Maharashtra: ನಾಸಿಕ್‌ನಲ್ಲಿ ಭೀಕರ ಅಪಘಾತ: ಮಗು ಸೇರಿ 11 ಮಂದಿ ಸಜೀವ ದಹನ, 38 ಜನರಿಗೆ ಗಾಯ
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳಗ್ಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 11 ಜನರು ಬಲಿಯಾಗಿದ್ದಾರೆ. ಅಲ್ಲದೆ, 38 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಸ್‌ಗೆ ಬೆಂಕಿ ಹೊತ್ತಿಕೊಂಡು ಹಲವರಿಗೆ ಸುಟ್ಟ ಗಾಯಗಳಾಗಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇಂದು ಮುಂಜಾನೆ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿ ಕನಿಷ್ಠ 11 ಜನರು ಮೃತಪಟ್ಟಿದ್ದು ಮತ್ತು 38 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಸಿಕ್‌ನ ಔರಂಗಾಬಾದ್ ರಸ್ತೆಯಲ್ಲಿ ಡೀಸೆಲ್ ಸಾಗಿಸುತ್ತಿದ್ದ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಹಲವು ಗಾಯಾಳುಗಳ ಸಂಖ್ಯೆ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಶನಿವಾರ ಮುಂಜಾನೆ ನಾಸಿಕ್-ಔರಂಗಾಬಾದ್ ಹೆದ್ದಾರಿಯಲ್ಲಿ ಐಷಾರಾಮಿ ಪ್ರಯಾಣಿಕ ಬಸ್ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯವತ್ಮಾಲ್‌ನಿಂದ ಮುಂಬೈಗೆ ತೆರಳುತ್ತಿದ್ದ ಬಸ್ ನಾಸಿಕ್‌ನಿಂದ ಪುಣೆಗೆ ಹೋಗುತ್ತಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಹೊತ್ತಿ ಉರಿಯುತ್ತಿರುವ ವಾಹನದಲ್ಲಿ ಹಲವಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರ ಪೈಕಿ ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನು ಓದಿ: Mumbai Accident: ಬಾಂದ್ರಾ - ವರ್ಲಿ ಸೀ ಲಿಂಕ್‌ನಲ್ಲಿ ಭೀಕರ ಅಪಘಾತಕ್ಕೆ ಐವರ ಬಲಿ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ
"ಸಾವಿಗೀಡಾದವರಲ್ಲಿ ಹೆಚ್ಚಿನವರು ಸ್ಲೀಪರ್ ಕೋಚ್ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ನಾಸಿಕ್‌ನ ಉಪ ಪೊಲೀಸ್ ಆಯುಕ್ತ ಅಮೋಲ್ ತಾಂಬೆ ಹೇಳಿದ್ದಾರೆ. ಇನ್ನು, ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ಬೆಂಕಿಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಅಗ್ನಿಯ ಜ್ವಾಲೆ ದೊಡ್ಡ ಚೆಂಡಿನಂತೆ ಬಸ್‌ಗೆ ಆವರಿಸಿರುವುದನ್ನು ವಿಡಿಯೋಗಳಲ್ಲಿ ನೋಡಬಹುದಾಗಿದೆ. ಇನ್ನು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಹಾಗೂ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮಹಾರಾಷ್ಟ್ರ ಸಚಿವ ದಾದಾ ಭೂಸೆ ಹೇಳಿದ್ದಾರೆ.
ಇದನ್ನೂ ಓದಿ: ಕಂದಕಕ್ಕೆ ಉರುಳಿದ ಮದ್ವೆ ದಿಬ್ಬಣದ ಬಸ್: 25 ಜನರ ದಾರುಣ ಸಾವು