ಇಲ್ಲೊಂದು ಕಡೆ ತನ್ನ ತಾಯಿಯನ್ನು ಥಳಿಸಿ ಅವಮಾನಿಸಿದ ವ್ಯಕ್ತಿಯೊಬ್ಬನನ್ನು ಯುವಕನೋರ್ವ 10 ವರ್ಷಗಳ ನಂತರ ಕೊನೆಗೂ ಹೊಂಚು ಹಾಕಿ ಆತನ ಕತೆ ಮುಗಿಸಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.

ಲಕ್ನೋ: ಹಾವಿನ ದ್ವೇಷ ಹನ್ನೆರಡು ಹರುಷ ಎಂಬ ಹಾಡನ್ನು ನೀವು ಕೇಳಿದ್ದೀರಿ ಹಾವುಗಳು ತಮಗೆ ಕೇಡು ಬಗೆದವರನ್ನು ಜನ್ಮ ಇರುವವರೆಗೂ ಮರೆಯದೇ ಸೇಡು ತೀರಿಸಿಕೊಳ್ಳುತ್ತವೆ ಎಂಬ ಮಾತಿದೆ. ಬರೀ ಹಾವುಗಳು ಮಾತ್ರವಲ್ಲ, ಮನುಷ್ಯರು ಕೂಡ ಇದೇ ರೀತಿ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದಕ್ಕೆ ಕೆಲವು ಘಟನೆಗಳು ಸಾಕ್ಷಿಯಾಗುತ್ತವೆ. ಅದೇ ರೀತಿ ಇಲ್ಲೊಂದು ಕಡೆ ತನ್ನ ತಾಯಿಯನ್ನು ಥಳಿಸಿ ಅವಮಾನಿಸಿದ ವ್ಯಕ್ತಿಯೊಬ್ಬನನ್ನು ಯುವಕನೋರ್ವ 10 ವರ್ಷಗಳ ನಂತರ ಕೊನೆಗೂ ಹೊಂಚು ಹಾಕಿ ಆತನ ಕತೆ ಮುಗಿಸಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.

ಬಾಲಿವುಡ್ ಸಿನಿಮಾಗಿಂತಲೂ ರೋಚಕವಾಗಿದೆ ಈ ಸ್ಟೋರಿ. ಸೋನು ಕಶ್ಯಪ್ ಎಂಬ ಯುವಕನ ತಾಯಿಗೆ ಎಳನೀರು ವ್ಯಾಪಾರಿ ಮನೋಜ ಎಂಬಾತ ಥಳಿಸಿ ಅವಮಾನಿಸಿದ್ದ. ಅಮ್ಮ ಮರೆತರು ಮಗ ಮಾತ್ರ ಈ ನೋವನ್ನು ಮರೆತಿರಲಿಲ್ಲ. ತನ್ನ ತಾಯಿಯನ್ನು ಅವಮಾನಿಸಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದ ಮಗ, ಎಳನೀರು ವ್ಯಾಪಾರಿ ಮನೋಜ್‌ಗಾಗಿ ಬರೋಬ್ಬರಿ 10 ವರ್ಷಗಳ ಕಾಲ ಹುಡುಕಾಟ ನಡೆಸಿದ್ದು, ಕಡೆಗೂ ಆತನ ಕತೆ ಮುಗಿಸಿದ್ದಾನೆ.

ಎಳನೀರು ವ್ಯಾಪಾರಿ ಮನೋಜ್ ಕೊಲೆಯ ಬಳಿಕ ಸೋನು ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾನೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಪೋಸ್ಟ್ ಈಗ ಈತ ಹಾಗೂ ಈತನಿಗೆ ಸಹಾಯ ಮಾಡಿದವರನ್ನು ಕಂಬಿ ಹಿಂದೆ ಕೂರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೋನು, ರಂಜಿತ್, ಅದಿಲ್, ಸಲಮು ಹಾಗೂ ರೆಹ್ಮತ್ ಅಲಿ ಅವರನ್ನು ಬಂಧಿಸಿದ್ದಾರೆ.

10 ವರ್ಷಗಳಿಂದ ಸೇಡು ತೀರಿಸುವುದಕ್ಕಾಗಿ ಕಾಯುತ್ತಿದ್ದ ಸೋನು ಮೂರು ತಿಂಗಳ ಹಿಂದೆ ಮನೋಜ್ ಮುನ್ಶಿ ಪುಲಿಯ ಪ್ರದೇಶದಲ್ಲಿ ಇರುವುದನ್ನು ನೋಡಿದ್ದಾನೆ. ಆತನನ್ನು ನೋಡಿದ ನಂತರ ಆತ ಸೇಡು ತೀರಿಸಿಕೊಳ್ಳುವುದಕ್ಕೆ ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಮನೋಜ್‌ನ ದೈನಂದಿನ ವೇಳಾಪಟ್ಟಿಯನ್ನು ಆತ ಗಮನಿಸಲು ಶುರು ಮಾಡಿದ್ದು, ಮನೋಜ್‌ನನ್ನು ಕೊಲ್ಲುವುದಕ್ಕೆ ನಿಖರವಾದ ಯೋಜನೆಯನ್ನು ಸಿದ್ಧಪಡಿಸಿದ್ದಾನೆ.

ನಂತರ ಇದಕ್ಕಾಗಿ ತನ್ನ ನಾಲ್ವರು ಸ್ನೇಹಿತರನ್ನುಆತ ಜೊತೆಗೂಡಿಸಿದ್ದು, ಕೊಲೆಯ ನಂತರ ಪಾರ್ಟಿ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದಾನೆ. ಇತ್ತ ಮೇ. 22 ರಂದು ಅಂಗಡಿಯಲ್ಲಿದ್ದ ಮನೋಜ್ ತನ್ನ ವ್ಯವಹಾರದ ನಂತರ ಅಂಗಡಿಯನ್ನು ಮುಚ್ಚಿ ಒಬ್ಬಂಟಿಯಾಗಿ ಕುಳಿತಿದ್ದ. ಇದೇ ಸಮಯಕ್ಕೆ ದಾಳಿ ನಡೆಸಿದ ಸೋನು ಹಾಗೂ ಗ್ಯಾಂಗ್ ಆತನ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಆತ ಅರ್ಧ ಸತ್ತಂತಾಗಿದ್ದ ಆತ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದ.

ಇತ್ತ ಕೊಲೆ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಪೊಲೀಸರಿಗೆ ಮಾತ್ರ ಅವರ ಸುಳಿವು ಎಲ್ಲೂ ಸಿಕ್ಕಿರಲಿಲ್ಲ, ಈ ಮಧ್ಯೆ ಕೊಲೆ ಮಾಡಿದ ಸೋನು ಹಾಗೂ ಗ್ಯಾಂಗ್‌ಗೆ ಈಗ ಪಾರ್ಟಿ ಸಮಯ, ಅಮ್ಮನನ್ನು ಅವಮಾನಿಸಿದವನನ್ನು ಕೊಲೆ ಮಾಡಿದ ನಂತರ ಸೋನು ತನ್ನ ಸ್ನೇಹಿತರಿಗೆ ಅದ್ದೂರಿ ಪಾರ್ಟಿ ನೀಡಿದ್ದಾನೆ. ಬರೀ ಇಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾನೆ. ಇದು ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಮಾಡುವುದಕ್ಕೆ ಸುಳಿವು ನೀಡಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಐವರು ಶಂಕಿತ ಆರೋಪಿಗಳಲ್ಲಿ ಒಬ್ಬ ಸೋನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲೂ ಇದ್ದ, ಈತನನ್ನು ಬೆನತ್ತಿ ಮತ್ತಷ್ಟು ಶೋಧ ನಡೆಸಿದ ಪೊಲೀಸರಿಗೆ ಎಲ್ಲಾ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆ ಓರ್ವ ಆರೋಪಿ ಕೊಲೆ ಮಾಡಿದಾಗ ಯಾವ ಬಟ್ಟೆ ಹಾಕಿದ್ದನ್ನೋ ಅದೇ ಬಟ್ಟೆಯನ್ನು ಪಾರ್ಟಿ ವೇಳೆಯೂ ಧರಿಸಿದ್ದ. ಈ ಎಲ್ಲಾ ಸುಳಿವು ಹಿಡಿದು ಹೋದ ಪೊಲೀಸರು ಈಗ ಎಲ್ಲರನ್ನು ಹೆಡೆಮುರಿ ಕಟ್ಟಿದ್ದಾರೆ.