18ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಕೊಲೆಗೈದ ವಿಕೃತಕಾಮಿ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತನ ರಾಜಾತಿಥ್ಯಕ್ಕೆ ಹಣ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. 

ವಿಕೃತಕಾ*ಮಿ ಎಂದರೆ ಸಾಕು, ಮೊದಲಿಗೆ ಬರುವ ಹೆಸರೇ ಉಮೇಶ್​ ರೆಡ್ಡಿ. ಪುಟ್ಟ ಪುಟಾಣಿ ಬಾಲೆಯರೂ ಸೇರಿದಂತೆ 18 ಮಹಿಳೆಯರ ಮೇಲೆ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿ ಕೊ*ಲೆ ಮಾಡಿ ಗಲ್ಲು ಶಿಕ್ಷೆಗೂ ಒಳಗಾಗಿ, ಕೊನೆಗೆ ಈ ಶಿಕ್ಷೆಯಿಂದ ತಪ್ಪಿಸಿಕೊಂಡು ಆಜೀವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ ಈತ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರುವ ಐಎಸ್ಐ ಉಗ್ರರು ಸೇರಿದಂತೆ ಇನ್ನೂ ಕೆಲವರ ಜೊತೆ ಐಷಾರಾಮಿ ಬಿಂದಾಸ್​ ಜೀವನ ನಡೆಸುತ್ತಿದ್ದಾರೆ ಉಮೇಶ್​ ರೆಡ್ಡಿ. ಅಷ್ಟಕ್ಕೂ ಪರಪ್ಪನ ಅಗ್ರಹಾರದಲ್ಲಿ ಇಂಥ ರಾಜಾತಿಥ್ಯ ಮಾಡುತ್ತಿರುವುದು ಇದೇ ಮೊದಲೇನಂದಲ್ಲ. ಇದಕ್ಕೆ ಹಲವಾರು ದಶಕಗಳ ಇತಿಹಾಸವೇ ಇದೆ. ಆದರೆ ಇದೀಗ ಇವರು ಸಿಕ್ಕಿಬಿದ್ದಿದ್ದಾರೆ ಅಷ್ಟೇ. ಇಂಥ ಉಗ್ರರು, ರೇಪಿಸ್ಟ್​ಗಳಿಗೆ ಎಂಜಲು ಕಾಸಿಗೆ ಆಸೆ ಬಿದ್ದು ಇಂಥ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಡುತ್ತಿರುವ ಪೊಲೀಸ್​ ಸಿಬ್ಬಂದಿ ವಿರುದ್ಧ ಹಿಂದೆಲ್ಲಾ ಅಮಾನತು ಮಾಡಿದಂತೆ ಮಾಡಿ ವಾಪಸ್​ ತೆಗೆದುಕೊಳ್ಳಲಾಗಿದೆ ಎನ್ನುವ ಆರೋಪಗಳೂ ಇವೆ. ಒಂದು ವೇಳೆ ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಂಡಿದ್ದೇ ಆಗಿದ್ದರೆ, ಇಂಥ ಹೇಸಿಗೆ ಕೆಲಸ ಮಾಡಲು ಅವರು ಅಂಜುತ್ತಿದ್ದರು ಎನ್ನಲಾಗಿದೆ.

ಯಕ್ಷಪ್ರಶ್ನೆ

ಆದರೆ, ಇವೆಲ್ಲವುಗಳ ನಡುವೆ ಯಕ್ಷಪ್ರಶ್ನೆಯಾಗಿ ಉಳಿದಿರುವುದು, ಈ ವಿಕೃತಕಾಮಿಗೆ ಹಣ ಎಲ್ಲಿಂದ ಬರುತ್ತಿದೆ, ಯಾರು ಪೂರೈಕೆ ಮಾಡುತ್ತಿದ್ದಾರೆ ಎನ್ನುವುದು! ಏಕೆಂದ್ರೆ ಇನ್ನೊಬ್ಬ ಉಗ್ರ. ಉಗ್ರನಿಗೆ ಸಹಾಯ ಮಾಡುವ ಕೈಗಳು ಬೇಕಾದಷ್ಟು ಇವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯವೇ. ಆದ್ದರಿಂದ ಇಲ್ಲಿರುವ ಪೊಲೀಸರ ಜೇಬನ್ನು ಭರ್ತಿ ಮಾಡಿ ಉಗ್ರರಿಗೆ ಐಷಾರಾಮಿ ಜೀವನ ಒದಗಿಸುವ ವ್ಯವಸ್ಥೆ ಮಾಡಿದರೆ ಅದು ಆಶ್ಚರ್ಯ ಎನ್ನಿಸುವುದಿಲ್ಲ. ಆದರೆ ಇದಾಗಲೇ ಶಿಕ್ಷೆಯ ಸಂದರ್ಭದಲ್ಲಿ ಉಮೇಶ್​​ ರೆಡ್ಡಿಯ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ವರದಿಯಾಗಿತ್ತು. ಈತ ಹೇಳಿಕೊಳ್ಳುವ ಆಗರ್ಭ ಶ್ರೀಮಂತನೂ ಅಲ್ಲ. ಹಾಗಿದ್ದ ಮೇಲೆ ಇವನಿಗೆ ಹಣ ಪೂರೈಕೆ ಮಾಡ್ತಿರೋರು ಯಾರು ಎನ್ನುವುದು ಈಗ ತನಿಖೆಯಿಂದ ಬಯಲಾಗಬೇಕಿದೆ.

ಉಮೇಶ್​ ರೆಡ್ಡಿ ಹಿನ್ನೆಲೆ

ಇವರ ಜೊತೆ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್​ ಕೂಡ ಇರುವುದು ವಿಶೇಷ. ಆದರೆ ಆಕೆ ದೊಡ್ಡ ಅಧಿಕಾರಿಯ ಮಗಳು ಜೊತೆಗೆ ಆಗರ್ಭ ಶ್ರೀಮಂತೆ ಕೂಡ. ಅವರಿಗೆಲ್ಲಾ ಹಣ ಪೂರೈಕೆ ಮಾಡುವ ದೊಡ್ಡ ವರ್ಗವೇ ಇದೆ. ಆದರೆ ಇದೀಗ ಪ್ರಶ್ನೆ ಬಂದಿರುವುದು ಉಮೇಶ್​ ರೆಡ್ಡಿಯ ಬಗ್ಗೆ. ಈ ಉಮೇಶ್ ರೆಡ್ಡಿಯ ಹಿನ್ನೆಲೆ ನೋಡುವುದಾದರೆ, ಮೊದಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ಆಯ್ಕೆಯಾಗಿದ್ದ. ಆತನನ್ನು ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಕಮಾಂಡೆಂಟ್‌ನ ಮನೆಯಲ್ಲಿ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಮಾಂಡೆಂಟ್‌ನ ಮಗಳ ಮೇಲೆ ಅ*ತ್ಯಾಚಾರ ಎಸಗಿದ್ದ. ಅಲ್ಲಿಂದಲೇ ಅವನ ಅ*ತ್ಯಾಚಾರ ಮತ್ತು ಕೊ*ಲೆ ಸರಣಿ ಆರಂಭವಾದದ್ದು.

ತಪ್ಪಿಸಿಕೊಂಡು ಹೋಗುತ್ತಿದ್ದ

18 ಕೊ*ಲೆ, 20 ಅ*ತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರ ಲಿಸ್ಟ್​ ಇನ್ನೂ ಹೆಚ್ಚಿದೆ. ಸದ್ಯ 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಹಲವು ಕಡೆಗಳಲ್ಲಿ ಇದೇ ಕೃತ್ಯ ಎಸಗಿದ್ದಾರೆ. ಮನೆಯಲ್ಲಿ ಮಹಿಳೆಯರು ಒಂಟಿಯಾಗಿದ್ದ ವೇಳೆ, ನೀರು ಅಥವಾ ವಿಳಾಸ ಕೇಳುವ ನೆಪದಲ್ಲಿ ಹೋಗಿ ಚಾಕು ತೋರಿಸಿ ಬೆದರಿಸಿ, ಅವರ ಕೈ ಕಾಲು ಕಟ್ಟಿ, ಅ*ತ್ಯಾಚಾರ ಎಸಗುತ್ತಿದ್ದ. ಬಳಿಕ ಚಿನ್ನಾಭರಣ ದೋಚಿ ಇದೊಂದು ದರೋಡೆ ಎಂದು ಬಿಂಬಿಸುವಂತೆ ಮಾಡುತ್ತಿದ್ದ, ಮಹಿಳೆಯರ ಒಳ ಉಡುಪಿನ ಜತೆ ಪರಾರಿಯಾಗುತ್ತಿದ್ದ. ಅವನನ್ನು ಅರೆಸ್ಟ್​ ಮಾಡಿದಾಗಲೆಲ್ಲಾ ಕೆಲವು ಬಾರಿ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಹೋಗಿರುವುದೂ ನಡೆದಿದೆ. ಆಗೆಲ್ಲಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಆಗುತ್ತಿದ್ದವ, ಈಗ ಜೈಲಿನಲ್ಲಿಯೇ ಐಷಾರಾಮಿ ಬದುಕು ನಡೆಸುತ್ತಿದ್ದಾನೆ!