ಪಾದರಾಯನಪುರ ನಿವಾಸಿ ನಬೀದ್‌ ಪಾಷಾ ಬಂಧಿತ. ಆರೋಪಿಯಿಂದ 6.80 ಲಕ್ಷ ರು. ಮೌಲ್ಯದ 40 ಮೊಬೈಲ್‌ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಬೆಂಗಳೂರು(ಸೆ.16): ಹಾಡಹಗಲೇ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆಗೈದು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿರುವ ಘಟನೆ ನಡೆದಿದೆ.
ಪಾದರಾಯನಪುರ ನಿವಾಸಿ ನಬೀದ್‌ ಪಾಷಾ(27) ಬಂಧಿತ. ಆರೋಪಿಯಿಂದ 6.80 ಲಕ್ಷ ರು. ಮೌಲ್ಯದ 40 ಮೊಬೈಲ್‌ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಸೆ.10ರಂದು ಬೆಳಗ್ಗೆ 6.50ರ ಸುಮಾರಿಗೆ ಕೆ.ಆರ್‌.ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜನ್‌ ಎಂಬುವವವರು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಡಿಯೊ ದ್ವಿಚಕ್ರ ವಾಹನದಲ್ಲಿ ಬಂದಿರುವ ಆರೋಪಿ ನಬೀದ್‌ ಪಾಷಾ, ಚಾಕು ತೆಗೆದು ಬಿಜನ್‌ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಲು ಮುಂದಾಗಿದ್ದಾನೆ. ಇದೇ ಸಮಯಕ್ಕೆ ಕಲಾಸಿಪಾಳ್ಯ ಪೊಲೀಸ್‌ ಠಾಣೆ ಕಾನ್ಸ್‌ಟೇಬಲ್‌ ಲಕ್ಷ್ಮಣ ರಾಥೋಡ್‌, ಬೀಟ್‌ ಕರ್ತವ್ಯ ಮುಗಿಸಿ ಅದೇ ಮಾರ್ಗವಾಗಿ ಬರುತ್ತಿದ್ದರು. ಆರೋಪಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗುತ್ತಿರುವುದನ್ನು ನೋಡಿ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಯು ನಬೀದ್‌ ಚಾಕು ತೆಗೆದು ಲಕ್ಷ್ಮಣ ರಾಥೋಡ್‌ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದರೂ ಬಿಡದೆ ಆರೋಪಿಯನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಅಷ್ಟರಲ್ಲಿ ಹೆಡ್‌ಕಾನ್ಸ್‌ಟೇಬಲ್‌ ನಾಗೇಶ್‌ ಸಹ ಅಲ್ಲಿಗೆ ಬಂದಿದ್ದಾರೆ. ಬಳಿಕ ಇಬ್ಬರೂ ಆರೋಪಿಯನ್ನು ಹಿಡಿದುಕೊಂಡಿದ್ದಾರೆ.

ಅಪ್ರಾಪ್ತ ಯುವತಿಯನ್ನ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ ಹಾಡ್ಯಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ!

ಆರೋಪಿ ನಬೀದ್‌, ದ್ವಿಚಕ್ರ ವಾಹನದಲ್ಲಿ ನಗರದ ವಿವಿಧೆಡೆ ಸುತ್ತಾಡಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಟಾರ್ಗೆಟ್‌ ಮಾಡಿ ಚಾಕು ತೋರಿಸಿ ಮೊಬೈಲ್‌, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಾನೆ. ಸುಲಿಗೆ ಮಾಲುಗಳನ್ನು ಪರಿಚಿತ ಮುಖಾಂತರ ವಿಲೇವಾರಿ ಮಾಡಿಸಿ ಬಂದ ಹಣದಿಂದ ಮೋಜು-ಮಸ್ತಿ ಮಾಡಿ ವ್ಯಯಿಸುತ್ತಾನೆ. ಖಾಲಿಯಾದ ಬಳಿಕ ಮತ್ತೆ ಸುಲಿಗೆಗೆ ಇಳಿಯುವ ಪ್ರವೃತ್ತಿ ರೂಢಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪಿಸಿಕೊಳ್ಳಲು ಡ್ರಾಮಾ!

ಪೊಲೀಸಿರಿಬ್ಬರು ಹಿಡಿದುಕೊಂಡ ತಕ್ಷಣ ಆರೋಪಿ ನಬೀದ್‌ ಜೋರಾಗಿ ಚೀರಾಡಿ ಜನರನ್ನು ಸೇರಿಸಲು ಯತ್ನಿಸಿದ್ದಾನೆ. ಸುಮ್ಮನೆ ಪೊಲೀಸರು ನನ್ನನ್ನು ಹಿಡಿದು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರ ಬೆಂಬಲ ಪಡೆದು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಈತನ ನಾಟಕ ಅರಿತ ಪೊಲೀಸರು, ಈತ ಮೊಬೈಲ್‌ ಕಳ್ಳ. ಈಗಷ್ಟೇ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆಗೈದು ಮೊಬೈಲ್‌ ಕಿತ್ತುಕೊಂಡು ಬಂದಿದ್ದಾನೆ ಎಂದು ಹೇಳಿ ಆರೋಪಿಯ ಬಳಿ ಇದ್ದ ಮೊಬೈಲ್‌ ತೋರಿಸಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.