Asianet Suvarna News Asianet Suvarna News

ಬೆಂಗಳೂರಿನಲ್ಲೂ 'ವಂದೇ ಭಾರತ್‌' ರೈಲಿಗೆ ಕಲ್ಲೆಸೆತ: ರೈಲಿನ 6 ಗಾಜುಗಳಿಗೆ ಹಾನಿ

ಚಲಿಸುತ್ತಿರುವ ರೈಲುಗಳ ಮೇಲೆ ಕಲ್ಲೆಸೆತ ಪ್ರಕರಣ ಬೆಂಗಳೂರು ನೈಋುತ್ಯ ರೈಲ್ವೆ ವಿಭಾಗದಲ್ಲಿ ಹೆಚ್ಚುತ್ತಿದೆ. ಶನಿವಾರ ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ (20607) ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಎರಡು ಕೋಚ್‌ನ ಆರು ಗಾಜುಗಳು ಜಖಂಗೊಂಡಿವೆ. 
 

miscreants pelted stones at mysuru chennai vande bharat express 6 windows damaged gvd
Author
First Published Feb 26, 2023, 7:01 AM IST

ಬೆಂಗಳೂರು (ಫೆ.26): ಚಲಿಸುತ್ತಿರುವ ರೈಲುಗಳ ಮೇಲೆ ಕಲ್ಲೆಸೆತ ಪ್ರಕರಣ ಬೆಂಗಳೂರು ನೈಋುತ್ಯ ರೈಲ್ವೆ ವಿಭಾಗದಲ್ಲಿ ಹೆಚ್ಚುತ್ತಿದೆ. ಶನಿವಾರ ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ (20607) ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಎರಡು ಕೋಚ್‌ನ ಆರು ಗಾಜುಗಳು ಜಖಂಗೊಂಡಿವೆ. ಕೃಷ್ಣರಾಜಪುರ ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಯಾರಿಗೂ ಗಾಯವಾಗಿಲ್ಲ. ವಂದೇ ಭಾರತ್‌ನ ಸಿ4 ಬೋಗಿಯ 10, 11, 12 ಹಾಗೂ ಸಿ5 ಬೋಗಿಯ 20, 21, 22ರ ಗಾಜುಗಳು ಒಡೆದಿವೆ. ಸಂಜೆ ವೇಳೆಗೆ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್‌) ಘಟನಾ ಸ್ಥಳಕ್ಕೆ ತೆರಳಿ ಸುಮಾರು 1 ಕಿ.ಮೀ.ವರೆಗೆ ಪರಿಶೀಲನೆ ನಡೆಸಿದೆ.

ಇಂದಿನಿಂದ ಪೆಟ್ರೋಲಿಂಗ್‌: ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಋುತ್ಯ ರೈಲ್ವೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌, ಘಟನೆ ಬಗ್ಗೆ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್‌) ಕೇಸ್‌ ದಾಖಲಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ನೈಋುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಇಂದಿನಿಂದ (ಭಾನುವಾರ) ಆರ್‌ಪಿಎಫ್‌, ರಾಜ್ಯ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗಳ ಸಹಯೋಗದಲ್ಲಿ ಪೆಟ್ರೋಲಿಂಗ್‌ ನಡೆಸಲು ತೀರ್ಮಾನಿಸಲಾಗಿದೆ. ಜತೆಗೆ ಜನತೆಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ರಾಜ್ಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಹಾಸನ ಟಿಕೆಟ್‌ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ: ಎಚ್‌.ಡಿ.ಕುಮಾರಸ್ವಾಮಿ

ಶಾಲಾ ಕಾಲೇಜು ವಿದ್ಯಾರ್ಥಿಗಳ ದುಷ್ಕೃತ್ಯ: ಈ ಮೊದಲು ರೈಲು ಸಂಚರಿಸುವ ವೇಳೆ ಸ್ಲಂ ಪ್ರದೇಶ, ವಿರಳ ಜನ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು. ಆದರೆ, ಕಳೆದೆರಡು ತಿಂಗಳಿಂದ ನಡೆಯುತ್ತಿರುವ ಪ್ರಕರಣ ಗಮನಿಸಿದಾದ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ದುಷ್ಕೃತ್ಯ ಎಸಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಈಗಾಗಲೆ ಗುರುತಿಸಲಾದ ಕಲ್ಲೆಸೆತ ಪ್ರದೇಶದಲ್ಲಿ ಜನತೆಗೆ ತಿಳಿವಳಿಕೆ, ಜಾಗೃತಿ ಮೂಡಿಸಲಾಗುವುದು. ಪರೀಕ್ಷಾ ಸಮಯದಲ್ಲೂ ಇಂತಹ ಘಟನೆಗಳು ನಡೆದಿರುವುದು ಆಶ್ಚರ್ಯ ಮೂಡಿಸಿದೆ. ಹೀಗಾಗಿ ಕೌನ್ಸೆಲಿಂಗ್‌ ನಡೆಸಲು ಯೋಜಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

ಕಠಿಣ ಶಿಕ್ಷೆ: ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವುದು ಜಾಮೀನು ರಹಿತ ಅಪರಾಧ. ಇದರಿಂದ ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಅಪಾಯವಾದರೆ ದುಷ್ಕರ್ಮಿಗೆ ಜೀವಾವಧಿ ಶಿಕ್ಷ ಅಥವಾ ಹತ್ತು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸಾರ್ವಜನಿಕ ಆಸ್ತಿಯಾದ ರೈಲ್ವೆಗೆ ಕಲ್ಲೆಸೆದು ಹಾನಿ ಮಾಡದಂತೆ ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಆವಿಷ್ಕಾರ ಸ್ನೇಹಿ ವಾತಾವರಣವಿದೆ: ರಾಜೀವ್‌ ಚಂದ್ರಶೇಖರ್‌

ಹೆಚ್ಚುತ್ತಿರುವ ಕಲ್ಲೆಸೆತ: ನೈಋುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ರೈಲಿಗೆ ಕಲ್ಲೆಸೆದ ಸಂಬಂಧ ಆರ್‌ಪಿಎಫ್‌ ಜನವರಿಯಲ್ಲಿ 21, ಫೆಬ್ರವರಿಯಲ್ಲಿ ಈವರೆಗೆ 13 ಪ್ರಕರಣ ದಾಖಲಿಸಿಕೊಂಡಿದೆ. ಇಲ್ಲಿವರೆಗೆ ಸಾಮಾನ್ಯ ರೈಲುಗಳನ್ನು ಗುರಿ ಮಾಡಿಕೊಂಡಿದ್ದ ದುಷ್ಕರ್ಮಿಗಳು ಇದೀಗ ಮೊದಲ ಬಾರಿ ವಂದೇ ಭಾರತ್‌ಗೆ ಕಲ್ಲೆಸೆದಿದ್ದಾರೆ. ಪ್ರಮುಖವಾಗಿ ಲೊಟ್ಟೆಗೊಲ್ಲಹಳ್ಳಿ-ಕೊಡಿಗೇಹಳ್ಳಿ, ಬಯ್ಯಪ್ಪನಹಳ್ಳಿ-ಚನ್ನಸಂದ್ರ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ ವಿಭಾಗಗಳಲ್ಲಿ ಹಾಗೂ ಕೃಷ್ಣರಾಜಪುರ, ಬೈಯ್ಯಪ್ಪನಹಳ್ಳಿ, ತುಮಕೂರು, ಬಾಣಸವಾಡಿ, ಕಾರ್ಮೆಲಾರಂ, ಬೆಂಗಳೂರು ಕಂಟೋನ್ಮೆಂಟ್‌ ವ್ಯಾಪ್ತಿಯಲ್ಲಿ ಕಲ್ಲೆಸೆತ ನಡೆದಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios