ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌, ವಿಡಿಯೋ ವೈರಲ್‌ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಬೆಂಗಳೂರು(ಸೆ.21):  ನಗರ ಪೊಲೀಸ್‌ ಆಯುಕ್ತರ ಕಚೇರಿ ಸಮೀಪದ ನಡು ರಸ್ತೆಯಲ್ಲೇ ತ್ರಿಕೋನ ಪ್ರೇಮ ವಿಚಾರವಾಗಿ ಮಾರಕಾಸ್ತ್ರಗಳನ್ನು ಹಿಡಿದು ಯುವಕರು ಬಡಿದಾಡಿಕೊಂಡಿರುವ ಘಟನೆ ನಡೆದಿದೆ.

ಜೆ.ಜೆ.ನಗರದ ಕಾರ್ತಿಕ್‌ ಹಾಗೂ ಶಿವಾಜಿ ನಗರದ ಪವನ್‌ ಸೇರಿದಂತೆ ಮೂವರ ಬಂಧನವಾಗಿದ್ದು, ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದರೋಡೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾತುಕತೆ ನಡೆಸುವ ನೆಪದಲ್ಲಿ ಸಂದೇಶ ಕಳುಹಿಸಿ ಆಯುಕ್ತರ ಕಚೇರಿ ಸಮೀಪದ ಬಾಳೇಕುಂದ್ರಿ ರಸ್ತೆಗೆ ಅಂತೋಣಿ ಹಾಗೂ ಯುವತಿಯನ್ನು ಕರೆಸಿ ಆರೋಪಿಗಳು ಹಲ್ಲೆ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಲಾ ಕಾರಿಗೆ ‘ಬೈಕ್‌ ವಿಮೆ’ ಮಾಡಿಸಿ ಮಾರಿದ ಭೂಪನ ಬಂಧನ..!

ವಿಡಿಯೋ ವೈರಲ್‌:

ಸಂತ್ರಸ್ತೆ ಯುವತಿಯನ್ನು ಪವನ್‌ ಹಾಗೂ ಅಂತೋಣಿ ಪ್ರೇಮಿಸುತ್ತಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಬೆಳೆದಿತ್ತು. ಆರಂಭದಲ್ಲಿ ತನ್ನ ಸಹಪಾಠಿ ಪವನ್‌ ಜತೆ ಸಂತ್ರಸ್ತೆ ಆತ್ಮೀಯವಾಗಿದ್ದಳು. ಆದರೆ ಇತ್ತೀಚೆಗೆ ಆತನಿಂದ ದೂರವಾಗಿದ್ದ ಆಕೆ, ಗೆಳೆಯ ಅಂತೋಣಿ ಜತೆ ಓಡಾಡುತ್ತಿದ್ದಳು. ಈ ಸಂಗತಿ ತಿಳಿದು ಕೆರಳಿದ ಪವನ್‌, ಅಂತೋಣಿ ಮೇಲೆ ಜಿದ್ದು ಸಾಧಿಸುತ್ತಿದ್ದ. ನಗರ ಪೊಲೀಸ್‌ ಆಯುಕ್ತರ ಕಚೇರಿ ಸಮೀಪದ ಬಾಳೇಕುಂದ್ರಿ ರಸ್ತೆಗೆ ಸೋಮವಾರ ರಾತ್ರಿ ಬರುವಂತೆ ಅಂತೋಣಿಗೆ ಇನ್‌ಸ್ಟಾಗ್ರಾಂನಲ್ಲಿ ಪವನ್‌ ಸಂದೇಶ ಕಳುಹಿಸಿದ್ದ. ಆಗ ಗೆಳತಿ ಜತೆ ಬಾಳೇಕುಂದ್ರಿ ರಸ್ತೆಗೆ ಬಂದ ಆತನ ಮೇಲೆ ಪವನ್‌ ತಂಡ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆಗೆ ಮುಂದಾಗಿದೆ. ಇದಕ್ಕೆ ಅಂತೋಣಿ ಪ್ರತಿರೋಧ ತೋರಿದ್ದಾನೆ. ಈ ಹಂತದಲ್ಲಿ ತಮ್ಮನ್ನು ಬಿಟ್ಟು ಬಿಡುವಂತೆ ಪವನ್‌ ಕಾಲಿಗೆ ಬಿದ್ದು ಯುವತಿ ಬೇಡಿ ಕೊಂಡಿದ್ದಾಳೆ. ಹೀಗಿದ್ದರೂ ದುಂಡಾವರ್ತನೆ ತೋರಿದ ಆರೋಪಿಗಳು, ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ದೋಚಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ವೈರಲ್‌ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮಂಗಳವಾರ ಸಂಜೆ ವೇಳೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.