ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಪತಿಯೊಬ್ಬ ಜೂಜಾಟದಲ್ಲಿ ತನ್ನ ಪತ್ನಿಯನ್ನು ಪಣಕ್ಕಿಟ್ಟು ಸೋತಿದ್ದಾನೆ. ಬಳಿಕ, ಆತನ ತಂದೆ, ಮೈದುನ ಸೇರಿದಂತೆ ಸಂಬಂಧಿಕರು ಮಹಿಳೆಯ ಮೇಲೆ ಸಾಮೂಹಿಕ ಅ*ತ್ಯಾಚಾರ ಎಸಗಿದ್ದಾರೆ.
ಜೂಜಾಟದಲ್ಲಿ ಸೋತು ದ್ರೌಪದಿಯನ್ನೇ ಪಾಂಡವರು ಪಣಕ್ಕಿಟ್ಟ ಕಥೆ ಎಲ್ಲರಿಗೂ ತಿಳಿದದ್ದೇ. ಆದರೆ ದ್ರೌಪದಿಯ ಮಾನ ಕಾಪಾಡಲು ಕೃಷ್ಣ ಬಂದ. ಆದರೆ ಇಲ್ಲೊಂದು ಅತ್ಯಂತ ಹೀನಾಯ ಘಟನೆಯಲ್ಲಿ, ಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟು, ಸೋತಿದ್ದಾನೆ ಪತಿ ಮಹಾಶಯ. ಆದರೆ ಆಕೆಯನ್ನು ಕಾಪಾಡಲು ಯಾರೂ ಬರಲಿಲ್ಲ. ಬದಲಿಗೆ ಆ ನೀಚ ಪತಿಯ ನೀಚರಾಗಿರುವ ಅಪ್ಪ, ಮೈದುನ ಸೇರಿ ಸಂಬಂಧಿಕರೆಲ್ಲರೂ ಈ ಮಹಿಳೆಯ ಮೇಲೆ ಸಾಮೂಹಿಕ ಅ*ತ್ಯಾಚಾರ ಮಾಡಿದ್ದಾರೆ. ಜೀವವೊಂದನ್ನು ಉಳಿಸಿಕೊಂಡಿರುವ ಮಹಿಳೆ ಈಗ ಸಹಾಯಕ್ಕಾಗಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ.
ಇಂಥದ್ದೊಂದು ಕರಾಳ, ಭಯಾನಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ. ಇಂಥ ನೀಚ ಕೃತ್ಯ ಮಾಡಿರುವ ಪತಿ ಡ್ಯಾನಿಶ್, ಗಂಡನ ಅಣ್ಣ ಶಾಹಿದ್, ಅತ್ತಿಗೆಯ ಪತಿ ಶೌಕೀನ್, ಮಾವ ಯಾಮಿನ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾಳೆ.
ಜೂಜಿನಿಂದ ಹಿಂಸೆ
ಕಳೆದ ವರ್ಷ ಅಕ್ಟೋಬರ್ 24 ರಂದು ಸಂತ್ರಸ್ತೆಯ ಮದುವೆ ಜೂಜುಕೋರ ಕುಟುಂಬದ ಜೊತೆ ನಡೆದಿದೆ. ಮದುವೆಯ ಆರಂಭದಿಂದಲೂ ಕುಡಿತ, ಜೂಜಿನಿಂದಾಗಿ ಪತಿಯಿಂದ ಹಿಂಸೆ ಅನುಭವಿಸುತ್ತಲೇ ಬಂದಿದ್ದಾಳೆ ಮಹಿಳೆ. ಆದರೆ ಆಕೆಯ ರಕ್ಷಣೆಗೆ ಯಾರೂ ಬಾರದ ಕಾರಣ ಅದನ್ನು ಅನುಭವಿಸುತ್ತಲೇ ಇದ್ದಾಳೆ. ಆದರೆ, ಈಚೆಗೆ ಜೂಜಿನಲ್ಲಿ ಅದೂ ತನ್ನ ತಂದೆಯ ಎದುರೇ ಪತ್ನಿಯನ್ನು ಡ್ಯಾನಿಷ್ ಪಣಕ್ಕಿಟ್ಟಿದ್ದಾನೆ. ಸೊಸೆಯನ್ನೇ ಪಣಕ್ಕಿಟ್ಟಿದ್ದನ್ನು ಒಪ್ಪಿಕೊಂಡಿರೋ ಈ ಕಾಮುಕ ಕುಟುಂಬಸ್ಥರು ಆಕೆಯನ್ನು ಹರಿದು ಮುಕ್ಕಿದ್ದಾರೆ!
ಪರಪುರುಷರ ಜೊತೆ ಸಂಬಂಧ
'ಜೂಜಿನಲ್ಲಿ ಪಣಕ್ಕೆ ಇಡುವ ಮೊದಲು ನನ್ನ ಗಂಡ ಹಣಕ್ಕಾಗಿ ಇತರ ಪುರುಷರೊಂದಿಗೆ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಅದನ್ನು ನಾನು ನಿರಾಕರಿಸಿದ್ದೆ. ಆದರೆ, ಜೂಜಿನಲ್ಲಿಯೇ ಪಣಕ್ಕಿಟ್ಟ, ಸೋತ. ಆಗ ಮಾವ, ಮೈದುನ ಸೇರಿ ಎಂಟು ಮಂದಿ ನನ್ನ ಮೇಲೆ ಪದೇ ಪದೇ ಅ*ತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನನ್ನ ಮಾವ ಯಾಮಿನ್, "ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವ ಎಲ್ಲವನ್ನೂ ನೀನು ಪಾಲಿಸಬೇಕು, ನಮ್ಮನ್ನು ಸಂತೋಷವಾಗಿಡಬೇಕು" ಎಂದು ಹೇಳುತ್ತಲೇ ರೇ* ಮಾಡುತ್ತಿದ್ದ. ಇದನ್ನು ಸಹಿಸಿಕೊಳ್ಳಲು ಆಗದೇ ತಪ್ಪಿಸಿಕೊಂಡು ಬಂದು ದೂರು ನೀಡುತ್ತಿದ್ದೇನೆ ಎಂದಿದ್ದಾಳೆ!
ನದಿಗೆ ಎಸೆದರು
"ನನ್ನ ಮದುವೆಯಿಂದಲೂ ವರದಕ್ಷಿಣೆಗಾಗಿ ನಾನು ಹಿಂಸೆ ಅನುಭವಿಸುತ್ತಿದ್ದೆ. ನನ್ನ ಗಂಡ ಜೂಜಾಟಕ್ಕೆ ವ್ಯಸನಿಯಾಗಿದ್ದನು. ಅವರೆಲ್ಲಾ ಅ*ತ್ಯಾಚಾರ ಮಾಡಿದ್ದರಿಂದ ಗರ್ಭಿಣಿಯೂ ಆದೆ. ಅದನ್ನು ತೆಗೆಸಿದರು. ನಾನು ಅವರಿಗೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಕಾಲಿಗೆ ಆ್ಯಸಿಡ್ ಸುರಿದರು. ಕೊಲ್ಲಲು ನದಿಗೆ ಎಸೆದರು. ದಾರಿಹೋಕರು ನನ್ನನ್ನು ಉಳಿಸಿದರು. ಈಗ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ನನಗೆ ಬೆದರಿಕೆ ಹಾಕಲಾಗುತ್ತಿದೆ" ಎಂದು ಮಹಿಳೆ ಕಣ್ಣೀರಿದ್ದಾಳೆ. ಬಿನೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ವಿಷಯ ತನಿಖೆಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.


