ಶಿರಸಿ: ನೇಣು ಬಿಗಿದು ಪ್ರೇಮಿಗಳ ಆತ್ಮಹತ್ಯೆ, ಕಾರಣ..?
ಜ. 20ರಂದೇ ಮನೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು| ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ| ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಮಟಾ ರಸ್ತೆ ಬೆಣ್ಣೆಹೊಳೆ ಪ್ರದೇಶದ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ| ಪ್ರೇಮಿಗಳ ವಿವಾಹಕ್ಕೆ ಮನೆಯವರ ವಿರೋಧ|
ಶಿರಸಿ(ಜ.26): ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಟಾ ರಸ್ತೆ ಬೆಣ್ಣೆಹೊಳೆ ಪ್ರದೇಶದ ಅರಣ್ಯದಲ್ಲಿ ನಡೆದಿದೆ.
ಬೆಂಗಳೂರಿನ ಕೆವೈಸಿ ಆಪರೇಟಿಂಗ್ ಹುದ್ದೆಯಲ್ಲಿದ್ದ, ತಾಲೂಕಿನ ಬೊಮ್ಮನಕೊಡ್ಲಿನ ವಿಕ್ರಮ ಗಣೇಶ ಮಾವಿನಕುರ್ವೆ (28) ಹಾಗೂ ತೆರಕನಳ್ಳಿ ಗ್ರಾಮದ ಮೇಘನಾ ಈರಾ ನಾಯ್ಕ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ವಾಪಸಾಗಿದ್ದ ವಿಕ್ರಮ, ನಗರದ ಸಾಮ್ರಾಟ್ ಹೋಟೆಲ್ ಹಿಂಭಾಗದಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ಜ. 20ರಂದೇ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ವಾಪಸ್ ಆಗದೇ, ಮೊಬೈಲ್ ಸಹ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಿಕ್ರಮನ ತಂದೆ ಗಣೇಶ ಅವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮದುವೆಗೆ ವಿರೋಧ: ನೇಣಿಗೆ ಕೊರಳೊಡ್ಡಿದ ಯುವ ಪ್ರೇಮಿಗಳು
ಈ ಇಬ್ಬರೂ ಪ್ರೇಮಿಗಳು ಜ. 20ರಂದೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಪ್ರೇಮಿಗಳ ವಿವಾಹಕ್ಕೆ ಮನೆಯವರ ವಿರೋಧ ಇತ್ತು ಎನ್ನಲಾಗಿದೆ. ಇಬ್ಬರ ದೂರವಾಣಿಯೂ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದ ಹಿನ್ನೆಲೆಯಲ್ಲಿ ನಾಪತ್ತೆ ಆದ ಈ ಇಬ್ಬರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.