Chikkamagaluru: ಶೂಟೌಟ್ ಹಿನ್ನೆಲೆ: ಮಲೆನಾಡ ವಿವಿಧೆಡೆ 51ಕ್ಕೂ ಹೆಚ್ಚು ಅಕ್ರಮ-ಸಕ್ರಮ ಬಂದೂಕುಗಳ ವಶ
ಮಲೆನಾಡಿನಲ್ಲಿ ಈವರೆಗೆ ನಡೆದ ಹಲವು ಶೂಟೌಟ್ ಪ್ರಕರಣಗಳಲ್ಲಿ ಪರವಾನಗಿ ರಹಿತ ಬಂದೂಕುಗಳ ಸಂಖ್ಯೆಯೇ ಅಧಿಕವಾಗಿತ್ತು. ಅವುಗಳ ಜಾಡು ಹಿಡಿದು ಪತ್ತೆ ಹಚ್ಚುವ ಕೆಲಸ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈವರೆಗೆ ನಡೆದಿರಲಿಲ್ಲ.
ಚಿಕ್ಕಮಗಳೂರು/ಬಾಳೆಹೊನ್ನೂರು (ಫೆ.24): ಮಲೆನಾಡಿನಲ್ಲಿ ಈವರೆಗೆ ನಡೆದ ಹಲವು ಶೂಟೌಟ್ ಪ್ರಕರಣಗಳಲ್ಲಿ ಪರವಾನಗಿ ರಹಿತ ಬಂದೂಕುಗಳ ಸಂಖ್ಯೆಯೇ ಅಧಿಕವಾಗಿತ್ತು. ಅವುಗಳ ಜಾಡು ಹಿಡಿದು ಪತ್ತೆ ಹಚ್ಚುವ ಕೆಲಸ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈವರೆಗೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಕಾಫಿಯ ನಾಡಿನಲ್ಲಿ ಭಾರಿ ಸಂಖ್ಯೆಯಲ್ಲಿ ಅಕ್ರಮ ಬಂದೂಕುಗಳನ್ನು ಕಾರ್ಯಾಚರಣೆ ಮೂಲಕ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಿದರೆ ಗ್ರಾಮದಲ್ಲಿ ಸೋಮವಾರ ನಡೆದ ಶೂಟೌಟ್ ಪ್ರಕರಣದ ಬೆನ್ನತ್ತಿರುವ ಪೊಲೀಸರು ಮಲೆನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಬಂದೂಕು ದುರಸ್ತಿ ಕೇಂದ್ರಗಳ ಮೇಲೆ ದಾಳಿ ನಡೆಸಿ ಒಟ್ಟು 53 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ 41 ಪರವಾನಗಿ ರಹಿತ ಬಂದೂಕುಗಳು, 2 ಪರವಾನಗಿ ರಹಿತ ರಿವಾಲ್ವರ್ ಪತ್ತೆಯಾಗಿವೆ. ಫೆ.21, 22ರಂದು ಬಾಳೆಹೊನ್ನೂರು, ಬಾಳೂರು, ಕಳಸ, ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 6 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ
ಬಂದೂಕು ರಿಪೇರಿ ವೃತ್ತಿ ನಿರ್ವಹಿಸುವ ಮೂವರ ವಿರುದ್ಧ ಪರವಾನಗಿ ರಹಿತ ನಾಡ ಬಂದೂಕುಗಳನ್ನು ಹೊಂದಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಅಡಿಗೆಬೈಲು ನೇತ್ರಕೊಂಡ ಎಸ್ಟೇಟ್‌ನ ಕೂಲಿ ಲೈನ್ ವಾಸಿ ಸದಾಶಿವ ಆಚಾರ್ಯ, ರಂಭಾಪುರಿ ಮಠ ರಸ್ತೆಯ ರಾಮಚಂದ್ರ ಆಚಾರ್ಯ ಹಾಗೂ ಬಾಳೂರು ಠಾಣಾ ವ್ಯಾಪ್ತಿಯ ಕೆಳಗೂರು ವಾಸಿ ಸುಧಾಕರ್ ಆಚಾರ್ಯ ಬಂಧಿತ ಆರೋಪಿಗಳು.
ಇದಲ್ಲದೇ ಬಂಧಿತ ಆರೋಪಿಯಲ್ಲೊಬ್ಬರಾದ ಸದಾಶಿವ ಆಚಾರ್ಯ ನೀಡಿದ ಮಾಹಿತಿ ಮೇರೆಗೆ ಪರವಾನಗಿ ರಹಿತ ಬಂದೂಕುಗಳನ್ನು ಪಡೆದಿದ್ದ ಕಳಸ ಠಾಣಾ ವ್ಯಾಪ್ತಿಯ ಸಂಪಿಗೆಗದ್ದೆ ಹಳುವಳ್ಳಿಯ ಸುಂದರ, ಸಂಪಿಗೆಮನೆ ಹಳುವಳ್ಳಿಯ ಗಂಗಾಧರ ಶೆಟ್ಟಿಹಾಗೂ ಎನ್.ಆರ್.ಪುರ ಠಾಣಾ ವ್ಯಾಪ್ತಿಯ ಆಡುವಳ್ಳಿ ಗ್ರಾಮದ ಹಕ್ಕಲುಮನೆಯ ಶಿವರಾಜ್ ಅವರಿಂದ 3 ಪರವಾನಗಿ ರಹಿತ ಬಂದೂಕುಗಳನ್ನು ವಶಪಡಿಸಿಕೊಂಡು ಅಕ್ರಮ ಬಂದೂಕು ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆಯ ಜಾಡು: ಬಿದರೆ ಗ್ರಾಮದಲ್ಲಿ ನಡೆದ ಶೂಟೌಟ್‌ನಲ್ಲಿ ಇಬ್ಬರು ಸಹೋದರರು ಒಂದೇ ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಬಂದೂಕುಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಎರಡೇ ದಿನದಲ್ಲಿ ಅಕ್ರಮ ಬಂದೂಕುಗಳ ಭರ್ಜರಿ ಬೇಟೆ ಮಾಡಿದ್ದಾರೆ. ಅಕ್ರಮ ನಾಡ ಬಂದೂಕುಗಳ ಕುರಿತು ಕಾರ್ಯಾಚರಣೆ ಬಿರುಸುಗೊಳ್ಳುತ್ತಿದ್ದಂತೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವವರಲ್ಲಿ ನಡುಕ ಹುಟ್ಟಿರುವುದಂತು ನಿಜವಾಗಿದೆ
ಅಕ್ರಮ ಬಂದೂಕುಗಳ ತಯಾರಿಕೆ ಎಲ್ಲಿ?: ಅಕ್ರಮ ನಾಡ ಬಂದೂಕುಗಳ ಪತ್ತೆ ಕಾರ್ಯ ನಡೆಸಿರುವ ಪೊಲೀಸರಿಗೆ ಇದೀಗ ಅವುಗಳ ತಯಾರಿಕೆ ಎಲ್ಲಿ ನಡೆಯುತ್ತಿದೆ. ತಯಾರಿಕೆಗೆ ಅಗತ್ಯ ಪರಿಕರಗಳ ಪೂರೈಕೆ ಎಲ್ಲಿಂದ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾದ ಸವಾಲು ಎದುರಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅಕ್ರಮ ನಾಡ ಬಂದೂಕುಗಳನ್ನು ಕೋವಿ ದುರಸ್ತಿ ಲೈಸೆನ್ಸ್ ಪಡೆದ ವ್ಯಕ್ತಿಗಳೇ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ ಎನ್ನಲಾಗಿದೆ. ಅಕ್ರಮ ನಾಡ ಬಂದೂಕುಗಳನ್ನು ದುರಸ್ತಿಗಾರರೇ ತಯಾರಿಸುತ್ತಿದ್ದರೆ ಅವರಿಗೆ ಅದರ ತಯಾರಿಕೆ ಅಗತ್ಯ ಪರಿಕರಗಳು ಎಲ್ಲಿಂದ ದೊರೆಯುತ್ತಿದ್ದವು ಎನ್ನುವುದನ್ನು ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಕಲೆ ಹಾಕಬೇಕಿದೆ.
ಇದುವರೆಗೆ ಕೋವಿ ದುರಸ್ತಿಗಾರರು ಎಷ್ಟು ಅಕ್ರಮ ಬಂದೂಕುಗಳನ್ನು ತಯಾರಿಸಿ ಯಾವ ಯಾವ ವ್ಯಕ್ತಿಗಳಿಗೆ, ಹೊರ ಊರುಗಳಿಗೆ ನೀಡಿದ್ದಾರೆ ಎಂಬುದು ಸಹ ತನಿಖೆಯಲ್ಲೇ ತಿಳಿಯಬೇಕಿದೆ. ಇದರೊಂದಿಗೆ ಅಕ್ರಮ ಬಂದೂಕುಗಳಿಗೆ ಮದ್ದು, ಗುಂಡುಗಳು ಎಲ್ಲಿಂದ ಪೂರೈಕೆಯಾಗುತ್ತಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚುವ ಕಾರ್ಯ ಆಗಬೇಕಿದೆ. ಏಕೆಂದರೆ ಮದ್ದು, ಗುಂಡುಗಳ ಮಾರಾಟಕ್ಕೆ ಲೈಸೆನ್ಸ್ ಪಡೆದವರು ಈ ಭಾಗದಲ್ಲಿ ಯಾರೂ ಇಲ್ಲ.
ಒಂದು ಮಾಹಿತಿಯ ಪ್ರಕಾರ ಮಲೆನಾಡು ಭಾಗದಲ್ಲಿ ಸಾವಿರಾರು ಅಕ್ರಮ ನಾಡ ಬಂದೂಕುಗಳು ಗ್ರಾಮೀಣ ಜನರು ಹೊಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಆಳವಾಗಿ ಇನ್ನಷ್ಟುತನಿಖೆ ಮಾಡಿದಲ್ಲಿ ಇನ್ನಷ್ಟುಪ್ರಕರಣಗಳು ದಾಖಲಾಗಬಹುದು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪೊಲೀಸ್ ಸಿಬ್ಬಂದಿಯೊಬ್ಬರು. ಮಲೆನಾಡು ಭಾಗದಲ್ಲಿ ಅಕ್ರಮ ನಾಡ ಬಂದೂಕುಗಳನ್ನು ಹೊಂದುವುದು ಪ್ರಮುಖವಾಗಿ ಪ್ರಾಣಿ ಬೇಟೆ, ಒಂಟಿ ಮನೆಗಳಲ್ಲಿ ಕುಟುಂಬ ರಕ್ಷಣೆ, ಬೆಳೆ ರಕ್ಷಣೆಗಾಗಿ ಆಗಿದೆ. ಇದು ಕಾನೂನು ಬಾಹಿರ ಎಂದು ಬಂದೂಕು ಹೊಂದಿರುವವರಿಗೆ ಅರಿವಿದ್ದರೂ ಅನಿವಾರ್ಯವಾಗಿ ಸಾವಿರಾರು ರುಪಾಯಿ ಖರ್ಚು ಮಾಡಿ ಬಂದೂಕು ಮಾಡಿಸಿಕೊಂಡಿದ್ದಾರೆ.
ಆದರೆ, ವಿವಿಧ ಕಾನೂನು ತೊಡಕುಗಳಿಂದ ಯಾರೂ ಪರವಾನಗಿ ಮಾಡಿಸಲು ಮುಂದೆ ಹೋಗಿಲ್ಲ. ಬಂದೂಕು ಪರವಾನಗಿ ಪಡೆಯಲು ಪೊಲೀಸ್ ಇಲಾಖೆಯ ವಿವಿಧ ಮಾನದಂಡಗಳು ಇವೆ. ಅವುಗಳಿಂದ ಪರವಾನಗಿ ದೊರೆಯುವುದು ಸಾಕಷ್ಟುಕಷ್ಟದ ವಿಚಾರವಾಗಿದೆ ಎನ್ನುತ್ತಿವೆ ಪೊಲೀಸ್ ಮೂಲಗಳು.
ಚುನಾವಣೆ ಗೆಲ್ಲಲು ಅಮಿತ್ ಶಾ ಪಂಚಸೂತ್ರ: ಮೋದಿ, ಪಕ್ಷದ ಹೆಸರಲ್ಲಿ ಚುನಾವಣಾ ಪ್ರಚಾರ ನಡೆಸಿ
ಬಂದೂಕು ದುರಸ್ತಿಗಾರರಿಂದ ವಶಪಡಿಸಿಕೊಂಡ ವಸ್ತುಗಳು
ಬಂದೂಕು- 47
ರಿವಾಲ್ವರ್- 2
ಬಂದೂಕು ನಳಿಕೆ- 24
0.22 ರೈಫಲ್ ಗುಂಡು- 7
ಬಕ್ ಶಾಟ್ ಗುಂಡು- 40
ಕಾಟ್ರಿಜ್ಡ್- 15
ಮರದ ತುಂಡು- 7
ಶೂಟೌಟ್ ಪ್ರಕರಣದ ನಂತರ ಇಲಾಖೆ ಅಕ್ರಮ ಬಂದೂಕುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯಾಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪ್ರಕರಣಗಳ ತನಿಖೆಯನ್ನು ಮುಂದುವರೆಸಿದ್ದು, ಪತ್ತೆ ಕಾರ್ಯಾಚರಣೆಯು ಮುಂದುವರೆಯಲಿದೆ.
ಉಮಾ ಪ್ರಶಾಂತ್, ಜಿಲ್ಲಾ ರಕ್ಷಣಾಧಿಕಾರಿ