ಜೀ ಕನ್ನಡದ 'ಕಾಮಿಡಿ ಕಿಲಾಡಿ' ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ, ವಂಚನೆ ಆರೋಪದಡಿ ಬಂಧಿತರಾಗಿದ್ದಾರೆ. ಸಹ ಕಲಾವಿದೆಯೊಬ್ಬರು ಮನು ವಿರುದ್ಧ ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ, ಹಣ ವಂಚನೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಹಾಸನದಲ್ಲಿ ಬಂಧಿತರಾದ ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಮೇ 22): ಸ್ಯಾಂಡಲ್‌ವುಡ್‌ನಲ್ಲಿ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿ, ಜೀ ಕನ್ನಡದ ‘ಕಾಮಿಡಿ ಕಿಲಾಡಿ’ ಶೋ ಮೂಲಕ ಜನಪ್ರಿಯರಾದ ನಟ ಮಡೆನೂರು ಮನು ಈಗ ಅತ್ಯಾಚಾರದ ಆರೋಪದ ನಡುವೆ ಸಿಲುಕಿದ್ದಾರೆ. ಕನ್ನಡ ಕಿರುತೆರೆಯ ಖ್ಯಾತಿಯ ನಟಿಯೊಬ್ಬರು ಮನು ವಿರುದ್ಧ ಗಂಭೀರ ಆರೋಪ ಹೇರಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಆರೋಪಿಯನ್ನು ಹಾಸನ ಜಿಲ್ಲೆ ಶಾಂತಿ ಗ್ರಾಮದಲ್ಲಿ ಬಂಧಿಸಲಾಗಿದೆ.

ಕಿರುತೆರೆ ನಟಿಯಿಂದ ಗಂಭೀರ ಆರೋಪ
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ನಟಿಸಿದ ಸಹ ಕಲಾವಿದೆಯೇ ಮನು ಮೇಲೆ ದೂರು ನೀಡಿದ್ದಾರೆ. ನಟಿಯ ದೂರಿನ ಪ್ರಕಾರ, 2018ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಕಾರ್ಯಕ್ರಮದ ವೇಳೆ ಮನು ಅವರ ಪರಿಚಯವಾಗಿದ್ದಾನೆ. ಇಬ್ಬರೂ ಸ್ನೇಹಿತರಾಗಿ, ನಂತರ ಸಂಬಂಧ ಗಾಢವಾಗಿದೆ. ಮನು ಅವರಿಗಾಗಲೇ ಮದುವೆ ಆಗಿದ್ದು, ಒಂದು ಮಗು ಕೂಡ ಇದೆ ಎಂಬ ಮಾಹಿತಿ ಇದೆ. ಆದರೂ, 2022ರ ನವೆಂಬರ್ 29ರಂದು ಶಿಕಾರಿಪುರದಲ್ಲಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನು ನಟಿಯನ್ನ ಕರೆದುಕೊಂಡು ಹೋಗಿದ್ದು, ಕಾರ್ಯಕ್ರಮದ ಬಳಿಕ ಹೋಟೆಲ್ ರೂಮಿನಲ್ಲಿ ಸಂಭಾವನೆ ಕೊಡುವ ನೆಪದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ನಿರಂತರ ಸಂಬಂಧ, ಗರ್ಭಪಾತ, ಬೆದರಿಕೆಗಳು:
ಇದೇ ರೀತಿ ಡಿಸೆಂಬರ್ 3ರಂದು ಮನು ಅವರೇ ನಟಿಯ ಮನೆಗೆ ಬಂದು, ಮದುವೆಯಂತೆ ತಾಳಿ ಕಟ್ಟಿದ್ದಾರೆ. ಜೊತೆಗೆ, ಮುಂದೆ ಅದನ್ನು ಸುಳ್ಳುಮಾಡಿದ್ದಾರೆ. ಅನೇಕ ಬಾರಿ ತನ್ನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ನಟಿ ಎರಡು ಬಾರಿ ಗರ್ಭಧಾರಣೆಯಾಗಿದ್ದು, ಮನು ಅವರೇ ಗರ್ಭಪಾತಕ್ಕೆ ಔಷಧ ನೀಡಿ ಗರ್ಭಪಾತ ಮಾಡಿಸಿದ್ದಾರೆ. ಇದಾದ ನಂತರ ಒಟ್ಟಿಗೆ ಸಂಸಾರ ನಡೆಸುವಂತೆ ಕೇಳಿಕೊಂಡಾಗ ಖಾಸಗಿ ವಿಡಿಯೋ ಶೂಟ್ ಮಾಡಿ, ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದಾನೆ ಎಂದು ನಟಿ ಹೇಳಿದ್ದಾರೆ. ಜೊತೆಗೆ ಮನು ನಟಿಸುತ್ತಿದ್ದ ಚಿತ್ರಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ನಟಿಯಿಂದ ಪಡೆದುಕೊಂಡಿದ್ದಾರೆ ಎಂಬ ಆರೋಪವೂ ಇದೆ.

ಶಾಂತಿ ಗ್ರಾಮದಲ್ಲಿ ಬಂಧನ:
ಈ ಪ್ರಕರಣದ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ತಕ್ಷಣ ಆರೋಪಿ ಮನು ಬಂಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಪೊಲೀಸರ ಕೈಗೆ ಸಿಗದಂತೆ ಹಾಸನ ಜಿಲ್ಲೆಯ ಶಾಂತಿಗ್ರಾಮದ ಮಡೆನೂರು ಬಳಿಯಿಂದ ಮನು ಅವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಮನು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮನು ಅಭಿನಯಿಸಿರುವ 'ಕುಲದಲ್ಲಿ ಕೀಳ್ಯಾವೋದು' ಎಂಬ ಸಿನಿಮಾ ನಾಳೆ (ಮೇ 23) ಬಿಡುಗಡೆಯಾಗಬೇಕಿತ್ತು. ಆದರೆ, ಆತನ ಬಂಧನೆಯ ಬೆಳವಣಿಗೆ ಈ ಸಿನಿಮಾದ ತಂಡಕ್ಕೂ ಹಿನ್ನಡೆಯಾಗುವ ಸಾಧ್ಯತೆಯಿದೆ.

ಮಹಿಳಾ ಸುರಕ್ಷತೆ, ನ್ಯಾಯ ವ್ಯವಸ್ಥೆ ಮರುಪರಿಶೀಲನೆ ಅಗತ್ಯ:
ಈ ಘಟನೆಯ ಬೆಳಕಿನಲ್ಲಿ, ಕನ್ನಡ ಸಿನಿಮಾ ರಂಗದ ಒಳಗಿರುವ ಸಂಬಂಧಗಳು, ಮಹಿಳಾ ಕಲಾವಿದರ ಸುರಕ್ಷತೆ, ಕಾನೂನು ಪೂರಕ ನ್ಯಾಯಕ್ಕಾಗಿ ತಕ್ಷಣದ ಸ್ಪಂದನೆಯ ಅಗತ್ಯತೆ ಮತ್ತೊಮ್ಮೆ ಚರ್ಚೆಗೆ ಬಂದಿವೆ. ಟಿವಿ ನಟನ ವಿರುದ್ಧ ಈ ರೀತಿಯ ಗಂಭೀರ ಆರೋಪಗಳು ಕೇಳಿಬಂದಿರುವುದು ತೀವ್ರ ಆಘಾತ ಉಂಟುಮಾಡಿದೆ. ಸಿನಿಮಾದ ಮೇಲೆ ಯಾವುದಾದರೂ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.