ಬೆಂಗಳೂರು(ಜ.09): ಕಮಿಷನ್‌ ಆಸೆ ತೋರಿಸಿ ನೂರಾರು ಜನರಿಂದ ಬಂಡವಾಳ ಸಂಗ್ರಹಿಸಿ ವಂಚಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿಯೊಂದರ ಮುಖ್ಯಸ್ಥನನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯ ನಗರದ ಡಾ.ರಾಜ್‌ಕುಮಾರ್‌ ರಸ್ತೆಯ ವರ್ಲ್ಡ್ ಟ್ರೇಡ್‌ ಕಟ್ಟಡದಲ್ಲಿ ಟ್ರಿಲಿಯನರ್‌ ಮೈಂಡ್‌ ವಲ್ಡ್‌ರ್‍ ವೆಂಚರ್‌ ಪ್ರೈ.ಲಿ ಕಂಪನಿ ಮಾಲೀಕ ಸಂದೇಶ್‌ ಕುಮಾರ್‌ ಶೆಟ್ಟಿಬಂಧಿತನಾಗಿದ್ದು, ಆರೋಪಿಯಿಂದ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ದುರಸ್ತಿಗಾಗಿ 2 ಗಂಟೆ ಮೆಟ್ರೋ ಸೇವೆ ಬಂದ್‌: ಎಲ್ಲೆಲ್ಲಿ..? ಇಲ್ನೋಡಿ

ಚೈನ್‌ ಲಿಂಕ್‌ ವ್ಯವಹಾರ ನಡೆಸುತ್ತಿದ್ದ ಶೆಟ್ಟಿ, ಇತ್ತೀಚೆಗೆ ಹೂಡಿಕೆದಾರರಿಗೆ ಕಮಿಷನ್‌ ಹಣ ಪಾವತಿಸದೆ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಸಂದೇಶ್‌ ಕುಮಾರ್‌ ಶೆಟ್ಟಿ, ಡಾ ರಾಜ್‌ ಕುಮಾರ್‌ ರಸ್ತೆಯ ಬ್ರಿಗೇಡ್‌ ಗೇಟ್‌ ವೇ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಪತ್ನಿ ಮತ್ತು ಮಗು ಜತೆ ನೆಲೆಸಿದ್ದ.

2018ರ ಜುಲೈನಲ್ಲಿ ವಲ್ಡ್‌ರ್‍ ಟ್ರೇಡ್‌ ಸೆಂಟರ್‌ ಕಟ್ಟಡದಲ್ಲಿ ಕಚೇರಿ ತೆರೆದು ಚೈನ್‌ಲಿಂಕ್‌ ಕಂಪನಿ ಆರಂಭಿಸಿದ್ದ ಆತ, ಯುವಕರನ್ನೇ ಗುರಿಯಾಗಿಸಿ ಕಾರ್ಯಾಚರಣೆ ನಡೆಸಿದ್ದ. ತನ್ನ ಕಂಪನಿಯಲ್ಲಿ ಮೊದಲು .15 ಸಾವಿರ ಹೂಡಿಕೆ ಮಾಡಿ ಸದಸ್ಯತ್ವ ಪಡೆದ ಗ್ರಾಹಕರಿಗೆ ದುಬಾರಿ ಮೌಲ್ಯದ ಬಟ್ಟೆ, ತೂಕ ಇಳಿಸುವ ಪೌಡರ್‌, ಸೌಂದರ್ಯ ವರ್ಧಕ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದಾಗಿ ಆಫರ್‌ ನೀಡಿದ್ದ. ಈ ಮಾತು ನಂಬಿ ಎರಡು ಸಾವಿರಕ್ಕೂ ಅಧಿಕ ಮಂದಿ ಬಂಡವಾಳ ತೊಡಗಿಸಿದ್ದರು ಎಂದು ತಿಳಿದು ಬಂದಿದೆ.

ನೂರಿನ್ನೂರಲ್ಲ, 6 ಲಕ್ಷ ಲಂಚ ಪಡೆಯುತ್ತಿದ್ದ ಆರ್‌ಐ, ಪೇದೆ ಎಸಿಬಿ ಬಲೆಗೆ

ಪಾರ್ಟ್‌ ಟೈಮ್‌ ಕೆಲಸದಾಸೆಗೆ ಕೆಲವು ವಿದ್ಯಾರ್ಥಿಗಳು .15 ಸಾವಿರ ಹೂಡಿಕೆ ಮಾಡಿದ್ದರು. ಇದಾದ ಮೇಲೆ ಪ್ರವಾಸ ಪ್ಯಾಕೇಜ್‌ ಸೇರಿದಂತೆ ತರಹೇವಾರಿ ಕೊಡುಗೆಗಳನ್ನು ಕೊಟ್ಟು ಗ್ರಾಹಕರನ್ನು ಸೆಳೆದಿದ್ದ. ಹೆಚ್ಚು ಸದಸ್ಯರನ್ನು ಕರೆತಂದರೇ ದುಪ್ಪಟ್ಟು ಕಮಿಷನ್‌ ಮತ್ತು ವಸ್ತುಗಳು ಸಿಗಲಿವೆ. ಕೈತುಂಬ ಹಣದ ಜೊತೆಗೆ ಪ್ರವಾಸವೂ ಹೋಗಬಹುದು ಎಂದು ಹೇಳಿದ್ದ. ಈತನ ಮಾತನ್ನು ನಂಬಿದ ನೂರಾರು ಮಂದಿ ತಾವು ಹೂಡಿಕೆ ಮಾಡಿದಲ್ಲದೆ ಸ್ನೇಹಿತರು, ಕುಟುಂಬ ಸದಸ್ಯರ ಹೆಸರಿನಲ್ಲಿಯೂ ಸಾವಿರಾರು ರೂಪಾಯಿ ಹಣ ತೊಡಗಿದ್ದರು. ತನ್ನ ಸಹಚರರಿಗೆ ಬೆಲೆ ಬಾಳುವ ವಸ್ತುಗಳು ಮತ್ತು ಕಮಿಷನರ್‌ ಹಣ ಕೊಟ್ಟು ಇತರರಿಗೆ ಟೋಪಿ ಹಾಕಿದ್ದ ಎಂಬ ಆರೋಪಗಳು ಬಂದಿವೆ.

ಕೆಲವರಿಗೆ ಪ್ರಾರಂಭದ ಹಂತದಿಂದಲೇ ಕಮಿಷನ್‌ ನೀಡದೆ ಕೈ ಎತ್ತಿದ್ದಾನೆ. ಮೂಲ ಬಂಡವಾಳ ಹಿಂತಿರುಗಿಸುವಂತೆ ಕೇಳಿದರೆ ಸಬೂಬು ಹೇಳಿಕೊಂಡು ಮುಂದೂಡಿದ್ದ. ಲಾಕ್‌ಡೌನ್‌ ಸಂದರ್ಭದಲ್ಲೂ ಆದಾಯ ಗಳಿಸಿದ್ದ ಶೆಟ್ಟಿ, ತನ್ನ ಗ್ರಾಹಕರಿಗೆ ಕೊರೋನಾ ಪರಿಣಾಮ ಕಂಪನಿ ನಷ್ಟಅನುಭವಿಸಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದ. ಕೊನೆಗೆ ಬೇಸತ್ತ ಸಂತ್ರಸ್ತರು ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.