ಬೆಂಗಳೂರು(ಜ.09): ಜಮೀನಿನ ಪೋಡಿ, ಮ್ಯುಟೇಷನ್‌ ಮಾಡಿಕೊಡಲು ಮತ್ತು ರಕ್ಷಣೆ ನೀಡಲು ಆರು ಲಕ್ಷ ರು. ಲಂಚ ಪಡೆಯುತ್ತಿದ್ದ ಚಿಕ್ಕಜಾಲ ರಾಜಸ್ವ ನಿರೀಕ್ಷಕ (ಆರ್‌ಐ) ಮತ್ತು ಚಿಕ್ಕಜಾಲ ಪೊಲೀಸ್‌ ಠಾಣೆಯ ಮುಖ್ಯಪೇದೆ ಭ್ರಷ್ಟಾಚಾರ ನಿಗ್ರಹ (ಎಸಿಬಿ) ಬಲೆಗೆ ಬಿದ್ದಿದ್ದು, ತಲೆಮರೆಸಿಕೊಂಡಿರುವ ಇನ್‌ಸ್ಪೆಕ್ಟರ್‌ಗಾಗಿ ಶೋಧ ನಡೆಸಲಾಗಿದೆ.

ಚಿಕ್ಕಜಾಲ ನಾಡ ಕಚೇರಿಯ ರಾಜಸ್ವ ನಿರೀಕ್ಷಕ ಎಚ್‌.ಪುಟ್ಟಹನುಮಯ್ಯ ಅಲಿಯಾಸ್‌ ಪ್ರವೀಣ್‌, ಮುಖ್ಯಪೇದೆ ರಾಜು ಎಂಬುವರನ್ನು ಬಂಧಿಸಲಾಗಿದೆ. ಇನ್‌ಸ್ಪೆಕ್ಟರ್‌ ಯಶವಂತ್‌ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್...!

ಚಿಕ್ಕಜಾಲ ನಿವಾಸಿಯೊಬ್ಬರು ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿಯಲ್ಲಿ 5 ಎಕರೆ ಜಮೀನನ್ನು 2018ರಲ್ಲಿ ಖರೀದಿಸಿ ನೋಂದಣಿ ಮಾಡಿಸಿದ್ದರು. ಜಮೀನಿನ ಹಿಂದಿನ ಮಾಲೀಕರು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಲು ಅಗ್ರಿಮೆಂಟ್‌ ಮಾಡಿಕೊಂಡಿದ್ದು, ಈ ವಿಚಾರವಾಗಿ ನ್ಯಾಯಾಲಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ದೂರದಾರರ ಪರವಾಗಿ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಜಮೀನಿನ ಪೋಡಿ, ಪವತಿ ಖಾತೆ, ಮ್ಯುಟೇಷನ್‌ ಮಾಡಿಕೊಡುವಂತೆ ತಹಸೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಆರೋಪಿ ಪುಟ್ಟಹನುಮಯ್ಯ .50 ಲಕ್ಷ ಲಂಚ ಕೇಳಿದ್ದರು. ಈ ನಡುವೆ ದೂರುದಾರರು ನ್ಯಾಯಾಲಯದಲ್ಲಿ ಧಾವೆ ಇರುವ ಕುರಿತು ಫಲಕ ಅಳವಡಿಸಲು ಮತ್ತು ಸೂಕ್ತ ರಕ್ಷಣೆ ನೀಡುವಂತೆ ಕೋರಿ ಚಿಕ್ಕಜಾಲ ಪೊಲೀಸ್‌ ಠಾಣೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಇದಕ್ಕಾಗಿ .10 ಲಕ್ಷ ನೀಡುವಂತೆ ಪೊಲೀಸರು ಕೇಳಿದ್ದರು ಎಂದು ಹೇಳಿದ್ದಾರೆ.

ಲಂಚ ನೀಡಲು ಇಷ್ಟವಿಲ್ಲದ ಕಾರಣ ದೂರುದಾರರು ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ನಾಡಕಚೇರಿಯಲ್ಲಿ ಪುಟ್ಟಹನುಮಯ್ಯ .5 ಲಕ್ಷ ಮತ್ತು ಚಿಕ್ಕಜಾಲ ಇನ್‌ಸ್ಪೆಕ್ಟರ್‌ ಯಶವಂತ್‌ ಪರವಾಗಿ ಮುಖ್ಯಪೇದೆ .6 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.