ಘಟನೆಗೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು 

ಬೆಳಗಾವಿ(ಜೂ.24): ತಾಯಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪುತ್ರ ಕೊನೆಗೆ ಹೆಣವಾದ ದಾರುಣ ಘಟನೆ ಜಿಲ್ಲೆಯ ರಾಯಬಾಗದಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ರಾಯಬಾಗ ಪಟ್ಟಣದ ನಾವಿ ಗಲ್ಲಿಯ ಹರಿಪ್ರಸಾದ ಸಂತೋಷ ಬೋಸಲೆ (22) ಕೊಲೆಯಾದ ಯುವಕ. ಸುಧಾ ಅಲಿಯಾಸ್‌ ಮಾಧವಿ ಬೋಸಲೆ (45) ಹತ್ಯೆಗೀಡಾದ ಯುವಕನ ತಾಯಿ. ಆಕೆಯ ಪ್ರಿಯಕರ ಕುಮಾರ ಬಬಲೇಶ್ವರ (40), ಕೊಲೆಗೆ ಸಹಕರಿಸಿದ ಆಕೆಯ ದೊಡ್ಡಕ್ಕ ಕೊಲ್ಹಾಪೂರ ಜಿಲ್ಲೆಯ ಕರವೀರ ತಾಲೂಕಿನ ಸಿಂಗನಾಪೂರ ಗ್ರಾಮದ ವೈಶಾಲಿ ಮಾನೆ (40) ಹಾಗೂ ದೊಡ್ಡಕ್ಕನ ಮಗ ಗೌತಮ್‌ ಮಾನೆ (35) ಹಾಗೂ ಓರ್ವ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ. ಈ ಕುರಿತು ರಾಯಬಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಟಿ ಜೊತೆ ಅನೈತಿಕ ಸಂಬಂಧ: ಬೆಳಗಾವಿಯಲ್ಲಿ ಬಿತ್ತು ಯುವಕನ ಹೆಣ..!

ಏನಿದು ಘಟನೆ?:

ಗಂಡನೊಂದಿಗೆ ಜಗಳವಾಡಿಕೊಂಡು ತನ್ನ ಇಬ್ಬರು ಮಕ್ಕಳೊಂದಿಗೆ ಸುಧಾ ಬೋಸಲೆ ಬೇರೆ ವಾಸವಾಗಿದ್ದಳು. ಪಾತ್ರೆ ಅಂಗಡಿ ಇಟ್ಟುಕೊಂಡು ತಮ್ಮ ಜೀವನ ನಡೆಸುತ್ತಿದ್ದರು. ಈ ವೇಳೆ ಪ್ರಿಯಕರ ಕುಮಾರ ಬಬಲೇಶ್ವರ ಈಕೆಯ ಅಂಗಡಿಯಲ್ಲಿ ತಮಗೆ ಬೇಕಾದ ಪಾತ್ರೆಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದ. ನಂತರ ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ನಂತರ ಸುಧಾ ಹಾಗೂ ಕುಮಾರ ನಡುವೆ ಸಂಬಂಧವೂ ಬೆಳೆದಿದೆ.

ತಾಯಿಯ ಅಕ್ರಮ ಸಂಬಂಧ ವಿಷಯ ತಿಳಿದ ಪುತ್ರ ಹರಿಪ್ರಸಾದ ಬೋಸಲೆ ತಾಯಿಗೆ ಬುದ್ಧಿವಾದ ಹೇಳಿದ್ದಾನೆ. ಆದರೂ ಸುಧಾ ಬೋಸಲೆ ಇದನ್ನು ಹಾಗೆ ಮುಂದುವರಿಸಿದ್ದಾಳೆ. ಇದರಿಂದಾಗಿ ಅಸಮಾಧಾನಗೊಂಡ ಆಕೆಯ ಪುತ್ರ ಜಗಳವಾಡಿದ್ದಾನೆ. ಪುತ್ರ ಹರಿಪ್ರಸಾದನ ವಾದದ ಗಂಭೀರತೆ ಅರಿತ ಸುಧಾ ಆತಂಕಗೊಂಡು ಕೊಲ್ಲಾಪೂರದಲ್ಲಿರುವ ತನ್ನ ಹಿರಿಯ ಅಕ್ಕ ವೈಶಾಲಿ ಹಾಗೂ ಈಕೆಯ ಪುತ್ರ ಗೌತಮ್‌ನಿಗೆ ಕರೆ ಮಾಡಿ ರಾಯಬಾಗಕ್ಕೆ ಬರುವಂತೆ ತಿಳಿಸಿದ್ದಾಳೆ. ಆಗ ರಾತ್ರಿ ಮಲಗಿದ ಸಮಯದಲ್ಲಿ ಪುತ್ರ ಹರಿಪ್ರಸಾದನನ್ನು ಹತ್ಯೆ ಮಾಡಿದ್ದಾಳೆ. ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಬೊಬ್ಬೆ ಹೊಡೆದಿದ್ದಾರೆ.

ಕೊಪ್ಪಳ: ಮದುವೆಯಾಗಿದ್ರೂ ಬಿಡದ ಅನೈತಿಕ ಸಂಬಂಧ, ಆತ್ಮಹತ್ಯೆಗೆ ಶರಣಾದ ಜೋಡಿ..!

ಅಕ್ಕ ಪಕ್ಕದವರು ಕೂಡ ಇದನ್ನು ನಂಬಿದ್ದರು. ಆದರೆ, ಪೊಲೀಸರು ಮನೆಗೆ ಬಂದಾಗ ಯುವಕ ಕುತ್ತಿಗೆಯಲ್ಲಿ ಗಾಯವಾಗಿರುವುದನ್ನು ನೋಡಿದ್ದಾರೆ. ನಂತರ ಅನುಮಾನಗೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದು ಅಸಹಜ ಸಾವು ಎಂದು ವರದಿ ಬಂದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸುಧಾ ಬೋಸಲೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತನ್ನ ಹೇಯ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ವೈಶಾಲಿ, ಆಕೆಯ ಪುತ್ರ ಗೌತಮ್‌, ಪ್ರಿಯಕರ ಕುಮಾರ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಡಿಎಸ್ಪಿ ಶ್ರೀಪಾದ ಜಲ್ದೆ ಮಾರ್ಗದರ್ಶನದಲ್ಲಿ ರಾಯಬಾಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಚ್‌.ಡಿ.ಮುಲ್ಲಾ, ಪಿಎಸೈ ಐಶ್ವರ್ಯ ನಾಗರಾಳ, ಎಎಸೈ ಕೆ.ಆರ್‌.ಗುಡಜ, ಸಿಬ್ಬಂದಿ ಆರ್‌.ಬಿ.ಖಾನಾಪೂರೆ, ಎಸ್‌.ಎಸ್‌.ಸಾಸನೂರ, ಕೆ.ಎ.ಡಬಾಜ, ಒ.ಎಸ್‌.ವಡೆಯರ, ಎಸ್‌.ವೈ ತಳವಾರ, ಎಸ್‌.ಎಸ್‌.ಪೂಜಾರಿ, ಅಶ್ವಿನಿ ಆಸಂಗಿ, ರಷೀದಾ ನದಾಫ, ಕಾವೇರಿ ಸಾಲಾಪೂರೆ, ಎಸ್‌.ಎಸ್‌. ಚೌದ್ರಿ, ಎಂ.ಎಂ.ರಾಜಮನಿ, ಎಸ್‌.ಎಸ್‌.ಸಪ್ತದಾಗರೆ, ರಾಮು ಗಸ್ತಿ, ರಾಜು ಪಿಂಜಾರ, ಟೆಕ್ನಿಕಲ್‌ ವಿಭಾಗದ ಸಿಬ್ಬಂದಿ ವಿನೋದ ಠಕ್ಕಣ್ಣವರ ಬೇಧಿಸುವಲ್ಲಿ ಶ್ರಮಿಸಿದ್ದಾರೆ. ರಾಯಬಾಗ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.