ಪಾಕ್ ದಾಳಿಯಲ್ಲಿ ಹುತಾತ್ಮರಾದ ಯೋಧ ಸುರೇಂದ್ರ ಸಿಂಗ್ ಪುತ್ರಿ ವರ್ತಿಕಾ, ಸೇನೆ ಸೇರಿ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. 

ಸೇನೆ ಸೇರಿ ತಂದೆ ಸಾವಿನ ಸೇಡು ತೀರಿಸಿಕೊಳ್ಳುವೆ: ಹುತಾತ್ಮ ಸಿಂಗ್ ಪುತ್ರಿ 
ಜೈಪುರ: 'ದೇಶ ರಕ್ಷಿಸುವಾಗ ತಂದೆ ಹುತಾತ್ಮರಾದರು ಎಂಬ ಹೆಮ್ಮೆಯಿದೆ. ಅಪ್ಪನಂತೆ ನಾನು ಸೈನ್ಯ ಸೇರಿ ಅವರ ಸಾವಿಗೆ ಪ್ರತೀಕಾರ ತೀರಿಸಿ ಕೊಳ್ಳುತ್ತೇನೆ'ಎಂದು ಪಾಕ್ ದಾಳಿಯಲ್ಲಿ ಹುತಾತ್ಮರಾದ ರಾಜಸ್ಥಾನದ ಯೋಧ ಸುರೇಂದ್ರ ಸಿಂಗ್ ಪುತ್ರಿ ವರ್ತಿಕಾ ಹೇಳಿದ್ದಾರೆ.  ಸುರೇಂದ್ರ ಸಿಂಗ್  ಮೇ 10ರಂದು ಪಾಕ್ ನಡೆಸಿದ ಡ್ರೋನ್ ದಾಳಿಯ ವೇಳೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಹುತಾತ್ಮರಾಗಿದ್ದರು.

ಪಾಕ್‌ಗೆ ವಿಮಾನದಲ್ಲಿ ಶಸ್ತ್ರಾಸ್ತ್ರ ಕಳಿಸಿಲ್ಲ: ಚೀನಾ 
ಬೀಜಿಂಗ್: ಚೀನಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜು ಮಾಡಿದೆ ಎಂಬ ವರದಿಗಳನ್ನು ಚೀನಾ ಸೇನೆ ನಿರಾಕರಿಸಿದ್ದು, ಅಂತಹ ವದಂತಿಗಳನ್ನು ಹರಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಚೀನಾದ ಅತಿದೊಡ್ಡ ಮಿಲಿಟರಿ ಸರಕು ವಿಮಾನ ಕ್ಸಿಯಾನ್ ವೈ-20 ಮೂಲಕ ಚೀನಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳಿಸಿಕೊಟ್ಟಿದೆ ಎಂದು ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇದನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ವಾಯುಪಡೆ ಅಲ್ಲಗಳೆದಿದ್ದು, 'ಈ ವದಂತಿಗಳು ಸುಳ್ಳು. ಸೈನ್ಯಕ್ಕೆ ಸಂಬಂಧಿಸಿದ ವದಂತ್ರಿ ಸೃಷ್ಟಿಸುವ, ಹರಡುವವರನ್ನು ಕಾನೂನುಬದ್ದವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದಿದೆ.

ಯುಪಿಯ 17 ಹೆಣ್ಣು ಮಕ್ಕಳಿಗೆ ಸಿಂದೂರ ಎಂದು ಹೆಸರಿಟ್ಟ ಪೋಷಕರು! 
ಕುಶಿನಗರ: ಪಾಕ್ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದ ಪ್ರೇರಿತರಾಗಿ, ರಾಜ್ಯದಲ್ಲಿ ಜನಿಸಿದ ನವಜಾತ 17 ಹೆಣ್ಣುಮಕ್ಕಳಿಗೆ ಅವರ ಪೋಷಕರು ಸಿಂದೂರ ಎಂದು ನಾಮಕರಣ ಮಾಡಿದ್ದಾರೆ. ಮೇ 10, 11ರ ನಡುವೆ ಕುಶಿನಗರ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ 17 ಹೆಣ್ಣುಮಕ್ಕಳಿಗೆ ಸಿಂದೂರ ಎಂದು ಹೆಸರಿಡಲಾಗಿದೆ.

ತಾತ್ಕಾಲಿಕ ಮುಚ್ಚಿದ್ದ ಕೆಲ ಏರ್ಪೋರ್ಟ್‌ ಸೇವೆ ಆರಂಭ: ವಿಮಾನ ಬಂದ್ 
ಮುಂಬೈ: ಭಾರತ-ಪಾಕ್ ಸಂಘರ್ಷದ ಹಿನ್ನೆಲೆ ಕಳೆದ ವಾರ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಸೇವೆ ಪುನಾರಂಭಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಿಸಿದೆ. ಆದರೆ ಸೋಮವಾರ ರಾತ್ರಿ ಗಡಿಯಲ್ಲಿ ಮತ್ತೆ ಡ್ರೋನ್ ಸಂಚಾರ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್, ಕಾಶ್ಮೀರ, ಗುಜರಾತ್‌ನ 6 ವಿಮಾನ ನಿಲ್ದಾಣಗಳಿಂದ ಹೊರಡುವ ಮತ್ತು ಅಲ್ಲಿಗೆ ತೆರಳುವ ವಿಮಾನಗಳ ಸಂಚಾರವನ್ನು ಮೇ 13ರ ಒಂದು ದಿನದ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು ಹಲವು ವಿಮಾನಯಾನ ಸಂಸ್ಥೆಗಳು ಪ್ರಕಟಿಸಿವೆ.

ಆಂಧ್ರ ಹಳ್ಳಿಗಳ ಸೈನಿಕರ ಮನೆಗೆ ಆಸ್ತಿ ತೆರಿಗೆ ಇಲ್ಲ: ಪವನ್ ಕಲ್ಯಾಣ್ ಘೋಷಣೆ 
ವಿಜಯವಾಡ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ರಾಜ್ಯದ ಗ್ರಾಮ ಪಂಚಾಯತ್ ಮಿತಿಯೊಳಗಿನ ಸೇನಾ ಸಿಬ್ಬಂದಿಗಳ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. 'ಈ ಹಿಂದೆ ನಿವೃತ್ತ ಸೈನಿಕರು ಮತ್ತು ಗಡಿಗಳಲ್ಲಿ ನಿಯೋಜಿಸಲ್ಪಟ್ಟವರಿಗೆ ಮಾತ್ರ ಸೀಮಿತವಾಗಿದ್ದ ತೆರಿಗೆ ವಿನಾಯಿತಿ, ಈಗ ದೇಶಾದ್ಯಂತ ನಿಯೋಜನೆ ಸ್ಥಳವನ್ನು ಲೆಕ್ಕಿಸದೆ ಎಲ್ಲಾ ಸಕ್ರಿಯ ಸಿಬ್ಬಂಗಳಿಗೆ ಅನ್ವಯವಾಗುತ್ತದೆ. ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, ಸಿಆ‌ರ್ ಪಿಎಫ್ ಮತ್ತು ಅರೆಸೈನಿಕ ಪಡೆಗಳ ಧೈರ್ಯವನ್ನು ಗೌರವಿಸುತ್ತದೆ ಎಂದು ಎಕ್ಸ್‌ನಲ್ಲಿ  ಪವನ್ ಕಲ್ಯಾಣ್ ಪೋಸ್ಟ್ ಮಾಡಿದ್ದಾರೆ.

ಕರ್ತವ್ಯಕ್ಕೆ ಮರಳಿದ ಯೋಧನಿಗೆ ಸನ್ಮಾನ, ಪೊಲೀಸರ ಎಸ್ಕಾರ್ಟ್ 
ಬೆಂಗಳೂರು: ರಜೆ ಮೇಲೆ ಊರಿಗೆ ಬಂದಿದ್ದ ಯೋಧರು, 'ಆಪರೇಷನ್ ಸಿಂದೂರ' ಕಾರ್ಯಾಚರಣೆ ನಿಮಿತ್ತ ಕರ್ತವ್ಯಕ್ಕೆ ಮರಳಿದ್ದು, ಗ್ರಾಮಸ್ಥರು ಹಣೆಗೆ ಸಿಂದೂರ ಇಟ್ಟು ಬೀಳ್ಕೊಟ್ಟರು. ವಿಜಯಪುರದ ಇಂಡಿಯ  ಲಚ್ಯಾಣ ಗ್ರಾಮದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಅವರು ಕರ್ತವ್ಯದ ಸ್ಥಳಕ್ಕೆ ಹೊರಡುವುದಕ್ಕೂ ಮೊದಲು ಲಚ್ಯಾಣದ ಸಿದ್ದಲಿಂಗ ಮಹಾರಾಜರ ಗದ್ದುಗೆಗೆ  ಪೂಜೆ ಸಲ್ಲಿಸಿದರು. ಇಂಡಿ ಪೊಲೀಸರು ಅವರಿಗೆ ಎಸ್ಕಾರ್ಟ್ ನೀಡಿದರು. ಜೈಸಲ್ಮೇರ್‌ಗೆ ಕರ್ತವ್ಯಕ್ಕಾಗಿ ಹೊರಟ ಬೈಲಹೊಂಗಲದ ಒಕ್ಕುಂದದ ಬಸವಂತಪ್ಪ ರುದ್ರಪ್ಪ ಕಲ್ಲಿಗೆ ಮನೆಯವರು ಶುಭ ಹಾರೈಸಿದರು. ಆಳಂದದ ಧುತ್ತರ ಗಾಂವನ ಹಣಮಂತ ರಾಯ ಚೌಸೆ ಪತ್ನಿ ಸ್ನೇಹಾಳು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದು, ಪತಿಯನ್ನು ಕರ್ತವ್ಯಕ್ಕೆ ಕಳಿಸಿಕೊಟ್ಟರು. ತಾಲೂಕಿನ ಶ್ರೀಶೈಲ ಜಮಾದಾರ, ರಾಮಚಂದ್ರ ಬಾನುದಾಸ್ ಫುಲಾರೆ, ಮಲ್ಲಿಕಾರ್ಜುನ ತೂಳನೂರೆ, ರಾಜಶೇಖರ ವಳವಂಡವಾಡಿ, ವಿಶ್ವನಾಥ ಚಿಂಚನೂರ, ಮಲ್ಲಿ ಕಾರ್ಜುನ ಘೋಡಕೆ, ಧನರಾಜ ಮೂಲಗೆ ಅವರು ಕೂಡ ದೇಶ ಸೇವೆಗಾಗಿ ಹೊರಟು ಹೋಗಿದ್ದಾರೆ.