Crime News: ವಿವಾಹಿತ ವ್ಯಕ್ತಿಯೊಬ್ಬ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ ಅಪ್ರಾಪ್ತ ಬಾಲಕಿಯನ್ನು ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆ ಓಡಿಶಾದಲ್ಲಿ ನಡೆದಿದೆ
ಓಡಿಶಾ (ಜು. 25): ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ವಿವಾಹಿತ ವ್ಯಕ್ತಿಯೊಬ್ಬ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ ಅಪ್ರಾಪ್ತ ಬಾಲಕಿಯನ್ನು ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಆರೋಪಿಯನ್ನು 27 ವರ್ಷದ ದಯಾನಿಧಿ ಜೆನಾ ಎಂದು ಗುರುತಿಸಲಾಗಿದ್ದು, ಮೃತಳು 14 ವರ್ಷದ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿ ಆರೋಪಿ ದಯಾನಿಧಿ ಜೆನಾ ಹೆಂಡತಿಯಿಂದ ಟ್ಯೂಷನ್ ತೆಗೆದುಕೊಳ್ಳಲು ಆತನ ಮನೆಗೆ ಹೋಗುತ್ತಿದ್ದಳು. ಈ ಅವಧಿಯಲ್ಲಿ, ಜೆನಾ ಅವಳತ್ತ ಆಕರ್ಷಿತನಾಗಿದ್ದು, ಸಂಬಂಧ ಬೆಳೆಸಲು ಅವಳನ್ನು ಸಂಪರ್ಕಿಸಿದ್ದ. ಆದರೆ ಬಾಲಕಿ ಅದನ್ನು ತಿರಸ್ಕರಿಸಿದ್ದಳು. ಬಳಿಕ ಆರೋಪಿಯ ವರ್ತನೆಯಿಂದ ಬಾಲಕಿ ಮನೆಗೆ ಟ್ಯೂಷನ್‌ಗೆ ಹೋಗುವುದನ್ನೂ ನಿಲ್ಲಿಸಿದ್ದಳು.
ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಆರೋಪಿ: ಆದರೆ ಮತ್ತೊಂದೆಡೆ, ಜೆನಾ ತನ್ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಅವಳ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದ. ಬಾಲಕಿಯನ್ನು ಕೊಂದು ಹಾಕುವ ಮೂಲಕ ತನಗಾದ ಅವಮಾನವನ್ನು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಭಾನುವಾರ ಬೆಳಿಗ್ಗೆ, ಹುಡುಗಿ ಕಲರ್ ಪೆನ್ಸಿಲ್ ಖರೀದಿಸಲು ಅಂಗಡಿಗೆ ಹೋಗುತ್ತಿದ್ದಾಗ, ಜೆನಾ ಅವಳನ್ನು ಅಡ್ಡಗಟ್ಟಿದ್ದ.
ಶಾಲಾ ಟಾಯ್ಲೆಟ್‌ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಆರೋಪಿ ಬಂಧನ
ನಂತರ ಅವಳನ್ನು ಬಲವಂತವಾಗಿ ತನ್ನ ಮನೆಯ ಸಮೀಪವಿರುವ ಪಾಳುಬಿದ್ದ ಶೌಚಾಲಯವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಆರೋಪಿ ಜೆನಾ ಅದಾಗಲೇ ಸೀಮೆಎಣ್ಣೆ ಮತ್ತು ಲೈಟರ್ ಇಟ್ಟುಕೊಂಡಿದ್ದ. ಜೆನಾ ನಂತರ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ವರದಿಗಳು ತಿಳಿಸಿವೆ.
ಬಾಲಕಿಯ ಕಿರುಚಾಟವನ್ನು ಕೇಳಿದ ಜೆನಾ ಪತ್ನಿ ಮತ್ತು ಇತರ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ ಅವರು ತಲುಪುವಷ್ಟರಲ್ಲಿ ಆಕೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದಳು. ಅಪರಾಧ ಮಾಡಿದ ನಂತರ ಜೆನಾ ವಿಷ ಸೇವಿಸಿದ್ದ ಎಂದು ವರದಿಯಾಗಿದೆ.
ಆದರೆ, ಗ್ರಾಮಸ್ಥರ ಕೈಗೆ ಜೆನಾ ಸಿಕ್ಕಿಬಿದ್ದಿದ್ದು ಮಾಹಿತಿ ಪಡೆದ ಖೈರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಜೆನಾನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!
ಆರೋಪಿ ಆಸ್ಪತ್ರೆಗೆ ದಾಖಲು: ಖೈರಾ ಪೊಲೀಸ್ ಠಾಣೆ ಐಐಸಿ ಗಣೇಶ್ವರ್ ಪ್ರಧಾನ್ ಮಾತನಾಡಿ, "ಆರೋಪಿಯ ಆರೋಗ್ಯ ಹದಗೆಟ್ಟಿದ್ದರಿಂದ ಆತನನ್ನು ಚಿಕಿತ್ಸೆಗಾಗಿ ಎಫ್‌ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. "ಅವನನ್ನು ಅಲ್ಲಿಗೆ ದಾಖಲಿಸಲಾಗಿದೆ ಮತ್ತು ಅವನ ಮೇಲೆ ಕಣ್ಣಿಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಜೆನಾ ವಿರುದ್ಧ ಐಪಿಸಿಯ ಸೆಕ್ಷನ್ 302, 294 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಚೇತರಿಸಿಕೊಂಡರೆ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
