ಚಾಮರಾಜನಗರದ ಯಳಂದೂರಿನಲ್ಲಿ, ಗರ್ಭಿಣಿ ತಂಗಿಗೆ ಸಹಾಯ ಮಾಡುವ ನೆಪದಲ್ಲಿ ಇಬ್ಬರು ಮಹಿಳೆಯರು ಮಹದೇವಮ್ಮ ಎಂಬುವವರಿಗೆ 108 ಗ್ರಾಂ ನಕಲಿ ಚಿನ್ನ ನೀಡಿ, ಅವರ ಅಸಲಿ ಚಿನ್ನದ ಸರವನ್ನು ದೋಚಿದ್ದಾರೆ. ಪೊಲೀಸರು ದಾವಣಗೆರೆ ಮೂಲದ ಆರೋಪಿಗಳಾದ ಜಯಮ್ಮ ಮತ್ತು ಕಾವ್ಯ ಎಂಬುವವರನ್ನು ಬಂಧಿಸಿದ್ದಾರೆ.
- ವರದಿ - ಪುಟ್ಟರಾಜು. ಆರ್. ಸಿ
ಚಾಮರಾಜನಗರ (ಸೆ.19): ಈ ಕಾಲದಲ್ಲಿ ಯಾರನ್ನ ನಂಬೋದು, ಬಿಡೋದು ಒಂದೂ ಗೊತ್ತಾಗುತ್ತಿಲ್ಲ. ಕಷ್ಟ ಅಂತ ಹೇಳಿ ಬಂದ ಖದೀಮ ಹೆಂಗಸರಿಬ್ಬರು ಮಹಿಳೆಗೆ ಮಂಕುಬೂದಿ ಎರಚಿ ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಎಗರಿಸಿ ಯಾಮಾರಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಅಲ್ಲೇನಾಯ್ತು ಈ ಸ್ಟೋರಿ ನೋಡಿ!
ನನ್ನ ತಂಗಿ ಗರ್ಭಿಣಿ ಅಬಾರ್ಷನ್‌ಗೆ ಹಣ ಇಲ್ಲ..
ನನ್ನ ತಂಗಿ ಅನೈತಿಕ ಸಂಬಂಧದಿಂಧ ಗರ್ಭಿಣಿಯಾಗಿ ಬಿಟ್ಟಿದ್ದಾಳೆ, ಆಕೆಗೆ ಅಬಾರ್ಷನ್ ಮಾಡಿಸಬೇಕು, ನಮ್ಮ ಹತ್ರ ಹಣ ಇಲ್ಲ ದಯವಿಟ್ಟು ಸಹಾಯ ಮಾಡಿ, ನಮ್ಮ ಹತ್ರ ಇರೋ ಚಿನ್ನ ಮಾರಿಕೊಡಿ ಎಂದು ಆ ಇಬ್ಬರು ಅಪರಿಚಿತ ಹೆಂಗಸರು ಚಾಮರಾಜನಗರ ಜಿಲ್ಲೆ ಯಳಂದೂರು ಸಂತೆಗೆ ಬಂದಿದ್ದ ಗಂಗವಾಡಿ ಗ್ರಾಮದ ಮಹದೇವಮ್ಮ ಎಂಬ ಮಹಿಳೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದರು. ನಮ್ಮತ್ರ 108 ಗ್ರಾಂ ಚಿನ್ನದ ಒಡವೆ ಇದೆ ದಯವಿಟ್ಟು ಮಾರಿಸಿಕೊಡಿ ಎಂದಿದ್ದರು. ಈ ವೇಳೆ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ 20 ಸಾವಿರ ರೂಪಾಯಿ ಕೊಡ್ತೀನಿ ನನಗೆ ಚಿನ್ನ ಕೊಡಿ ಎಂದಿದ್ದ. ಆದರೆ ಆ ಹೆಂಗಸರು ಅವನಿಗೆ ಚಿನ್ನ ಕೊಡಲ್ಲ ನೀವೇ ತಗೊಳ್ಳಿ ನಮ್ಮತ್ರ ಇರೋ 108 ಗ್ರಾಂ ಚಿನ್ನ ತಗೊಂಡು ನೀವು ಹಾಕೊಂಡಿರೋ ಚಿನ್ನದ ಸರ ಹಾಗು 50 ಸಾವಿರ ರೂಪಾಯಿ ಕೊಟ್ರೆ ಸಾಕು ಎಂದಿದ್ದರು.
ಇದನ್ನೂ ಓದಿ: ಬಂದೂಕು ತೋರಿಸಿ ಎಸ್‌ಬಿಐ ಬ್ಯಾಂಕ್ ದೋಚಿದ ಕದೀಮರು: ಪೊಲೀಸರಿಂದ ಶೋಧ
ಮೋಸ ಹೋಗಿದ್ದು ತಿಳಿದಾಗ..!
ಅದೇನಾಯ್ತು ಏನೋ ಮಹಿಳೆ ತನ್ನ ಬಳಿ ಇದ್ದ ಚಿನ್ನದ ಸರವನ್ನು ತೆಗೆದು ಅಪರಿಚಿತ ಹೆಂಗಸರಿಗೆ ಕೊಟ್ಟುಬಿಟ್ಟಿದ್ದಾರೆ. ಖದೀಮ ಹೆಂಗಸರು ನಾಳೆ 50 ಸಾವಿರ ರೂಪಾಯಿ ತಗೊಂಡು ಬನ್ನಿ ನಿಮ್ಮ ಸರ ವಾಪಸ್ ಕೊಡ್ತೀವಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾರನೇ ದಿನ ಅದೇ ಸ್ಥಳಕ್ಕೆ ಬಂದ ಮಹದೇವಮ್ಮ ಆ ಅಪರಿಚಿತ ಹೆಂಗಸರು ನೀಡಿದ್ದ ಮೊಬೈಲ್ ನಂಬರ್ಗೆ ಕಾಲ್ ಮಾಡಿದ್ದಾರೆ ಆದರೆ ಅದು ಸ್ಚಿಚ್ ಆಫ್ ಆಗಿದೆ. ಅನುಮಾನಗೊಂಡ ಮಹದೇವಮ್ಮ ಚಿನ್ನದ ಅಂಗಡಿಗೆ ಹೋಗಿ ಆ ಅಪರಿಚಿತ ಹೆಂಗಸರು ಕೊಟ್ಟಿದ್ದ 108 ಗ್ರಾಂ ಒಡವೆಗಳನ್ನು ಚೆಕ್ ಮಾಡಿಸಿದಾಗ ಅದು ನಕಲಿ ಅಂತಾ ಗೊತ್ತಾಗಿದೆ.
ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳಿಯರ ಗ್ಯಾಂಗ್:

ಯಾವಾಗ ಅಪರಿಚಿತ ಹೆಂಗಸರು ನೀಡಿದ್ದ ಒಡವೆ ನಕಲಿ ಅಂತ ಗೊತ್ತಾಯ್ತೋ ಮಹದೇವಮ್ಮ ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪರಿಚಿತ ಹೆಂಗಸರ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಯಳಂದೂರು ಹೊನ್ನೂರು ರಸ್ತೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಹೆಂಗಸರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಎಗರಿಸಿದ್ದೇ ನಾವು ಅಂತ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಪುರ SBI Bank ದರೋಡೆ: ರಸ್ತೆಯಲ್ಲಿ ಬಿದ್ದ ಬ್ಯಾಗ್‌ನಲ್ಲಿ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ!
ಇವರು ದಾವಣಗೆರೆ ಜಿಲ್ಲೆ ಸಂತೇಬೆನ್ನೂರಿನ ಜಯಮ್ಮ ಹಾಗು ಕಾವ್ಯ ಅಂತ ಗುರುತಿಸಲಾಗಿದೆ. ಚಿನ್ನ ನಾನೇ ಖರೀದಿಸುತ್ತೇನೆ ಅಂತ ಮಧ್ಯ ಪ್ರವೇಶ ಮಾಡಿ ನಾಟಕವಾಡಿದ್ದ ಜಯಮ್ಮನ ಮಗ ವೆಂಕಟೇಶ್ ತಲೆ ಮರೆಸಿಕೊಂಡಿದ್ದಾನೆ.
ಅದೇನೆ ಹೇಳಿ ಮೋಸ ಹೋಗುವವರು ಇರೋವರೆಗು ಮೋಸ ಮಾಡೋರು ಇರ್ತಾರೆ. ಈ ಕಾಲದಲ್ಲಿ ಕಷ್ಟ ಹೇಳ್ಕೊಂಡು ಬರುವವರನ್ನು ಹಿಂದೆ ಮುಂದೆ ನೋಡದೆ ತಕ್ಷಣ ನಂಬಬಾರ್ದು ಅನ್ನೋದಕ್ಕೆ ಇಂತಹ ಘಟನೆಗಳು ಪಾಠವಾಗಬೇಕಿದೆ...
