ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯುಎಸ್‌ಎಸ್‌ಬಿ) ಎಂಜಿನಿಯರ್‌ ಸೇರಿದಂತೆ ವಿವಿಧ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವು ಸುಮಾರು ಜನರಿಂದ 1.08 ಕೋಟಿ ವಸೂಲಿ ಮಾಡಿ ಇಬ್ಬರು ಕಿಡಿಗೇಡಿಗಳು ವಂಚಿಸಿರುವ ಬಗ್ಗೆ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಅ.02): ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯುಎಸ್‌ಎಸ್‌ಬಿ) ಎಂಜಿನಿಯರ್‌ ಸೇರಿದಂತೆ ವಿವಿಧ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವು ಸುಮಾರು ಜನರಿಂದ 1.08 ಕೋಟಿ ವಸೂಲಿ ಮಾಡಿ ಇಬ್ಬರು ಕಿಡಿಗೇಡಿಗಳು ವಂಚಿಸಿರುವ ಬಗ್ಗೆ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮನಾಭ ನಗರದ ಚಂದ್ರಶೇಖರ್‌ ಹಾಗೂ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಪ್ರಕಾಶ್‌ ಎಂಬುವರ ಮೇಲೆ ವಂಚನೆ ಆರೋಪ ಬಂದಿದೆ. ಜಲಮಂಡಳಿಯಲ್ಲಿ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಹಾಗೂ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಸೇರಿದಂತೆ ಇತರೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಚಂದ್ರಶೇಖರ್‌ ಹಾಗೂ ಪ್ರಕಾಶ್‌ ವಂಚಿಸಿದ್ದಾರೆ ಎಂದು ಆರೋಪಿಸಿ ಬನಶಂಕರಿ 3ನೇ ಹಂತದ ನಿವಾಸಿ ಹಾಗೂ ಜಲಮಂಡಳಿಯ ನಿವೃತ್ತ ನೌಕರ ಚೌಡೇಗೌಡ ದೂರು ನೀಡಿದ್ದರು. ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಡಿಮೆ ಬೆಲೆಗೆ ವಸ್ತು ಖರೀದಿಸಿ ಹೆಚ್ಚಿನ ದರಕ್ಕೆ ಮಾರಿ ಎಂದು ವಂಚನೆ: ಖತರ್ನಾಕ್‌ ವಂಚಕ ಅರೆಸ್ಟ್‌

ನೌಕರಿ ಆಸೆ ತೋರಿಸಿ ಟೋಪಿ: ಹಲವು ವರ್ಷಗಳಿಂದ ಚೌಡೇಗೌಡ ಅವರಿಗೆ ಚಂದ್ರಶೇಖರ್‌ ಪರಿಚಿತನಾಗಿದ್ದ. ಈ ಗೆಳೆತನದಲ್ಲಿ ಚೌಡೇಗೌಡ ಅವರಿಗೆ, ತನಗೆ ಸರ್ಕಾರದ ಮಟ್ಟದಲ್ಲಿ ಒಳ್ಳೆಯ ಸಂಪರ್ಕವಿದೆ. 2018ರಲ್ಲಿ ಬೆಂಗಳೂರು ಜಲ ಮಂಡಳಿಯಲ್ಲಿ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಹಾಗೂ ಎಫ್‌ಡಿಸಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿತ್ತು. ಆದರೆ ಕೊರೋನಾ ಸೋಂಕು ಕಾರಣಕ್ಕೆ ನೇಮಕಾತಿ ತಡವಾಗಿದ್ದು, ಈಗ ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನಿಮ್ಮೂರಿನ ಕಡೆಯ ಹುಡುಗರಿದ್ದರೆ ಹೇಳು ಕೆಲಸ ಮಾಡಿಸಿಕೊಡುತ್ತೇನೆ ಎಂದಿದ್ದ.

ಸಹಾಯಕ ಎಂಜಿನಿಯರ್‌ (ಎಇ) ಹುದ್ದೆಗೆ 10 ಲಕ್ಷ, ಕಿರಿಯ ಎಂಜಿನಿಯರ್‌ (ಜೆಇ) ಹುದ್ದೆಗೆ 5 ಲಕ್ಷ, ಬಿಲ್‌ ಕಲೆಕ್ಟರ್‌ ಹಾಗೂ ಎಸ್‌ಡಿಎ ಹುದ್ದೆಗಳಿಗೆ 2-3 ಲಕ್ಷ ನೀಡಬೇಕೆಂದು ಹೇಳಿದ್ದ. ಆಗ ಪ್ರಕಾಶ್‌ನನ್ನು ಚೌಡೇಗೌಡರಿಗೆ ಪರಿಚಯ ಮಾಡಿಸಿ ಈತನ ಮೂಲಕ ಜಲಮಂಡಳಿಯಲ್ಲಿ ಉದ್ಯೋಗ ಸಿಗಲಿದೆ ಎಂದು ಮಾತು ಕೊಟ್ಟಿದ್ದ. ಈ ಮಾತು ನಂಬಿದ ಚೌಡೇಗೌಡ ಅವರು, ತಮಗೆ ಪರಿಚಯವಿದ್ದ ಸುಮಾರು 21ಕ್ಕೂ ಹೆಚ್ಚಿನ ಉದ್ಯೋಗಾಂಕ್ಷಿಗಳಿಗೆ ಮಧ್ಯವರ್ತಿಯಾಗಿ ಚಂದ್ರಶೇಖರ್‌ಗೆ 1.08 ಕೋಟಿ ಕೊಡಿಸಿದ್ದರು. 

Mandya Crime: ಹಳೆ ದ್ವೇಷ, ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

ಈ ಹಣ ಸಂದಾಯವಾದ ಬಳಿಕ ಆರೋಪಿಗಳು ಸಂಪರ್ಕ ಕಡಿತ ಮಾಡಿದ್ದರು. ಇತ್ತ ಹಣವು ಇಲ್ಲ, ಅತ್ತ ಉದ್ಯೋಗವಿಲ್ಲದ ಕಂಗಾಲಾದ ಆಕಾಂಕ್ಷಿಗಳು, ಮಧ್ಯವರ್ತಿಯಾಗಿದ್ದ ಚೌಡೇಗೌಡ ಅವರ ಮನೆಗೆ ಬಂದ ಹಣ ಮರಳಿಸುವಂತೆ ಒತ್ತಾಯಿಸಿದ್ದರು. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಬನಶಂಕರಿ ಠಾಣೆಗೆ ಚೌಡೇಗೌಡ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.