ಗಂಡನ ಬಿಟ್ಟು ತನ್ನ ಪ್ರೇಮಿಯ ಜೊತೆ ವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳ ಹತ್ಯೆ ಮಾಡಿ ಗಂಡನ ವಿರುದ್ಧ ದೂರು ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಗಂಡನ ಬಿಟ್ಟು ತನ್ನ ಪ್ರೇಮಿಯ ಜೊತೆ ವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳ ಹತ್ಯೆ ಮಾಡಿ ಗಂಡನ ವಿರುದ್ಧ ದೂರು ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ರೋಶ್ನಿ ಖಾನ್ ಎಂಬಾಕೆ ತನ್ನ ಗಂಡನನ್ನು ಬಿಟ್ಟು ಪ್ರೇಮಿಯ ಜೊತೆ ವಾಸ ಮಾಡುತ್ತಿದ್ದಳು, ಐದು ವರ್ಷದ ಮಗಳು ಈಕೆಯ ಜೊತೆಗೆ ಇದ್ದಳು. ಸೋಮವಾರ ರಾತ್ರಿ ಆಕೆ ತನ್ನ ಮಗಳನ್ನು ಉಸಿರುಕಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಗಂಡನ ವಿರುದ್ಧ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಕರೆ ಮಾಡಿದ ಆಕೆ ತನ್ನ ಗಂಡ ಶಾರುಖ್ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ ಆಗ ಪೊಲೀಸರು ಏಕೆ ಎಂದು ಕೇಳಿದಾಗ ತಾವಿಬ್ಬರು ಜಗಳ ಮಾಡಿಕೊಂಡಿದ್ದು, ತನ್ನನ್ನು ಸಿಲುಕಿಸಿ ಹಾಕಲು ಆತನೇ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.

ಆದರೆ ಆರಂಭಿಕವಾಗಿ ನಡೆಸಿದ ತನಿಖೆಗಳಿಂದ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಆಕೆ ತನ್ನ ಗಂಡನ ಜೊತೆ ಕಿತ್ತಾಟದ ನಂತರ ಗೆಳೆಯನ ಉದಿತ್‌ ಜೊತೆ ವಾಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಕ್ರೌರ್ಯ ಬಯಲು

ಇತ್ತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಹಳ ಕ್ರೂರವಾಗಿ ಹೊಡೆದು ಬಡಿದು ಮಗುವನ್ನು ಕೊಂದಿರುವುದು ಸಾಬೀತಾಗಿದೆ. ಬಾಲಕಿಯ ತಾಯಿ ಹಾಗೂ ಆಕೆಯ ಪ್ರಿಯಕರ ಮಗುವಿಗೆ ಪದೇ ಪದೇ ಹೊಡೆದಿದ್ದಾರೆ ಇದರಿಂದ ಬಾಲಕಿಯ ದೇಹದಲ್ಲಿ ಆಂತರಿಕ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಗುವಿನ ಹಣೆ ಕೆನ್ನೆ ಗಲ್ಲದ ಮೇಲೆ ಗಂಭೀರ ಗಾಯಗಳಾಗಿದ್ದು, ಗೀರಿದ ಗುರುತುಗಳಿರುವುದ್ದವು.

ಮಗುವನ್ನು ಕೊಂದು ದೇಗುಲಕ್ಕೆ ಭೇಟಿ, ಹೊಟೇಲ್‌ನಲ್ಲಿ ಊಟ

ಭಾನುವಾರ ಸಂಜೆ ಕೈಸರ್‌ ಭಾಗ್‌ನಲ್ಲಿರುವ ತಮ್ಮ ಮನೆಯಲ್ಲಿ ಬಾಲಕಿಯನ್ನು ಕೊಂದ ಆರೋಪಿಗಳು ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಹೊಟೇಲ್‌ನಲ್ಲಿ ಊಟ ಮಾಡಿ ಹುಸೈನ್‌ಗಂಜ್‌ನಲ್ಲಿರುವ ಹೊಟೇಲ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದು ಸುಮಾರು 36 ಗಂಟೆಗಳ ಕಾಲ ಕಾದು ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಂಗಳವಾರ ಬೆಳಗ್ಗಿನ ಜಾವ 3 ಗಂಟೆಗೆ ಉತ್ತರ ಪ್ರದೇಶದ ತುರ್ತು ಸಹಾಯವಾಣಿಗೆ ಕರೆ ಮಾಡಿದ ಆಕೆ ತನ್ನ ಬಿಟ್ಟು ಹೋಗಿರುವ ಗಂಡ ತನ್ನ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾಳೆ. ವಿಚಾರಣೆ ಬಳಿಕ ಆರೋಪಿಗಳು ತಾವೇ ಮಗುವನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ.

ಅಪ್ಪನ ಜೊತೆ ಹೋಗುವೆ ಎಂದ ಮಗು

ಕೊಲೆಯಾದ ಮಗು ತನ್ನ ತಾಯಿಗೆ ಪ್ರಿಯಕರ ಖರೀದಿಸಿ ನೀಡಿದ ಇಯರ್ ಫೋನ್‌ನ್ನು ಅಡಗಿಸಿಟ್ಟಿದ್ದು, ಅವುಗಳನ್ನು ಹಿಂದಿರುಗಿಸುವಂತೆ ಕೇಳಿದಾಗ ಮಗು ತಾನು ತಂದೆಯ ಬಳಿ ಹೋಗುವುದಾಗಿ ಹೇಳಿದ್ದಾಳೆ. ಇದರಿಂದ ಕ್ರೋಧಗೊಂಡ ತಾಯಿ ಮಗು ಎಂಬುದನ್ನು ನೋಡದೇ ಕೈಗೆ ಸಿಕ್ಕ ವಸ್ತುವಿನಲ್ಲಿ ಅಮಾನುಷವಾಗಿ ಹಲ್ಲೆ ಮಾಡಿದ್ದಾಳೆ. ಇದರಿಂದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಘಟನೆಯ ಬಳಿಕ ಮಹಿಳೆ ತನ್ನ ಪ್ರೇಮಿಯನ್ನು ಕರೆದುಕೊಂಡು ಊರು ಸುತ್ತಲು ಹೋಗಿದ್ದು ಮರುದಿನ ಪೊಲೀಸರಿಗೆ ದೂರು ನೀಡಿದ್ದಾಳೆ.