆಸ್ಟ್‌ನ 60 ಅಡಿ ರಸ್ತೆಯಲ್ಲಿರುವ ಶಕ್ತಿ ಜ್ಯುವೆಲರ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. "ಬಾಲಕ ಅಂಗಡಿಗೆ ಪ್ರವೇಶಿಸಿ ಚಿನ್ನದ ಬಿಸ್ಕತ್ತುಗಳನ್ನು ಮಾರಾಟ ಮಾಡಲು ಬಯಸುವುದಾಗಿ ಆಭರಣ ವ್ಯಾಪಾರಿಗೆ ತಿಳಿಸಿದನು. ಆಭರಣ ವ್ಯಾಪಾರಿ ಅವುಗಳನ್ನು ಖರೀದಿಸಲು ನಿರಾಕರಿಸಿದನು ಮತ್ತು ಹುಡುಗನನ್ನು ಜ್ಯುವೆಲ್ಲರಿ ಅಂಗಡಿಯಿಂದ ಹೊರಗೆ ಹೋಗುವಂತೆ ಹೇಳಿದನು. ಕೆಲವು ನಿಮಿಷಗಳ ನಂತರ, ಹುಡುಗ ಮತ್ತೆ ಅಂಗಡಿಯನ್ನು ಪ್ರವೇಶಿಸಿದ್ದು, ಈ ಬಾರಿ ಪ್ಲಾಸ್ಟಿಕ್ ಗನ್ ಹಿಡಿದಿದ್ದನು ಎಂದು ಭಾಯಂದರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮುಕುಟರಾವ್ ಪಾಟೀಲ್ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!
ಇದು ನಿಜವಾದ ಗನ್ ಎಂದು ನಂಬಿಸಿ ಆಭರಣ ವ್ಯಾಪಾರಿಯನ್ನು ಆತ ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಆಭರಣ ಅಂಗಡಿಯನ್ನು ಲೂಟಿ ಮಾಡಿದ್ದಾನೆ. ಆದರೆ, ಲೂಟಿಯೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೆಲ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವರು ಆರೋಪಿ ಬಾಲಕನನ್ನು ನಮಗೆ ಒಪ್ಪಿಸಿದರು. ಕದ್ದ ಚಿನ್ನಾಭರಣಗಳಲ್ಲದೆ, ಆಟಿಕೆ ಪ್ಲಾಸ್ಟಿಕ್ ಗನ್ ಅನ್ನು ಸಹ ಆತನಿಂದ ವಶಪಡಿಸಿಕೊಂಡಿದ್ದೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿಯು ಎಸ್‌ಎಸ್‌ಸಿ ವಿದ್ಯಾರ್ಥಿಯಾಗಿದ್ದು, ಭಾಯಂದರ್ ನಿವಾಸಿಯಾಗಿದ್ದಾನೆ. ಬಾಲಕನ ತಂದೆ ಟೀ ಅಂಗಡಿ ನಡೆಸುತ್ತಿದ್ದರೆ, ತಾಯಿ ಗೃಹಿಣಿ. ಬಾಲಕ ತನ್ನ ತಂದೆಯ ಡಿಮ್ಯಾಟ್ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಹಾಗೂ ಅದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದನು, ಆದರೆ ಹೆಚ್ಚಿನ ಹಣದ ಅಗತ್ಯವಿದೆ ಎಂದು ಹೇಳಿದ್ದು, ಈ ಹಿನ್ನೆಲೆ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿಯೂ ಬಾಲಕ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. "ಅವನು ಶ್ರೀಮಂತ ವ್ಯಕ್ತಿಯಾಗಲು ಮತ್ತು ಷೇರು ಮಾರುಕಟ್ಟೆಯಿಂದ ಹೆಚ್ಚು ಹಣವನ್ನು ಗಳಿಸಲು ಬಯಸಿದ್ದ" ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕುಟರಾವ್ ಪಾಟೀಲ್ ಹೇಳಿದರು.
ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಲೈಕ್ ಮಾಡಿ ಹಣ ಗಳಿಸ್ಬೋದು ಎಂದು ನಂಬಿ 1.3 ಕೋಟಿ ರೂ ಕಳೆದುಕೊಂಡ ಭೂಪ!
ಇನ್ನು, ಈ ಸಂಬಂಧ ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗೂ, ಅವನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದೂ ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಓದಿರೋದು 12ನೇ ಕ್ಲಾಸ್: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್ ಹೋಟೆಲ್‌ನಲ್ಲಿ ವಾಸ!