ಬೆಂಗಳೂರು, (ಫೆ.16): ಪ್ರೀತಿಸಿ ಮದುವೆಯಾದ ಸಹೋದರಿಯ ಪತಿಯನ್ನೇ ಆಕೆಯ ಸಹೋದರ ಹಾಗೂ ಚಿಕಪ್ಪ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರದ ಲಗ್ಗೆರೆಯಲ್ಲಿ ನಡೆದಿದೆ.

ಚೇತನ್ (27) ಕೊಲೆಯಾದ ನವ ವಿವಾಹಿತ. ಮನೆಯವರ ವಿರೋಧದ ನಡುವೆಯೂ ಚೇತನ್​ ಹಾಗೂ 22 ವರ್ಷದ ಭೂಮಿಕಾ ಪ್ರೀತಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡಿದ್ದ ಭೂಮಿಕಾ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜುಂಡೇಗೌಡ ಚೇತನ್​ನನ್ನು ಕೊಲೆ ಮಾಡಿದ್ದಾರೆ.

ಕುಡಿದು ಜಗ​ಳ: ಯುವ​ಕನನ್ನ ಕೊಂದ ಚಿಕ್ಕಪ್ಪ

ಕಳೆದ ಎರಡು ತಿಂಗಳ ಹಿಂದೆ  ಅಷ್ಟೇ ಮದುವೆಯಾಗಿದ್ದ ಚೇತನ್ ಹಾಗೂ ಭೂಮಿಕಾ ಲಗ್ಗೆರೆ ಎಜ್​​​ಜಿ ರಾಮಣ್ಣ ಬಡಾವಣೆಯಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದ್ರೆ, ಇದನ್ನು ಇಷ್ಟ ಪಡದ ಭೂಮಿಕಾ ಸಹೋದರ, ಇಂದು (ಮಂಗಳವಾರ) ಚೇತನ್ ಹುಟ್ಟುಹಬ್ಬದ ಹಿನ್ನೆಲೆ ಶುಭಾಶಯ ಕೋರವ ನೆಪದಲ್ಲಿ ಹೋಗಿ ಹತ್ಯೆ ಮಾಡಿದ್ದಾನೆ.

ಭೂಮಿಕಾ ಪ್ರೀತಿಯ ವಿಚಾರ ತಿಳಿದಿದ್ದ ಮನೆಯವರು ಯುವತಿಯ ವಿರೋಧದ ನಡುವೆಯೂ ಭೂಮಿಕಾ ಬೇರೆ ಮದುವೆ ಮಾಡಿದ್ದರು. ಮದುವೆಯ ಬಳಿಕವೂ ಭೂಮಿಕಾ, ಚೇತನ್ ನಡುವಿನ ಪ್ರೀತಿ ಮುಂದುವರಿದಿತ್ತು. ಈ ನಡುವೆಯೇ ಕಳೆದ ಎರಡು ತಿಂಗಳ ಹಿಂದೆ ಭೂಮಿಕಾ ಪತಿಯನ್ನು ಬಿಟ್ಟು ಚೇತನ್​​ನೊಂದಿಗೆ ಎರಡನೇ ಮದುವೆಯಾಗಿದ್ದಳು. 

ಇದರಿಂದ ಸಾಕಷ್ಟು ಕೋಪಗೊಂಡಿದ್ದ ಆಕಾಶ್​, ನಮ್ಮ ಅಕ್ಕನ ಜೀವನವನ್ನು ಚೇತನ ಹಾಳು ಮಾಡಿದ್ದಾನೆ ಎಂಬ ಕೋಪದಿಂದ ತನ್ನ ಚಿಕ್ಕಪ್ಪನೊಂದಿಗೆ ಸೇರಿ ಚೇತನ್​​ನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತಂತೆ ರಾಜಗೋಪಲ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.