Asianet Suvarna News Asianet Suvarna News

ಬೆಂಗಳೂರು: ಹಣಕ್ಕಾಗಿ ಗ್ರಾಹಕರನ್ನೇ ಕೊಂದ ಮೆಕ್ಯಾನಿಕ್ ಸೆರೆ

ರಾಮಸಂದ್ರದ ಗಾಯಿತ್ರಿ ಲೇಔಟ್‌ನ ನಿವಾಸಿ ಸಂಜಯ್‌, ಮಂಗನಹಳ್ಳಿ ಕ್ರಾಸ್‌ನ ಆನಂದ್ ಹಾಗೂ ರಾಯಚೂರು ಜಿಲ್ಲೆ ರಾಮದುರ್ಗ ತಾಲೂಕಿನ ಹನುಮಂತು ಬಂಧಿತರಾಗಿದ್ದು, ಆರೋಪಿಗಳಿಂದ ₹2.40 ಲಕ್ಷ ನಗದು, ಚಿನ್ನದ ಸರ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ತಿಮ್ಮನ ಪತ್ತೆಗೆ ತನಿಖೆ ನಡೆದಿದೆ: ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ 

Mechanic Arrested on Customer Murder Case in Bengaluru grg
Author
First Published Jan 11, 2024, 9:38 AM IST | Last Updated Jan 11, 2024, 9:38 AM IST

ಬೆಂಗಳೂರು(ಜ.11):  ಹಣಕ್ಕಾಗಿ ತನ್ನ ಗ್ಯಾರೇಜ್‌ಗೆ ಬೈಕ್ ಸರ್ವಿಸ್‌ ಬಿಡುತ್ತಿದ್ದ ಹಣವಂತರನ್ನು ಅಪಹರಿಸಿ ಹಣ ಸುಲಿಗೆ ಮಾಡಿ ಬಳಿಕ ಕೊಲೆ ಮಾಡುತ್ತಿದ್ದ ಮೆಕ್ಯಾನಿಕ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ರಾಮಸಂದ್ರದ ಗಾಯಿತ್ರಿ ಲೇಔಟ್‌ನ ನಿವಾಸಿ ಸಂಜಯ್‌, ಮಂಗನಹಳ್ಳಿ ಕ್ರಾಸ್‌ನ ಆನಂದ್ ಹಾಗೂ ರಾಯಚೂರು ಜಿಲ್ಲೆ ರಾಮದುರ್ಗ ತಾಲೂಕಿನ ಹನುಮಂತು ಬಂಧಿತರಾಗಿದ್ದು, ಆರೋಪಿಗಳಿಂದ ₹2.40 ಲಕ್ಷ ನಗದು, ಚಿನ್ನದ ಸರ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ತಿಮ್ಮನ ಪತ್ತೆಗೆ ತನಿಖೆ ನಡೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಡಿಗೆ ಕೆಲಸಗಾರ ಕಿಶನ್ ಕುಮಾರ್‌ನನ್ನು ಅಪಹರಿಸಿ ಹಣ ಸುಲಿಗೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಆದರೆ ಆ ವೇಳೆ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಜ್ಞಾನಭಾರತಿ ಠಾಣೆಗೆ ಸಂತ್ರಸ್ತ ದೂರು ನೀಡಿದ್ದ. ಈ ದೂರು ಆಧರಿಸಿ ತನಿಖೆಗಿಳಿದ ಜ್ಞಾನಭಾರತಿ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸಂಜಯ್‌ ತಂಡವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಟೋಮೊಬೈಲ್‌ ಅಂಗಡಿ ಕೆಲಸಗಾರ ಗುರುಸಿದ್ದಪ್ಪ ಕೊಲೆ ಕೃತ್ಯ ಪತ್ತೆಯಾಗಿದೆ.

ಈಕೆ ಸಾಮಾನ್ಯದವಳಲ್ಲ, 2 ಸಾವಿರ ಕೊಲೆ.. ಕೊಕೇನ್ ವ್ಯವಹಾರದಲ್ಲಿ 157 ಶತಕೋಟಿ ಸಂಪಾದಿಸಿದ್ದಾಳೆ

ಹಣವಂತರೇ ಟಾರ್ಗೇಟ್‌:

ಆರೋಪಿಗಳಾದ ಸಂಜಯ್‌, ಆನಂದ್‌ ಹಾಗೂ ತಿಮ್ಮ ಬಾಲ್ಯ ಸ್ನೇಹಿತರು. ನಗರಕ್ಕೆ ಗಾರೆ ಕೆಲಸಕ್ಕಾಗಿ ಹನುಮಂತ ಬಂದಿದ್ದ. ಈ ತಂಡದ ಮಾಸ್ಟರ್‌ಮೈಂಡ್‌ ಸಂಜಯ್‌, ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಗ್ಯಾರೇಟ್ ಇಟ್ಟಿದ್ದ. ಆನಂದ್ ಡೆಲಿವರಿ ಬಾಯ್ ಆಗಿದ್ದರೆ, ತಿಮ್ಮ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ತನ್ನ ಗ್ಯಾರೇಜ್‌ಗೆ ಬೈಕ್ ಸರ್ವೀಸ್‌ಗೆ ಬಿಡಲು ಬಂದಾಗ ಸಂಜಯ್‌ಗೆ ಹನುಮಂತ ಪರಿಚಿತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸುಲಭವಾಗಿ ಹಣ ಸಂಪಾದನೆಗೆ ಶ್ರೀಮಂತರನ್ನು ಅಪಹರಿಸಿ ಸುಲಿಗೆ ಮಾಡಲು ಯೋಜಿಸಿದ್ದ ಸಂಜಯ್‌, ತನ್ನ ಗ್ಯಾರೇಜ್‌ಗೆ ಬೈಕ್‌ಗಳನ್ನು ಸರ್ವೀಸ್‌ಗೆ ಬಿಡಲು ಬರುವ ಹಣವಂತ ಗ್ರಾಹಕರನ್ನೇ ಅಪಹರಿಸಲು ಸಂಚು ರೂಪಿಸಿದ್ದ. ಅಂತೆಯೇ ಒಂದು ವಾರದ ಅವಧಿಯಲ್ಲಿ ಕಿಶನ್‌ ಹಾಗೂ ಗುರುಸಿದ್ದಪ್ಪ ಅವರನ್ನು ಪ್ರತ್ಯೇಕವಾಗಿ ಮೆಕ್ಯಾನಿಕ್ ತಂಡವು ಅಪಹರಿಸಿತ್ತು. ಆದರೆ ಕಿಶನ್‌ ತಪ್ಪಿಸಿಕೊಂಡರೆ, ಗುರುಸಿದ್ದಪ್ಪ ಆರೋಪಿಗಳಿಂದ ಹತ್ಯೆಗೀಡಾದರು ಎಂದು ಪೊಲೀಸರು ವಿವರಿಸಿದ್ದಾರೆ.

ಮಾಲೀಕನ ಬದಲು ಕೆಲಸಗಾರ ಸಿಕ್ಕಿಬಿದ್ದ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಡಿಗೆ ಕೆಲಸಗಾರ ಸಂಜಯ್ ಪಂಡಿತ್‌, ತಮ್ಮ ಕುಟುಂಬದ ಜತೆ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಮನೆ ಹತ್ತಿರವೇ ಇದ್ದ ಸಂಜಯ್‌ ಗ್ಯಾರೇಜ್‌ಗೆ ಪಂಡಿತ್‌ ಬೈಕ್ ಸರ್ವಿಸ್‌ಗೆ ಬಿಡುತ್ತಿದ್ದರು. ಇದರಿಂದ ಪಂಡಿತ್ ಜತೆ ಸಂಜಯ್‌ ಸ್ನೇಹ ಬೆಳೆದಿತ್ತು. ಈ ಗೆಳೆತನ ಹಿನ್ನೆಲೆಯಲ್ಲಿ ಪಂಡಿತ್ ಬಳಿ ಹಣವಿದೆ ಎಂದು ಅಂದಾಜಿಸಿ, ಅವರನ್ನು ಅಪಹರಿಸಿ ಹಣ ವಸೂಲಿಗೆ ಹೊಂಚು ಹಾಕಿದ್ದ. ಅಂತೆಯೇ ಡಿ.25ರಂದು ಅವರಿಗೆ ತನ್ನ ಸಹಚರನ ಮೂಲಕ ಕರೆ ಮಾಡಿಸಿದ ಮೆಕ್ಯಾನಿಕ್‌, ಕಾರ್ಪೆಂಟಿಂಗ್ ಕೆಲಸ ವಿಚಾರ ಮಾತನಾಡುವ ನೆಪದಲ್ಲಿ ಕೃಷ್ಣ ಅರಮನೆ ಹೋಟೆಲ್ ಬಳಿಗೆ ಬರುವಂತೆ ಆಹ್ವಾನಿಸಿದ್ದ. ಆದರೆ ಆ ದಿನ ಕುಂದಾಪುರದಲ್ಲಿದ್ದ ಪಂಡಿತ್ ಅವರು, ತಮ್ಮ ಬದಲಿಗೆ ಕೆಲಸಗಾರ ಕಿಶನ್‌ನನ್ನು ಮಾತುಕತೆಗೆ ಕಳುಹಿಸಿದ್ದರು. ಆಗ ಕಿಶನ್‌ನನ್ನೇ ಪಂಡಿತ್‌ ಎಂದು ಭಾವಿಸಿ ಆರೋಪಿಗಳು ಅಪಹರಿಸಿದ್ದರು.

ಅನಂತರ ನಾನು ಕೆಲಸಗಾರನಷ್ಟೇ ನಮ್ಮ ಮಾಲಿಕ ಸಂಜಯ್‌ ಪಂಡಿತ್‌ ಊರಿಗೆ ಹೋಗಿದ್ದಾರೆ ಎಂದು ಆತ ಅಲವತ್ತುಕೊಂಡಿದ್ದ. ಬಳಿಕ ಕಿಶನ್‌ ಮೂಲಕ ಪಂಡಿತ್‌ಗೆ ಕರೆ ಮಾಡಿಸಿ ₹4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆಗ ತಾನು ಕುಂದಾಪುರದಲ್ಲಿ ಇರುವುದಾಗಿ ಹೇಳಿದಾಗ ಹಣ ಪಡೆಯಲು ಕುಂದಾಪುರಕ್ಕೆ ಕಿಶನ್‌ನನ್ನು ಕರೆದುಕೊಂಡು ಆರೋಪಿಗಳು ತೆರಳಿದ್ದರು. ಆದರೆ ಮಾರ್ಗ ಮಧ್ಯೆ ಹೋಟೆಲ್‌ಗೆ ಊಟ ತರಲು ಆರೋಪಿಗಳು ತೆರಳಿದ್ದ ವೇಳೆ ತಪ್ಪಿಸಿಕೊಂಡಿದ್ದ ಕಿಶನ್‌, ಜ.2ರಂದು ಜ್ಞಾನಭಾರತಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದ.

₹10 ಸಾವಿರ ಕೇಳಿದ್ರು

ಮಾಲೀಕ ಎಂದು ಭಾವಿಸಿ ಕಿಶನ್‌ ಬಳಿ ₹4 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಆದರೆ ಆತ ಮಾಲೀಕನಲ್ಲ ಕೆಲಸಗಾರ ಎಂದು ಗೊತ್ತಾದ ಬಳಿಕ ₹10 ಸಾವಿರ ಕೊಡುವಂತೆ ಒತ್ತಾಯಿಸಿದ್ದರು. ಆದರೆ ಕೊನೆಗೆ ಆರೋಪಿಗಳಿಗೆ ಬಿಡಿಗಾಸು ಸಿಗಲಿಲ್ಲ.

ಗುರುಸಿದ್ದಪ್ಪ ಅಪಹರಣ

ಕಿಶನ್‌ ಅಪಹರಣದಿಂದ ಬಿಡಿಗಾಸು ಸಿಗದೆ ಹತಾಶೆಗೊಂಡ ಮೆಕ್ಯಾನಿಕ್ ಸಂಜಯ್‌ ತಂಡವು ಮತ್ತೊಬ್ಬ ಹಣವಂತನನ್ನು ಅಪಹರಿಸಲು ಮುಂದಾಯಿತು. ಅಂತೆಯೇ ಡಿ.30ರಂದು ತನ್ನ ಗ್ಯಾರೇಜ್‌ಗೆ ಬೈಕ್ ಸರ್ವೀಸ್‌ಗೆ ಬಿಡುತ್ತಿದ್ದ ಜೆ.ಸಿ.ರಸ್ತೆಯ ಆಟೋಮೊಬೈಲ್ ಅಂಗಡಿ ಕೆಲಸಗಾರ ಗುರುಸಿದ್ದಪ್ಪನನ್ನು ಸಂಜಯ್‌ ತಂಡವು ಅಪಹರಿಸಿತ್ತು. ವಿಶ್ವೇಶ್ವರಯ್ಯ ಲೇಔಟ್‌ನಲ್ಲೇ ತನ್ನ ಕುಟುಂಬದ ಜತೆ ನೆಲೆಸಿದ್ದ ಗುರುಸಿದ್ದಪ್ಪ, ಹಲವು ದಿನಗಳಿಂದ ಸಂಜಯ್‌ಗೆ ಗೆಳೆಯರಾಗಿದ್ದರು. ಅಪಹರಿಸಿದ ಬಳಿಕ ಅವರ ಬಳಿ ₹5 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಕೊನೆಗೆ ಅದೇ ದಿನ ಮಧ್ಯಾಹ್ನ ಗುರುಸಿದ್ದಪ್ಪ ಅವರಿಂದ ಅವರ ಪತ್ನಿಗೆ ಕರೆ ಮಾಡಿಸಿ ₹5 ಲಕ್ಷವನ್ನು ಆರೋಪಿಗಳು ವಸೂಲಿ ಮಾಡಿದ್ದರು. ಆನಂತರ ತಮ್ಮ ಬಗ್ಗೆ ಪೊಲೀಸರಿಗೆ ಹೇಳುತ್ತಾನೆ ಎಂದು ಹೆದರಿ ರಾಮನಗರ ತಾಲೂಕಿನ ಕೂಟಗಲ್ ಗ್ರಾಮದ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ಗುರುಸಿದ್ದಪ್ಪನನ್ನು ಕರೆದೊಯ್ದು ಕೊಂದು ಮೃತದೇಹವನ್ನು ಅಲ್ಲೇ ಬಿಸಾಡಿ ಆರೋಪಿಗಳು ಮರಳಿದ್ದರು. ಇತ್ತ ಅದೇ ದಿನ ರಾತ್ರಿ ತಮ್ಮ ಪತಿ ನಾಪತ್ತೆ ಬಗ್ಗೆ ಜ್ಞಾನಭಾರತಿ ಠಾಣೆಗೆ ಗುರುಸಿದ್ದಪ್ಪ ಪತ್ನಿ ದೂರು ನೀಡಿದ್ದರು.

ಗೋವಾದಲ್ಲಿ ನ್ಯೂ ಇಯರ್‌ ಪಾರ್ಟಿ, ಧರ್ಮಸ್ಥಳದಲ್ಲಿ ಮುಡಿ

ಅಪಹರಣ ಕೃತ್ಯದಿಂದ ಸಂಪಾದಿಸಿದ ₹5 ಲಕ್ಷದಲ್ಲಿ ಹೊಸ ವರ್ಷಾಚರಣೆಗೆ ಗೋವಾಗೆ ತೆರಳಿ ಆರೋಪಿಗಳು ಮಜಾ ಮಾಡಿದ್ದರು. ಆನಂತರ ಧರ್ಮಸ್ಥಳಕ್ಕೆ ತೆರಳಿ ಮುಡಿಕೊಟ್ಟು ಜ.3ರಂದು ಬೆಂಗಳೂರಿಗೆ ಆರೋಪಿಗಳು ಮರಳಿದ್ದರು. ಅಷ್ಟರಲ್ಲಿ ಅಪಹರಣ ಹಾಗೂ ನಾಪತ್ತೆ ಕೃತ್ಯಗಳ ಬಗ್ಗೆ ತನಿಖೆಗಿಳಿದಿದ್ದ ಜ್ಞಾನಭಾರತಿ ಪೊಲೀಸರಿಗೆ ಎರಡು ಪ್ರಕರಣಗಳಲ್ಲಿ ಒಂದೇ ತಂಡ ಕೈವಾಡ ಬಗ್ಗೆ ಶಂಕೆ ಮೂಡಿತ್ತು. ಕೂಡಲೇ ಪಂಡಿತ್‌ ಹಾಗೂ ಗುರುಸಿದ್ದಪ್ಪ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಒಂದೇ ನಂಬರ್‌ನಿಂದ ಕರೆ ಬಂದಿದ್ದು ಗೊತ್ತಾಯಿತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ತನಿಖಾ ತಂಡವು ಅಂತಿಮವಾಗಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!

ಕೊಲೆಗೆ ಮುನ್ನ ಮದ್ಯ ಪಾರ್ಟಿ

ಅಪಹರಿಸಿದ ಬಳಿಕ ಗುರುಸಿದ್ದಪ್ಪನಿಗೆ ಆರೋಪಿಗಳು ಕಂಠಮಟ್ಟ ಮದ್ಯ ಕುಡಿಸಿದ್ದರು. ಹಣ ವಸೂಲಿ ಬಳಿಕ ಕೂಟಗಲ್‌ ಬೆಟ್ಟದಲ್ಲಿ ಮತ್ತೊಂದು ಪಾರ್ಟಿ ಇದೆ ಎಂದು ಹೇಳಿ ಆತನನ್ನು ಕರೆದೊಯ್ದು ಆರೋಪಿಗಳು ಹತ್ಯೆಗೈದಿದ್ದರು ಎನ್ನಲಾಗಿದೆ. ಗುರುಸಿದ್ದಪ್ಪನ ಮೃತದೇಹವನ್ನು ಕಾಡುಪ್ರಾಣಿಗಳು ತಿಂದು ಹಾಕಿದ್ದವು.

ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಲ್ಲ. ಆದರೆ ಹಣಕ್ಕಾಗಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಅಲ್ಲದೆ ಇದೇ ರೀತಿ ಈ ಹಿಂದೆ ಸಹ ಅಪಹರಣ ನಡೆಸಿರುವ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್‌.ಗಿರೀಶ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios