ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಮೇಲೆ 65 ವರ್ಷದ ನಿವೃತ್ತ ಗ್ರಾಮಲೆಕ್ಕಿಗ ಸಹಾಯಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಪೋಷಕರು ದೂರು ನೀಡಿದ್ದು, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದ್ದೂರು (ಜುಲೈ.10): ಶಾಲಾ ವಿದ್ಯಾರ್ಥಿನಿ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ತಾಲೂಕಿನ ತೈಲೂರು ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿರುವುದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ಸಂಬಂಧ ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿದ ದೂರಿನ ಅನ್ವಯ ಗ್ರಾಮದ ಟಿ.ಜಿ.ರಾಮಯ್ಯನ ವಿರುದ್ಧ ಮದ್ದೂರು ಪೊಲೀಸರು ಪೋಕ್ಸೋ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಕಂದಾಯ ಇಲಾಖೆ ಗ್ರಾಮಲೆಕ್ಕಿಗನ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡಿರುವ 65 ವರ್ಷದ ರಾಮಯ್ಯ ತೈಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಕೂಲಿ ಕೆಲಸಕ್ಕೆ ಹೋದಾಗ ಪಕ್ಕದ ಮನೆ ನಿವಾಸಿ ರಾಮಯ್ಯ ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ತನ್ನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಬಾಲಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು ವಿಚಾರಣೆ ನಡೆಸಿದಾಗ ವೃದ್ಧನ ಪೈಶಾಚಿಕ ಕೃತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.