Asianet Suvarna News Asianet Suvarna News

ಕಾಫಿ ತೋಟದಲ್ಲಿ ಅಕ್ರಮ ಗೋಹತ್ಯೆ: ಮಣ್ಣಿನಲ್ಲಿ ತ್ಯಾಜ್ಯ ಹೂತು ಹಾಕಿರುವ ಕಿಡಿಗೇಡಿಗಳು!

ಕಾಫಿ ತೋಟದಲ್ಲಿ ಅಕ್ರಮವಾಗಿ ಗೋಹತ್ಯೆ, ಮಣ್ಣಿನಲ್ಲಿ ತ್ಯಾಜ್ಯ ಹೂತು ಹಾಕಿರುವ ಕಿಡಿಗೇಡಿಗಳು ಹತ್ಯೆ ಬಳಿಕ ಮಾಂಸ ಮಾಡಿ ಮಾರಾಟ ಮಾಡಿರುವ ಶಂಕೆ

Miscreants who have slaughtered cows in coffee plantation at kodagu rav
Author
First Published Jan 22, 2023, 3:06 PM IST

ವರದಿ ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ..22) : ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಮಾತ್ರ ನಿಂತಿಲ್ಲ. 

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬಿ. ಗರಗಂದೂರು ಸಮೀಪದ ಹಾರಂಗಿ ಹಿನ್ನೀರು ಪ್ರದೇಶದಲ್ಲಿರುವ ಕಾಫಿ ತೋಟದಲ್ಲಿ ಗೋಹತ್ಯೆ ಮಾಡಲಾಗಿದ್ದು, ಬಳಿಕ ಅದರ ತ್ಯಾಜ್ಯವನ್ನು ಕಾಫಿ ತೋಟದ ಒಳಗೆ ಮಣ್ಣಿನಲ್ಲಿ ಮುಚ್ಚಿರುವ ಘಟನೆ ಬೆಳಕಿಗೆ ಬಂದಿದೆ. 

ಗ್ರಾಮದ ಲತೀಫ್ ಎಂಬುವರ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ 2 ಗೋವುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಅವುಗಳ ತ್ಯಾಜ್ಯವನ್ನು ಯಾರಿಗೂ ಗೊತ್ತಾಗಬಾರದೆಂದು ತೋಟದಲ್ಲಿಯೇ ಮಣ್ಣಿನಲ್ಲಿ ಹೂತು ಹಾಕಲಾಗಿದೆ. 

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್‌

ಗೋಹತ್ಯೆ ಮಾಡಿರುವ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆಯ ಹೊಸತೋಟ ಮತ್ತು ಮಾದಾಪುರ ಭಾಗದ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯನ್ನು ಖಂಡಿಸಿದರು. ಅಲ್ಲದೆ ಪೊಲೀಸರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಈ ವೇಳೆ ಗೋವಿನ ಚರ್ಮ ಹಾಗೂ ಕರುಳು ಸೇರಿದಂತೆ ಇತರೆ ತ್ಯಾಜ್ಯಗಳನ್ನು ಮಣ್ಣಿನಡಿ ಹೂತು ಹಾಕಿರುವುದು ಪತ್ತೆಯಾಗಿದ್ದು ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿ ಹೆಚ್ಚಿನ ತನಿಖೆ ನಡೆಸಲಾಯಿತು. 

ರಾಜ್ಯದಲ್ಲಿ ಈಗ ಗೋಹತ್ಯೆ ನಿಷೇಧ (Ban cow slaughter) ಕಾನೂನು ಜಾರಿಗೆ ಬಂದಿದ್ದರೂ, ಕೊಡಗು(Kodagu) ಜಿಲ್ಲೆಯಲ್ಲಿ ಮಾತ್ರ ರಾಜರ ಆಳ್ವಿಕೆ ಕಾಲದಿಂದಲೂ ಗೋಹತ್ಯೆ ನಿಷೇಧವಿದೆ. ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಗೋಹತ್ಯೆ, ಗೋಮಾಂಸ ಮಾರಾಟ, ಗೋವುಗಳ ಅಕ್ರಮ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಪೋಲೀಸ್ ಇಲಾಖೆ ಅವುಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆಯೆಂದು ಹಿಂದು ಜಾಗರಣ ವೇದಿಕೆಯ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಕರಣದ ಸಮಗ್ರ ತನಿಖೆ ನಡೆಸಿ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು. 

ಗೋಹತ್ಯೆ ಪ್ರಕರಣದ ಬಗ್ಗೆ ಸ್ಥಳೀಯ ಸುಂಟಿಕೊಪ್ಪ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೆಟ್ಟಗುಡ್ಡ, ಕಾಫಿ ತೋಟಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಯಾರಿಗೂ ತಿಳಿಯದಂತೆ ನಿರಂತರವಾಗಿ ಗೋಹತ್ಯೆ ಮಾಡಲಾಗುತ್ತಿದೆ. ಹತ್ಯೆ ಮಾಡಿ ಬಳಿಕ ಮಾಂಸವನ್ನು ಗುಪ್ತವಾಗಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಅಸ್ಸಾಂ ಮೂಲಗಳಿಂದ ಬಂದಿರುವ ಕಾರ್ಮಿಕರು ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುತ್ತಿರುವುದು ಹಲವು ಬಾರಿ ಗೊತ್ತಾಗಿದೆ. ಇವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗೋಹತ್ಯೆ, ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದಂತಹ ಹಲವು ಪ್ರಕರಣಗಳು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಾಗುತ್ತವೆ. ಆದರೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾತ್ರ ಗಮನಕ್ಕೆ ಬಾರದ ಇರುವುದು ಅಚ್ಚರಿ ಮೂಡಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. 

ಅಂದು ಗೋಹತ್ಯೆಗೆ ವಿರೋಧ, ಇಂದು ಗೋಪೂಜೆ; ಚುನಾವಣೆ ಹೊತ್ತಲ್ಲಿ ಪರಮೇಶ್ವರ್ ಹಿಂದೂ ಅಸ್ತ್ರ!

ಇನ್ನುಮುಂದೆ ಜಿಲ್ಲೆಯಲ್ಲಿ ಗೋಹತ್ಯೆ ಪ್ರಕರಣಗಳಿಗೆ ತಡೆಯೊಡ್ಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾದಾಪುರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Follow Us:
Download App:
  • android
  • ios