ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಯುವಕನ ಮೇಲೆ ಪೋಕ್ಸೋ ಕೇಸ್
Crime News: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ತಮಿಳುನಾಡು (ಅ. 28): ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬೆನ್ನಲ್ಲೇ ಅತ್ಯಾಚಾರ ಎಸಗಿ ಬಾಲಕಿಯನ್ನು ಗರ್ಭವತಿಯನ್ನಾಗಿಸಿದ ಆರೋಪದ ಮೇಲೆ 20 ವರ್ಷದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿ ಬುಧವಾರ ತನ್ನ ಮನೆಯಲ್ಲಿ 6 ತಿಂಗಳ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದಾಳೆ.
ಬಳಿಕ ಬಾಲಕಿಯ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿ ಅಪ್ರಾಪ್ತ ವಯಸ್ಕಳಾಗಿರುವುದು ಕೂಡ ಪತ್ತೆಯಾಗಿದೆ. ನಂತರ ವೈದ್ಯರು ತಿರುಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ತಾಯಿಯಿಂದ ಮಾಹಿತಿ ಪಡೆದಿದ್ದಾರೆ.
ಮೆಗ್ಗಾನ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಡಿಪ್ಲೋಮಾ ವಿದ್ಯಾರ್ಥಿನಿ..!
ಮಗಳು 11 ನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ವರ್ಷ ತನ್ನ ಮಗಳನ್ನು ತನ್ನ ಕಂಪನಿಗೆ ಕರೆದೊಯ್ದಿದ್ದು, ಅಲ್ಲಿ ಅಜಿತ್ (20) ನನ್ನು ಭೇಟಿಯಾಗಿದ್ದಳು ಮತ್ತು ಇಬ್ಬರು ಪ್ರೀತಿಸುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿಯ ಪೊಲೀಸರಿಗೆ ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಯ ತಾಯಿ ಸ್ನ್ಯಾಕ್ಸ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರೋಪಿ ಸಂತ್ರಸ್ತೆಯನ್ನು ಆಕೆಯ ಅಜ್ಜಿಯ ಮನೆಯಲ್ಲಿ ಭೇಟಿಯಾಗಿ ಏಪ್ರಿಲ್ 10 ಮತ್ತು 14 ರಂದು ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಗಳು ತಿಳಿಸಿವೆ. ನಂತರ ಬಾಲಕಿ ಗರ್ಭಿಣಿಯಾಗಿದ್ದಾಳೆ. ಘಟನೆಯ ಬಗ್ಗೆ ಬಾಲಕಿಯ ತಾಯಿಗೆ ಗೊತ್ತಿದ್ದರೂ ಪೊಲೀಸರ ಮುಂದೆ ವಿಷಯ ತಿಳಿಸಿಲು ಹಿಂದೇಟು ಹಾಕಿದ್ದಾರೆ. ಬುಧವಾರ ಬಾಲಕಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಅಜಿತ್ ಪರಾರಿಯಾಗಿದ್ದಾನೆ.