ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!
ಶಾಂತಿನಗರ MLA ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕಾರು ಅಪಘಾತ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ ಗನ್‌ಮ್ಯಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾರು ಅಪಘಾತವಾದಾಗ ಡ್ರೈವ್ ಮಾಡಿದ್ದು ನಾನೇ ಎಂದು ಠಾಣೆಗೆ ಬಂದ ನಲಪಾಡ್ ಗನ್‌ಮ್ಯಾನ್ ಬಾಯಿಯಿಂದ ಪೊಲೀಸರು ಸತ್ಯಹೊರಹಾಕಿದ್ದಾರೆ. ಪೊಲೀಸರ ಐಡಿಯಾಗೆ ಸುಲಭವಾಗಿ ಗನ್‌ಮ್ಯಾನ್ ತಪ್ಪೊಪ್ಪಿಕೊಂಡಿದ್ದಾನೆ.
ಬೆಂಗಳೂರು(ಫೆ.12): ನಗರದ ಮೇಕ್ರಿ ಸರ್ಕಲ್ ಬಳಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕಾರು ಅಪಘಾತ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಕಾರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾರು ಅಪಘಾತವಾದಾಗ ಡ್ರೈವ್ ಮಾಡುತ್ತಿದ್ದದ್ದು ನಾನೇ ಎಂದು ನಲಪಾಡ್ ಗನ್‌ಮ್ಯಾನ್ ಸದಾಶಿವನಗರ ಪೊಲೀಸ್ ಠಾಣೆ ಹತ್ತಿದ್ದರು. ಈ ಮೂಲಕ ಅಪಘಾತ ಪ್ರಕರಣಕ್ಕೆ ರೋಚಕ ತಿರುವು ನೀಡಲು ಪ್ರಯತ್ನಿಸಿದ್ದರು.
ಇದನ್ನೂ ಓದಿ: ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!
ನಲಪಾಡ್ ಗನ್‌ಮ್ಯಾನ್ ಬಾಲು ವಿಚಾರಣೆ ನಡೆಸಿದ ಪೊಲೀಸರಿಗೆ ಸಮರ್ಪಕ ಉತ್ತರ ಸಿಗಲಿಲ್ಲ. ಎಲ್ಲಾ ಪ್ರಶ್ನೆಗೂ ಹಾರಿಕೆ ಉತ್ತರ ನೀಡಿದ ನಲಪಾಡ್ ಗನ್‌ಮ್ಯಾನ್ ಬಾಲು ಬಾಯಿಯಿಂದ ಸತ್ಯ ಹೊರಹಾಕಲು ಪೊಲೀಸರು ಸಣ್ಣ ಉಪಾಯ ಮಾಡಿದ್ದಾರೆ. ಬಾಲುವನ್ನು ಬೆಂಟ್ಲಿ ಕಾರಿನ ಬಳಿ ಕರೆದೊಯ್ದು, ಕಾರು ಸ್ಟಾರ್ಟ್ ಮಾಡಲು ಸೂಚಿಸಿದ್ದಾರೆ.
ಇದನ್ನೂ ಓದಿ:ನಲಪಾಡ್ ಕಾರು ರೇಸ್ ಕ್ರೇಝ್, ಅಮಾಯಕನ ಕಾಲು ಕಟ್!.
ಪೊಲೀಸರಿಂದ ಕೀ ಪಡೆದ ಬಾಲು, ದುಬಾರಿ ಬೆಂಟ್ಲಿ ಕಾರನ್ನು ಸ್ಟಾರ್ಟ್ ಮಾಡಲು ತಡಕಾಡಿದ್ದಾನೆ. ಎಷ್ಟು ಹೊತ್ತಾದರೂ ಬೆಂಟ್ಲಿ ಕಾಂಟಿನೆಂಟಲ್ GT ಕಾರು ಸ್ಟಾರ್ಟ್ ಆಗಲೇ ಇಲ್ಲ. ಈ ಮೂಲಕ ಕಾರು ಅಪಘಾತದ ವೇಳೆ ಬೆಂಟ್ಲಿ ಕಾರು ಚಾಲನೆ ಮಾಡುತ್ತಿದ್ದದ್ದು, ಗನ್‌ಮ್ಯಾನ್ ಬಾಲು ಅಲ್ಲ ಅನ್ನೋದು ಪೊಲೀಸರಿಗೆ ಖಚಿತವಾಗಿದೆ.
ಸಂಚಾರಿ ಪೊಲೀಸರ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ದಿಕ್ಕು ತಪ್ಪಿಸಲು ಮುಂದಾದ, ಸಾಕ್ಷ್ಯ ನಾಶ ಹಾಗೂ ಆಸಂಬದ್ದ ಹೇಳಿಕೆ ನೀಡಿದ ಆರೋಪಡಿಯಲ್ಲಿ ನಲಪಾಡ್ ಗನ್‌ಮ್ಯಾನ್ ಬಾಲುವನ್ನು ಬಂಧಿಸಲಾಗಿದೆ. ಬಂಧನದ ಹಿನ್ನಲೆಯಲ್ಲಿ ನಲಪಾಡ್ ಗನ್‌ಮ್ಯಾನ್ ಬಾಲುವನ್ನು ಇಂದು(ಫೆ.12) 7 ನೇ ACMM ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು.
ನಲಪಾಡ್ ಕಾರು ಅಪಘಾತ ಪ್ರಕರಣ
ನಗರದ ಮೇಕ್ರಿ ಸರ್ಕಲ್ ಬಳಿ ನಲಪಾಡ್ ಬೆಂಟ್ಲಿ ಕಾರು ಅಪಘಾತಕ್ಕೀಡಾಗಿತ್ತು. ನಲಪಾಡ್ ಕಾರು, ಬೈಕ್ ಹಾಗೂ ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ ನಾಲ್ವರು ಗಾಯಗೊಂಡಿದ್ದರು. ಇದರಲ್ಲಿ ಬೈಕ್ ಸವಾಲ ಪ್ರಪುಲ್ ಕಾಲಿಗೆ ಗಂಭೀರ ಗಾಯವಾಗಿತ್ತು. ಇತ್ತ ವಿಚಾರಣೆ ಹಿನ್ನಲೆಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿದ ಪ್ರಪುಲ್ ದಂಪತಿ ಘಟನೆ ವಿವರಿಸಿದ್ದಾರೆ.
ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ